ಹೊಸನಗರ: ತಾಲ್ಲೂಕಿನಲ್ಲಿ ಹಾದು ಹೋಗುವ ಬೈಂದೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ- 766 ‘ಸಿ’ ವಿಸ್ತರಣೆ ಕಾಮಗಾರಿಗೆ ಸಾವಿರಾರು ಮರಗಳ ಕಡಿತಲೆ ಬಗ್ಗೆ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಮಾವಿನಕೊಪ್ಪದಿಂದ ಆಡುಗೋಡಿವರೆಗೆ ಈ ಹೆದ್ದಾರಿಯ ಬೈಪಾಸ್ ಸಾಗಲಿದ್ದು, 3,000ಕ್ಕೂ ಅಧಿಕ ಮರಗಳು ನಾಶವಾಗಲಿವೆ. ಅರಣ್ಯ ಪ್ರದೇಶದಲ್ಲಿ ರಸ್ತೆ ಹಾದು ಹೋಗುವುದರಿಂದ 18.84 ಹೆಕ್ಟೇರ್ ಅರಣ್ಯಕ್ಕೆ ಹಾನಿಯಾಗಲಿದೆ. ಇದು ಜನರ ನಿದ್ದೆಗೆಡಿಸಿದ್ದು ಅರಣ್ಯನಾಶ ಹಾಗೂ ಅತ್ಯಮೂಲ್ಯ ಮರಗಳ ರಕ್ಷಣೆಯ ಧ್ವನಿ ಕೇಳಿಬರುತ್ತಿದೆ.
ಪಟ್ಟಣದ ಹೊರವಲಯದ ಮಾವಿನಕೊಪ್ಪದಿಂದ ಸುತ್ತಾ ಗ್ರಾಮದ ಮೂಲಕ ಆಡುಗೋಡಿವರೆಗಿನ ಅರಣ್ಯ ಪ್ರದೇಶದಲ್ಲಿ ಬೈಪಾಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ, ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ. ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೈಪಾಸ್ ವಿಸ್ತರಣೆ ಕುರಿತಂತೆ ಹೆದ್ದಾರಿ ಪ್ರಾಧಿಕಾರವು ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಅದರಂತೆ ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೂ ಈ ಕುರಿತ ಪ್ರಸ್ತಾವನೆ ಸಲ್ಲಿಸಿದೆ.
ಉದ್ದೇಶಿತ ಬೈಪಾಸ್ ಗಂಗನಕೊಪ್ಪ, ಸುತ್ತಾ, ಮಣಸಟ್ಟೆ, ಎಲ್. ಗುಡ್ಡೆಕೊಪ್ಪ, ಹೆಬ್ಬುರುಳಿ, ಹೊಸೂರು, ಆಡುಗೋಡಿ ಗ್ರಾಮಗಳ ಮೂಲಕ ಸಾಗಲಿದೆ. ಈ ವ್ಯಾಪ್ತಿಯ 18.84 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ 2.902 ಹೆಕ್ಟೇರ್ ಎಂಪಿಎಂಗೆ ಸೇರಿದೆ. ಇನ್ನುಳಿದಂತೆ ಮೀಸಲು ಅರಣ್ಯ, ಸಂರಕ್ಷಿತ ಅರಣ್ಯ, ಡೀಮ್ಡ್ ಅರಣ್ಯ ಇರುವುದುದಾಗಿ ಸ್ಥಳ ಪರಿಶೀಲನೆ ವರದಿಯಲ್ಲಿ ತಿಳಿಸಲಾಗಿದೆ.
‘ಹೆದ್ದಾರಿ ನಿರ್ಮಾಣದ ನೆಪದಲ್ಲಿ ಸಮೃದ್ಧ ಕಾಡಿಗೆ ಕೊಡಲಿ ಹಾಕುವ ಪ್ರಕ್ರಿಯೆ ಸದ್ದಿಲ್ಲದೇ ನಡೆಯುತ್ತಿದೆ. ಅನವಶ್ಯಕ ಬೈಪಾಸ್ ನಿರ್ಮಾಣ ಕಾಮಗಾರಿ ಮಾಡಿ, ಕೋಟಿಗಟ್ಟಲೆ ಲೂಟಿ ಹೊಡೆಯುವ ತಂತ್ರ ಇದಾಗಿದೆ’ ಎಂದು ಪರಿಸರ ಹೋರಾಟಗಾರ ಅಖಿಲೇಶ ಚಿಪ್ಪಳಿ ಆರೋಪಿಸಿದ್ದಾರೆ.
ಬೈಪಾಸ್ ನಿರ್ಮಾಣ ಪ್ರಸ್ತಾವನೆಗೆ ಕೇಂದ್ರ ಹಸಿರು ನಿಶಾನೆ ತೋರುವುದು ಬಾಕಿ ಇದೆ. ರಸ್ತೆ ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರ ಸನ್ನದ್ಧವಾಗಿದ್ದು, ತರಾತುರಿಯಲ್ಲಿ ಕಾಮಗಾರಿ ನಡೆಸಲು ಉತ್ಸುಹಕವಾಗಿದೆ ಎಂದು ದೂರಿದ್ದಾರೆ.
ಬೈಪಾಸ್ ಏಕೆ: ಪ್ರಸ್ತುತ ಹೆದ್ದಾರಿ ಮಾರ್ಗದಲ್ಲಿ ಮಾವಿನಕೊಪ್ಪದಿಂದ ಆಡುಗೋಡಿಗೆ 30.5 ಕಿ.ಮೀ ದೂರ ಇದೆ. ಇದನ್ನು ಕ್ರಮಿಸಲು ಒಂದು ಗಂಟೆ ಕಾಲ ತಗುಲುತ್ತದೆ. ಬೈಪಾಸ್ ಮೂಲಕ ಮಾವಿನಕೊಪ್ಪದಿಂದ ಆಡುಗೋಡಿಗೆ ನೇರ ಮಾರ್ಗ ಕಲ್ಪಿಸಿದರೆ 13.8 ಕಿ.ಮೀ ಕಡಿಮೆ ಆಗುತ್ತದೆ. ಇದನ್ನು ಕ್ರಮಿಸಲು ಕೇವಲ 15 ನಿಮಿಷ ಸಾಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಂದೇ ಮಾರ್ಗ ಸಾಕು: ‘ಸದ್ಯದ ಮಾರ್ಗದಲ್ಲಿ ಹೆಚ್ಚು ವಾಹನ ದಟ್ಟಣೆ ಇಲ್ಲ. ಹೀಗಿರುವಾಗ ಬೈಪಾಸ್ ಯಾಕೆ ಬೇಕು, ಇದರಿಂದ ಸಾವಿರಾರು ಮರಗಳು ಬಲಿಯಾಗುತ್ತವೆ. ಹೆಕ್ಟೇರ್‌ಗಟ್ಟಲೆ ಅರಣ್ಯ ನಾಶವಾಗುತ್ತದೆ. ಅವಶ್ಯಕತೆಯೇ ಇಲ್ಲದ ರಸ್ತೆ ಮಾರ್ಗಕ್ಕೆ ಸಾವಿರಾರು ಮರಗಳ ಬಲಿ ಎಷ್ಟು ಸರಿ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಮಾವಿನಕೊಪ್ಪ ಆಡುಗೋಡಿವರೆಗಿನ ಬೈಪಾಸ್ ಕಾಮಗಾರಿ ಸ್ಥಳ ಪರಿಶೀಲನೆ ನಡೆದು ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರದ ಹಸಿರು ನಿಶಾನೆ ಬಂದ ನಂತರ ಮರಗಳ ಗಣತಿ ಆರಂಭವಾಗಲಿದೆ.
ನಿಂಗಪ್ಪ, ಎಇಇ, ಹೆದ್ದಾರಿ ಪ್ರಾಧಿಕಾರ, ಶಿವಮೊಗ್ಗ
ಬೈಪಾಸ್‌ನಿಂದ ಸಂಚಾರ ಅವಧಿ ಕಡಿಮೆಯಾಗಲಿದೆ ಎಂಬುದು ಬಾಲಿಷವಾದುದು. 13.8 ಕಿ.ಮೀ. ಕಡಿಮೆ ಮಾಡಲು ₹ 312 ಕೋಟಿ ಹಣ ವ್ಯಯಿಸಲಿರುವುದು ಹಣದ ಅವ್ಯವಹಾರದ ಸಂಶಯಕ್ಕೆ ಕಾರಣವಾಗಿದೆ.
ಅಖಿಲೇಶ್ ಚಿಪ್ಪಳಿ, ಪರಿಸರ ಹೋರಾಟಗಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.