ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಸ್ಫೋಟಕ್ಕೆ ನಲುಗಿದ ಗ್ರಾಮಗಳು

450 ಮೀಟರ್‌ವರೆಗೂ ಸಿಡಿದ ಕಲ್ಲಿನ ಚೂರುಗಳು, ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು
Last Updated 12 ಮೇ 2022, 4:53 IST
ಅಕ್ಷರ ಗಾತ್ರ

ಆನವಟ್ಟಿ: ತೆವರೆತೆಪ್ಪ–ವಡ್ಡಿಗೇರಿ ಸಮೀಪದ ಕಲ್ಲು ಕ್ವಾರಿಯಲ್ಲಿ ತೀವ್ರತೆ ಇರುವ ಸ್ಫೋಟಕಗಳನ್ನು ಬಳಸಿದ ಪರಿಣಾಮ ಕಲ್ಲಿನ ಚೂರುಗಳು 450 ಮೀಟರ್‌ವರೆಗೂ ಸಿಡಿದಿದ್ದು, ವಡ್ಡಿಗೇರಿ ಗ್ರಾಮದ ಪಿಯು ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ.

ಮಾಹಿತಿ ನೀಡದೇ ಸ್ಫೋಟ ನಡೆಸಲಾಗಿದೆ. ಇದರಿಂದ ಕಲ್ಲುಗಳು ಗ್ರಾಮದ ಒಳಗೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವಡ್ಡಿಗೇರಿ ಸುತ್ತಲ ಗ್ರಾಮಗಳಾದ ಬೆಲವಂತನಕೊಪ್ಪ, ಎಣ್ಣೆಕೊಪ್ಪ, ತೆವರೆತೆಪ್ಪ ಗ್ರಾಮದ ಜನರು ದೂರಿದ್ದಾರೆ.

ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡ ಶಬ್ದ ಸುಮಾರು 4 ಕಿ.ಮೀ ವರೆಗೂ ಕೇಳಿಸಿದೆ. ಭೂಮಿ ಕಂಪಿಸಿದೆ. ಮನೆಯ ತಗಡುಗಳು ಅಲುಗಾಡಿವೆ. ಕೆಲ ಹೊತ್ತು ಗ್ರಾಮಗಳಲ್ಲಿ ಆತಂಕದ ವಾತವರಣ ಸೃಷ್ಟಿಯಾಗಿತ್ತು ಎಂದು ಗ್ರಾಮಸ್ಥರು ಬುಧವಾರ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.

‘ಕಲ್ಲು ಗಾಣಿಗಾರಿಕೆ ನಡೆಯುವ ಪ್ರದೇಶದ ಸಮೀಪದಲ್ಲೇ ಸ್ಮಶಾನ ಭೂಮಿ ಇದೆ. ಶವಸಂಸ್ಕಾರಕ್ಕೆ ಗ್ರಾಮಸ್ಥರು ಬರುತ್ತಾರೆ. ರೈತರ ಜಮೀನುಗಳಿವೆ. ಜಾನುವಾರು ಮೇಯಿಸಲು ರೈತರು ಹೋಗುತ್ತಾರೆ. ಗುಡ್ಡದ ಸುತ್ತಲ ಗ್ರಾಮಗಳ ಮಕ್ಕಳು ಆಟವಾಡಲು ತೆರಳುತ್ತಾರೆ. ಕಲ್ಲುಕ್ವಾರಿ ಪರವಾನಗಿ ಪಡೆದ ಮಾಲೀಕರು ಯಾವುದೇ ಮಾಹಿತಿ ನೀಡದೆ ನಿಯಮ ಮೀರಿ ಹೆಚ್ಚು ತೀವ್ರತೆ ಇರುವ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಅಧಿಕಾರಿಗಳು ಪರಿಶೀಲಿಸಬೇಕು. ಗ್ರಾಮಸ್ಥರ ಸಮಸ್ಯೆ ಆಲಿಸಬೇಕು’ ಎಂದು ತೆವರೆತೆಪ್ಪ ವಡ್ಡಿಗೇರಿ ಮುಖಂಡ ಜಗದೀಶಪ್ಪ ಅಗ್ರಹಿಸಿದರು.

‘ಕಲ್ಲುಗಣಿಗಾರಿಕೆ ಮಾಡುವ ಮಾಲೀಕರು ಪರವಾನಗಿ ಹೊಂದಿದ್ದಾರೆ. ಸ್ಫೋಟಕ ಬಳಸಲು ಅನುಮತಿಯೂ ಇದೆ. ಆದರೆ, ಸ್ಫೋಟಕಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬ ಮಾಹಿತಿ ಕೊರೆತೆಯಿಂದ ಈ ಘಟನೆ ಸಂಭವಿಸಿದೆ. ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಅವರಿಂದ ಉತ್ತರ ಬರುವವರೆಗೂ ಗಣಿಗಾರಿಕೆ ನಿಲ್ಲಿಸಬೇಕು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಶಶಿಕಲಾ, ವಿದ್ಯಾ ಕ್ವಾರಿ ಮಾಲೀಕ ಉಲ್ಲಾಸ ಶಟ್ಟಿ ಅವರಿಗೆ ಸೂಚಿಸಿದರು.

ಕಲ್ಲು ಗಣಿಗಾರಿಕೆ ನಡೆಯುವ ಪ್ರದೇಶದ ಸರ್ವೆ ಕಾರ್ಯ ಕೈಗೊಳ್ಳಬೇಕು. ಕ್ವಾರಿಗಳ ಹತ್ತಿರ ಗ್ರಾಮಗಳು, ದೇವಸ್ಥಾನಗಳಿವೆ, ಗಣಿಗಾರಿಕೆಯ ವಿಪರೀತ ಶಬ್ದಕ್ಕೆ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಇಲಾಖೆಯ ಉನ್ನತ ಅಧಿಕಾರಿಗಳು ಸಮಸ್ಯೆ ಆಗಲಿಸಬೇಕು. ಗ್ರಾಮಕ್ಕೆ ತಕ್ಷಣ ಭೇಟಿ ನೀಡಬೇಕು. ಪರಿಸರಕ್ಕೆ, ಗ್ರಾಮಸ್ಥರಿಗೆ ತೊಂದರೆ ಆಗದಂತೆ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕು. ಗಣಿಗಾರಿಕೆ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ದೇವರಾಜ ಬೆಲವಂತನಕೊಪ್ಪ, ಕುಬೇರಪ್ಪ, ಮಂಜಪ್ಪ, ಬಸವಣ್ಯಪ್ಪ ಉಪ್ಪಾರ, ಕಲ್ಲಪ್ಪ, ಸುರೇಶಪ್ಪ, ಅಶೋಕ ಮತ್ತಿತರರು ಎಚ್ಚರಿಕೆ ನೀಡಿದರು.

ಪಿಎಸ್‌ಐ ರಾಜುರೆಡ್ಡಿ, ಪಿಡಿಒ ರವಿಕುಮಾರ, ಗ್ರಾಮ ಲೆಕ್ಕಿಗರಾದ ಮಲ್ಲಪ್ಪ, ಅಪರ್ಣಾ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT