ಬುಧವಾರ, ಮೇ 25, 2022
29 °C
ಆಧುನಿಕತೆಯ ಹೆಸರಿನಲ್ಲಿ ತಲೆ ಎತ್ತಿದ ಕಚೇರಿ, ಮಳಿಗೆಗಳು; ಐದು ಎಕರೆ ಜಾಗ ಒತ್ತುವರಿ

ಕಿಷ್ಕಿಂಧೆಯಾದ ಸಂತೆ ಮಾರುಕಟ್ಟೆ: ಮಾರಾಟದ್ದೇ ಚಿಂತೆ

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಏಳೆಂಟು ದಶಕಗಳ ಇತಿಹಾಸ ಹೊಂದಿರುವ ಇಲ್ಲಿನ ಹಳೇನಗರ ಸಂತೆ ಮೈದಾನ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎನ್ನುವಂತಿದೆ.

ಆಧುನಿಕತೆಯ ಹೆಸರಿನಲ್ಲಿ ಇದ್ದ ಜಾಗದಲ್ಲಿ ನಗರಸಭೆ ಕಚೇರಿ, ಇಂದಿರಾ ಕ್ಯಾಂಟೀನ್, ದೊಡ್ಡ ನೀರಿನ ಟ್ಯಾಂಕ್ ನಿರ್ಮಾಣದ ಜತೆಗೆ ಮಾರುಕಟ್ಟೆ ಹೆಸರಿನಲ್ಲಿ ಮಳಿಗೆಗಳು ನಿರ್ಮಾಣವಾದ ಕಾರಣ ಐದು ಎಕರೆ ಇದ್ದ ಜಾಗ ಈಗ ಕಿಷ್ಕಿಂಧೆಯಾಗಿದೆ. ಜನರ ಪಾಲಿನ ಭಾನುವಾರದ ಸಂತೆಯಾಗಿ ಮಾತ್ರ ಉಳಿದಿದೆ.

‘ಇದ್ದ ಐದು ಎಕರೆ ಜಾಗ ಒತ್ತುವರಿ ಆಗಿರುವುದರ ಜತೆಗೆ ನಗರಸಭೆ ಆದಾಯ ಮೂಲ ಹೆಚ್ಚು ಮಾಡಿಕೊಳ್ಳುವ ಹೆಸರಿನಲ್ಲಿ ನಿರ್ಮಾಣವಾದ ವಾಣಿಜ್ಯ ಸಂಕೀರ್ಣ ಕಟ್ಟಡ, ಸಗಟು ತರಕಾರಿ ಮಾರುಕಟ್ಟೆ ಕಟ್ಟಡಗಳು ಸಂತೆಯ ಹಿಂದಿನ ಗತವೈಭವ ಮರೆಮಾಚಿಸಿವೆ’ ಎನ್ನುತ್ತಾರೆ ಸಂತೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ಬಿ.ಎನ್.ರಾಜು.

‘ರೈತರ ಸಂತೆ ಹೆಸರಿನ ಯೋಜನೆ ಬಂದ ಸಂದರ್ಭದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಸಂತೆ ಮಾರುಕಟ್ಟೆ ಸ್ಥಳಾಂತರವಾಗುತ್ತದೆ ಎಂಬ ಕೂಗು ಹೆಚ್ಚಾದ ಬೆನ್ನಲ್ಲೇ ಈಗಿನ ಸಂತೆ ನಡೆಯುವ ಸ್ಥಳದ ನಿರ್ಲಕ್ಷ್ಯ ಪ್ರಾರಂಭವಾಗಿತ್ತು’ ಎನ್ನುತ್ತಾರೆ ಹೊಸಮನೆ ಗೋಪಾಲ್.

‘ಈ ಯೋಜನೆ ಅನುಷ್ಠಾನ ಆಗಲಿಲ್ಲ. ಬದಲಾಗಿ ಇರುವ ಸಂತೆ ಜಾಗದಲ್ಲಿ ಇನ್ನಿಲ್ಲದ ಕಟ್ಟಡಗಳ ನಿರ್ಮಾಣವಾಗಿ ಅದನ್ನು ಮತ್ತಷ್ಟು ಸಣ್ಣದಾಗಿಸಿದ್ದೇ ನಗರಸಭೆ ಅಭಿವೃದ್ಧಿ ಮಂತ್ರ ಎನ್ನುವಂತಾಗಿದೆ’ ಎಂದು ಬೇಸರಿಸಿದರು ಅವರು.

‘ಸದ್ಯ ನಡೆಯುವ ಭಾನುವಾರದ ಸಂತೆಗೆ ಕೊರೊನಾ ಸಂಕಷ್ಟದ ಎರಡು ವರ್ಷ ಗ್ರಹಣ ಹಿಡಿಸಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಸಂತೆ ವಹಿವಾಟಿನ ಸಂಭ್ರಮ ಹೊಸಮನೆ ರಸ್ತೆಯ ಇಕ್ಕೆಲವನ್ನೂ ಆಕ್ರಮಿಸಿಕೊಂಡು ಮುನ್ನಡೆದದ್ದು ಮಾತ್ರ ಸತ್ಯ’ ಎಂದು ಹಳೇನಗರದ ಹಿರಿಯರಾದ ನಾಗರಾಜ್ ಗತವೈಭವ ನೆನಪಿಸಿದರು.

ಹಲವೆಡೆ ಸಂತೆ: ವಾರಕ್ಕೊಮ್ಮೆ ನಡೆಯುವ ಸಂತೆಯ ಹೊರತಾಗಿ ನಗರದಲ್ಲಿ ಪ್ರತಿದಿನ ಬಸವೇಶ್ವರ ವೃತ್ತ, ಬಿ.ಎಚ್. ರಸ್ತೆ ತಿಮ್ಮಯ್ಯ ಮಾರುಕಟ್ಟೆ, ಜನ್ನಾಪುರ ಭಾಗದಲ್ಲಿನ ವಾಣಿಜ್ಯ ಬೀದಿಯ ವ್ಯಾಪಾರ ಸಂತೆಯನ್ನೇ ನೆನಪು ಮಾಡಿಸುತ್ತದೆ.
ಬಸವೇಶ್ವರ ವೃತ್ತದಲ್ಲಿನ ಪ್ರತಿದಿನ ನಡೆಯುವ ವಹಿವಾಟು ವಾರದ ಕಡೆಯ ಎರಡು ದಿನ ನಡೆಯುವ ಮಿನಿ ಸಂತೆ ನಾಗರಿಕರ ಪಾಲಿಗೆ ವರವಾಗಿದೆ. ಅಲ್ಲಿಯೂ ನಿರ್ಮಿಸಿರುವ ಮಳಿಗೆಗಳ ಬಳಿ ವ್ಯಾಪಾರಸ್ಥರು, ನಾಗರಿಕರು ಹೋಗದ ಕಾರಣ ಬೀದಿ ಬದಿಯ ವ್ಯಾಪಾರವೇ ಜೋರು ಎನಿಸಿದೆ.

ರೈತರ ಸಂಕಷ್ಟ: ವಾರದ ಸಂತೆ ನಡೆಯುವ ಸ್ಥಳದಲ್ಲಿ ಮುಂಚಿನಂತೆ ರೈತರು ಹೊರಜಿಲ್ಲೆ, ತಾಲ್ಲೂಕಿನಿಂದ ಬಂದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ದೃಶ್ಯ ಕಾಣಸಿಗುತ್ತಿಲ್ಲ.

‘ಸಂತೆ ಎಂದರೆ ಎಲ್ಲ ವ್ಯವಹಾರ. ಆದರೆ ಇತ್ತೀಚಿನ ಮಾಲ್ ಹಾವಳಿಯಿಂದಾಗಿ ಅದು ಕಳೆಗುಂದಿದೆ’ ಎನ್ನುತ್ತಾರೆ ಪರಮೇಶ್.

ಸೌಕರ್ಯ ಕೊರತೆ: ಸಂತೆ ಮೈದಾನಕ್ಕೆ ಏಳೆಂಟು ದಶಕದ ನಂಟಿದ್ದರೂ ಅಲ್ಲಿನ ಮೂಲಸೌಕರ್ಯ ಸಮಸ್ಯೆ ಮಾತ್ರ ಇನ್ನು ಪರಿಹಾರವಾಗಿಲ್ಲ. ಚರಂಡಿ ಸಮಸ್ಯೆ, ಹಂದಿ, ನಾಯಿಗಳ ಹಾವಳಿ ತಪ್ಪಿಲ್ಲ.

ಕುಡಿಯುವ ಶುದ್ಧ ನೀರಿನ ಘಟಕವಿಲ್ಲ. ಇಂದಿರಾ ಕ್ಯಾಂಟೀನ್, ನಗರಸಭೆ ಕಚೇರಿ ಇರುವ ಕಾರಣ ಜನದಟ್ಟಣೆಯಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಒತ್ತುವರಿಯೂ ಹೆಚ್ಚಿದೆ ಎನ್ನುತ್ತಾರೆ ನಾಗರಾಜ್.

 

ಸಂತೆ ಮೈದಾನ ವಿಷಯವಾಗಿ ಅನೇಕ ವರ್ಷಗಳ ಕಾಲ ಹೋರಾಟ ನಡೆಸಿದರೂ ಜನರ ಸ್ಪಂದನ ಸಿಗಲಿಲ್ಲ. ಒಂದಿಷ್ಟು ಆಧುನಿಕ ಸ್ಪರ್ಶ ಸಿಕ್ಕಿದರೂ ಅದು ಉಪಯೋಗಕ್ಕೆ ಬಾರದಂತಾಗಿದೆ.

ಬಿ.ಎನ್.ರಾಜು, ಸಂತೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.