ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಮುಚ್ಚಿ ನಾಗರಿಕರನ್ನು ರಕ್ಷಿಸಿ

ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ
Last Updated 7 ನವೆಂಬರ್ 2021, 4:12 IST
ಅಕ್ಷರ ಗಾತ್ರ

ಭದ್ರಾವತಿ: ‘ಹಲವು ದಶಕಗಳಿಂದ ನಡೆದಿರುವ ಯುಜಿಡಿ ಕಾಮಗಾರಿ ಮುಕ್ತಾಯವಾಗಿಲ್ಲ. ತೆರೆದ ಗುಂಡಿಗಳ ಮುಚ್ಚುವಿಕೆ ಕಾರ್ಯ ಸಹ ಅಸಮರ್ಪಕವಾಗಿದೆ. ಕೂಡಲೇ ಅವುಗಳನ್ನು ಮುಚ್ಚಿ ನಾಗರಿಕರನ್ನು ರಕ್ಷಿಸಿ’ ಎಂದು ಸದಸ್ಯರು ಶನಿವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಥಮ ಸಭೆಯಲ್ಲಿ ಸದಸ್ಯರು ಒಕ್ಕೂರಲಿನಿಂದ ಯುಜಿಡಿ ಕೆಲಸ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿ ಬಿಗಿ ಕ್ರಮಕ್ಕೆ ಒತ್ತಾಯಿಸಿದರು.

ಸದಸ್ಯ ಬಿ.ಕೆ. ಮೋಹನ್ ಅವರು ಐದನೇ ವಾರ್ಡ್‌ನಲ್ಲಿ ನಡೆದಿರುವ ಅಸಮರ್ಪಕ ಕಾಮಗಾರಿ ಕುರಿತು ಪ್ರಸ್ತಾಪಿಸಿದರು.

ಸದಸ್ಯ ಬಿ. ಮಂಜುನಾಥ ಚೇಂಬರ್ ಗುಂಡಿಗಳ ಆಳ ಹೆಚ್ಚಿದ್ದು, ಇದರಿಂದ ಮಳೆಗಾಲದಲ್ಲಿ ನೀರು ಹೊರಬಂದು ಸಂಚಾರಕ್ಕೆ ಕಷ್ಟವಾಗಿದೆ ಎಂದರು.

ಹಿರಿಯ ಸದಸ್ಯ ಬಿ.ಟಿ. ನಾಗರಾಜ್ ಮಾತನಾಡಿ, ‘ಜನರ ಪ್ರಾಣ ತೆಗೆಯುವ ಮುನ್ನ ಗುಂಡಿಗಳನ್ನು ಮುಚ್ಚುವತ್ತ ಗಮನಿಸಿ. ಇಲ್ಲವಾದರೆ ನಮ್ಮನ್ನು ಆಯ್ಕೆ ಮಾಡಿದ ಜನ ಶಪಿಸುತ್ತಾರೆ. ಇದಕ್ಕೆ ಅಸ್ಪದ ಕೊಡಬೇಡಿ’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಬಿ.ಕೆ. ಸಂಗಮೆಶ್ವರ, ಎಂಜಿನಿಯರ್ ದರ್ಶನ್ ಅವರಿಗೆ ಈ ಕುರಿತು ಗಮನ ಹರಿಸುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ‘ಯುಜಿಡಿ ಕಾಮಗಾರಿ ಕಳಪೆಯಾಗಿದ್ದು, ಇದಕ್ಕೆ ಹಿಂದಿನ ಗುತ್ತಿಗೆದಾರರುನೇರ ಹೊಣೆಗಾರರಾಗಿದ್ದಾರೆ. ಅವರನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈಗಿರುವ ಮೊತ್ತದಲ್ಲಿ ಚೇಂಬರ್ ಮುಚ್ಚಳ ಹಾಕಲು ಸರ್ಕಾರದ ಅನುದಾನದ ಅಗತ್ಯವಿದೆ’ ಎಂದರು.

‘ಸರ್ಕಾರದಿಂದ ನೆರವು ಸಿಗುವ ತನಕ ಕಾಯಲು ಆಗುವುದಿಲ್ಲ. ಈ ಕೂಡಲೇ ಕೆಲಸ ನಡೆಯಬೇಕು. ಇದಕ್ಕೆ ಅಗತ್ಯ ಇರುವ ನೆರವನ್ನು ಶಾಸಕರ ನಿಧಿಯಿಂದ ಕೊಡಲಾಗುವುದು’ ಎಂದು ಶಾಸಕರು ಸಭೆಗೆ ತಿಳಿಸಿ ವಿಷಯಕ್ಕೆ ತೆರೆ ಎಳೆದರು.

ಪೌರಾಯುಕ್ತ ಪರಮೇಶ್ವರ್, ಉಪಾಧ್ಯಕ್ಷ ಚನ್ನಪ್ಪ, ನಗರಸಭೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT