ದಾರಿಗಾಗಿ ಅಂತ್ಯಕ್ರಿಯೆ ನಡೆಸದೇ ಪ್ರತಿಭಟನೆ

ಆನಂದಪುರ: ಸಮೀಪದ ಗೌತಮಪುರ ಗ್ರಾಮದ ಮನೆಯೊಂದರಲ್ಲಿ ವೃದ್ಧೆಯೊಬ್ಬರು ಮೃತಪಟ್ಟು ಎರಡು ದಿನ ಕಳೆದಿದ್ದು, ಶವ ಸಾಗಿಸಲು ದಾರಿಯಿಲ್ಲದ ಕಾರಣ ಕುಟುಂಬದ ಸದಸ್ಯರು ಶವಸಂಸ್ಕಾರಕ್ಕೆ ಮುಂದಾಗದೆ ಪ್ರತಿಭಟಿಸುತ್ತಿದ್ದಾರೆ.
ಗ್ರಾಮದ ದೇವರಾಜ್ ಅವರ ತಾಯಿ ರಾಜಮ್ಮ (70) ಶುಕ್ರವಾರ ನಿಧನರಾಗಿದ್ದು, ಶವ ಸಾಗಿಸಿ ಅಂತ್ಯಕ್ರಿಯೆ ಮಾಡಲು ದಾರಿಯಿಲ್ಲದೆ ಪರದಾಡುತ್ತಿದ್ದಾರೆ.
25 ವರ್ಷಗಳ ಹಿಂದೆ 2 ಕುಟುಂಬಗಳು ಗ್ರಾಮದಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿವೆ. ಈ ಎರಡೂ ಕುಟುಂಬದವರು ದಿನನಿತ್ಯದ ಕೆಲಸಕ್ಕಾಗಿ ಪಕ್ಕದ ಮನೆಯ ಹಿತ್ತಲನ್ನು ಅವಲಂಬಿಸಿದ್ದಾರೆ. ದೇವರಾಜ್ ಹಾಗೂ ಬೇಲಿ ಹಾಕಿರುವ ಗಂಗಾಧರ್ ಕುಟುಂಬದ ನಡುವೆ ಪಂಚಾಯಿತಿ ಮಾಡಿ ದಾರಿ ಬೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೂ ಇಲ್ಲಿಯವರೆಗೆ ದಾರಿ ಬಿಟ್ಟುಕೊಡದೆ ಬೆಲಿ ಹಾಕಲಾಗಿದೆ. ಇದು ಗ್ರಾಮ ಠಾಣಾಗೆ ಸೇರಿದ ಜಾಗವಾಗಿದ್ದರೂ ದಾರಿಗಾಗಿ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆಯುತ್ತಿದೆ.
ದಾರಿ ಮಾಡಿಕೊಡದಿದ್ದರೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂಬುದು ದೇವರಾಜ್ ಕುಟುಂಬದವರ ವಾದವಾಗಿದೆ. ‘ಈಗಲೇ ಸರಿಯಾದ ದಾರಿ ಮಾಡಿಕೊಟ್ಟರೆ ಮುಂದಿನ ಕ್ರಿಯೆಗಳನ್ನು ಮಾಡುತ್ತೇವೆ. ಒತ್ತಾಯ ಪೂರ್ವಕವಾಗಿ ಅಂತ್ಯಕ್ರಿಯೆಗೆ ಮುಂದಾದರೆ ನಾವು ಸಹ ವಿಷ ಕುಡಿದು ಪ್ರಾಣ ಕಳೆದುಕೊಳ್ಳುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸತತ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
‘ವಿವಾದವನ್ನು ಶಾಂತ ರೀತಿಯಲ್ಲಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ಎರಡೂ ಕುಟುಂಬಗಳ ಮನವೊಲಿಸುವ ಕೆಲಸ ಮುಂದುವರಿಸಿದ್ದೇವೆ. ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಪಂಚಾಯಿತಿಯಲ್ಲಿ ಭಾನುವಾರ ವಿಶೇಷ ಸಭೆ ಕರೆಯಲಾಗಿದೆ. ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ದಾಸನ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.