ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣ ವೃತ್ತಕ್ಕೆ ನಾಮಕರಣ: ಸದಸ್ಯರ ಧರಣಿ

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ
Last Updated 1 ಮೇ 2022, 6:16 IST
ಅಕ್ಷರ ಗಾತ್ರ

ಸಾಗರ: ವಿರೋಧ ಪಕ್ಷದ ಸದಸ್ಯರ ಗಮನಕ್ಕೆ ಬಾರದಂತೆ ಮುಖ್ಯ ಬಸ್ ನಿಲ್ದಾಣದ ವೃತ್ತಕ್ಕೆ ನಾಮಕರಣ ಮಾಡುವ ಕೆಲಸ ನಡೆದಿದೆ ಎಂದು ಆರೋಪಿಸಿ ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ಎನ್. ಲಲಿತಮ್ಮ ಧರಣಿ ಸತ್ಯಾಗ್ರಹ ನಡೆಸಿದರು.

‘ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಿಲ್ಲೆಯ ಮೊದಲ ಸಂಸದ ಕೆ.ಜಿ. ಒಡೆಯರ್ ಅವರ ಹೆಸರನ್ನು ಮುಖ್ಯ ಬಸ್ ನಿಲ್ದಾಣದ ವೃತ್ತಕ್ಕೆ ಇಡಲು ತೀರ್ಮಾನಿಸಲಾಗಿದೆ. ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ವಿರೋಧ ಪಕ್ಷದ ಸದಸ್ಯರ ಗಮನಕ್ಕೆ ಬಾರದಂತೆ ಸಭೆಯಲ್ಲಿ ಚರ್ಚೆಯನ್ನೇ ನಡೆಸದೆ ಈ ತೀರ್ಮಾನ ತೆಗೆದುಕೊಂಡಿರುವುದು ಎಷ್ಟು ಸರಿ’ ಎಂದು ಲಲಿತಮ್ಮ ಪ್ರಶ್ನಿಸಿದರು.

ಬಿಜೆಪಿ ಸದಸ್ಯರಾದ ಕೆ.ಆರ್. ಗಣೇಶ್ ಪ್ರಸಾದ್ ಹಾಗೂ ಉಪಾಧ್ಯಕ್ಷ ವಿ.ಮಹೇಶ್ ಲಲಿತಮ್ಮ ಅವರ ನಡೆಗೆ ವಿರೋಧ ವ್ಯಕ್ತಪಡಿಸಿ, ‘ಈ ರೀತಿ ಧರಣಿ ನಡೆಸುವ ಕ್ರಮ ಸರಿಯಲ್ಲ. ವಿರೋಧ ಪಕ್ಷದವರ ಗಮನಕ್ಕೆ ತಾರದೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ನಿಮಗೆ ಮಾಹಿತಿಯ ಕೊರತೆ ಇದೆ’ ಎಂದು ಹೇಳಿದರು.

ಬಿಜೆಪಿ ಸದಸ್ಯ ಟಿ.ಡಿ. ಮೇಘರಾಜ್, ‘ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರ ಹೆಸರನ್ನು ಊರಿನ ಪ್ರಮುಖ ವೃತ್ತಕ್ಕೆ ಇಡುವ ಪದ್ಧತಿ ಮೊದಲಿನಿಂದಲೂ ಇದೆ. ಇಲ್ಲಿನ ವೃತ್ತವೊಂದಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಇಡಲಾಗಿದೆ. ಕೆ.ಜಿ. ಒಡೆಯರ್ ಜಿಲ್ಲೆಯ ಮೊದಲ ಸಂಸದರು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದಾರೆ. ಅಂತವರ ಹೆಸರನ್ನು ವೃತ್ತಕ್ಕೆ ಇಡುವುದು ಊರಿನ ಗೌರವ ಹೆಚ್ಚಿಸುತ್ತದೆ’ ಎಂದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ವಿರೋಧ ಪಕ್ಷದ ನಾಯಕ ಮಂಡಗಳಲೆ ಗಣಪತಿ ಅವರ ಗಮನಕ್ಕೆ ವೃತ್ತಕ್ಕೆ ನಾಮಕರಣ ಮಾಡುವ ವಿಷಯವನ್ನು ತರಲಾಗಿದೆ. ಈ ವಿಷಯದ ಬಗ್ಗೆ ವಿರೋಧವಿದ್ದರೆ ಜಿಲ್ಲಾಧಿಕಾರಿಗೆ ಲಿಖಿತವಾಗಿ ತಕರಾರು ಸಲ್ಲಿಸಬಹುದು’ ಎಂದು ಹೇಳಿದರು.

ನಗರವ್ಯಾಪ್ತಿಯ ಉದ್ಯಾನಗಳ ನಿರ್ವಹಣೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯ ರಾಜೇಂದ್ರ ಪೈ, ‘ಖಾಸಗಿ ಸಹಭಾಗಿತ್ವ ನೀಡಿದರೆ ಈ ಕಾರ್ಯದಲ್ಲಿ ಭಾಗಿಯಾಗುವ ಸಂಸ್ಥೆಗಳಿಗೆ ಒದಗುವ ಪ್ರಯೋಜನಗಳೇನು? ಕನಿಷ್ಠ ಪಕ್ಷ ಅಂತಹ ಸಂಸ್ಥೆಗಳ ಪ್ರಚಾರಕ್ಕೆ ಅವಕಾಶವಿದೆಯೇ’ ಎಂದು ಪ್ರಶ್ನಿಸಿದರು.

‘ಸಹಭಾಗಿತ್ವ ನೀಡಿದ ಬಗ್ಗೆ ಖಾಸಗಿ ಸಂಸ್ಥೆಗಳು ಪ್ರಚಾರ ಪಡೆಯಲು ಅವಕಾಶವಿದೆ’ ಎಂದು ಪೌರಾಯುಕ್ತ ರಾಜು ಡಿ.ಬಣಕಾರ್ ಉತ್ತರಿಸಿದರು.

ಕಾಂಗ್ರೆಸ್ ಸದಸ್ಯ ಉಮೇಶ್, ‘ಸಾರ್ವಜನಿಕರ ತೆರಿಗೆ ಹಣದಿಂದ ಉದ್ಯಾನ ನಿರ್ಮಿಸಲಾಗಿದೆ. ಆದರೆ ಹಲವು ಉದ್ಯಾನಗಳು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅವುಗಳ ನಿರ್ವಹಣೆಗೆ ಖಾಸಗಿ ಸಹಭಾಗಿತ್ವ ನೀಡಿದರೆ ಉಂಟಾಗುವ ಸಾಧಕ–ಬಾಧಕಗಳ ಬಗ್ಗೆ ಎಚ್ಚರ ವಹಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT