ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ನಡೆಯ ಘೋಷಣೆ ದಿನ ಮುಂದೂಡಿದ್ದೇನೆ: ಸಿ.ಎಂ. ಇಬ್ರಾಹಿಂ 

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ
Last Updated 12 ಫೆಬ್ರುವರಿ 2022, 19:46 IST
ಅಕ್ಷರ ಗಾತ್ರ

ಭದ್ರಾವತಿ: ‘ನನ್ನ ಮುಂದಿನ ರಾಜಕೀಯ ನಡೆಯ ನಿರ್ಧಾರ ಘೋಷಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇನೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಇಲ್ಲಿ ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೆಲವು ಸ್ನೇಹಿತರು, ಹಿತೈಷಿಗಳ ಸಲಹೆ, ಸೂಚನೆ ಮಾರ್ಗದರ್ಶನದ ಆಧಾರದಲ್ಲಿ ಮೇಲಿನ ನಿರ್ಧಾರಕ್ಕೆ ಬಂದಿದ್ದೇನೆ. ಭಾನುವಾರ ಹುಬ್ಬಳ್ಳಿಗೆ ತೆರಳಿ ನನ್ನ ವಿಶ್ವಾಸಿಗರ ಜತೆ ಮಾತುಕತೆ ನಡೆಸುತ್ತೇನೆ. ತದನಂತರ ಹೈದರಾಬಾದ್‌ ಕರ್ನಾಟಕ ಭಾಗದ ಮುಖಂಡರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುತ್ತೇನೆ’ ಎಂದು ಹೇಳಿದರು.

‘ಫೆ. 14ರಂದು ನನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದೆ. ನನ್ನ ಹೇಳಿಕೆ ನಂತರ ಸಿದ್ದರಾಮಯ್ಯ, ಎಚ್.ಸಿ. ಮಹಾದೇವಪ್ಪ ಸೇರಿ ಇನ್ನಿತರ ನಾಯಕರು ನನ್ನೊಂದಿಗೆ ಮಾತುಕತೆ ನಡೆಸುವ ಮೂಲಕ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಏನಾಗುತ್ತದೆಯೋ ನನಗೂ ಗೊತ್ತಿಲ್ಲ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರು ನನ್ನನ್ನು ಭೇಟಿ ಮಾಡಿಲ್ಲ. ಕೇವಲ ಸುದ್ದಿಮಾಧ್ಯಮದಲ್ಲಿ ಭೇಟಿ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಕುರಿತು ನಾನು ಏನೂ ಹೇಳುವುದಿಲ್ಲ. ಆದರೆ, ಯಾರಿಗಾಗಿ ನಾನು ಕಾಂಗ್ರೆಸ್ ಸೇರಿದ್ದೆನೋ ಅವರೊಂದಿಗೆ ಮಾತ್ರ ನನ್ನ ಸಹವಾಸ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಕೆಲವು ವಿಷಯಗಳಲ್ಲಿ ಅಸಮಾಧಾನ ಇದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನನ್ನ ಸ್ನೇಹಿತರು ಉತ್ಸಾಹ ತೋರಿದ್ದಾರೆ. ಇಷ್ಟಕ್ಕೇ ನಾನು ಬದಲಾಗಿದ್ದೇನೆ ಎಂದು ಭಾವಿಸುವುದು ಸರಿಯಲ್ಲ. ನನ್ನ ನಿರ್ಧಾರ ನನ್ನ ಕೈಯಲಿದೆ’ ಎಂದರು.

‘ದೇವೇಗೌಡರ ಕುರಿತಾಗಿ ಅಪಾರ ಗೌರವ ಇದೆ. ಅವರ ಸಲಹೆ, ಸೂಚನೆ ಸಹಕಾರ ನನಗಿದೆ. ಭದ್ರಾವತಿ ಕ್ಷೇತ್ರಕ್ಕೆ ಶಾರದಾ ಅಪ್ಪಾಜಿ ಅವರು ಇದ್ದಾರೆ. ಅವರನ್ನು ಮತ್ತೆ ಭೇಟಿಯಾಗಿಲ್ಲ. ಇನ್ನೂ ಸಮಯ ಇದೆ. ಕಾದು ನೋಡೋಣ’ ಎಂದು ಹೇಳಿದರು.

‘ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಶಾರದಾ ಪೂರ‍್ಯಾನಾಯ್ಕ ಅವರೇ ನಿಲ್ಲಬಹುದು. ಅಲ್ಲಿ ವಾತಾವರಣ ಅವರ ಪರವಾಗಿದೆ. ಅಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅದು ಅವರಿಗೆ ಅನುಕೂಲವಾಗಬಹುದು. ಸೂಕ್ತ ನಿರ್ಧಾರದ ನಂತರ ಕ್ಷೇತ್ರಕ್ಕೆ ಬರುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT