ಶನಿವಾರ, ಸೆಪ್ಟೆಂಬರ್ 25, 2021
29 °C
ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿರುವ ಶಿವಮೊಗ್ಗ * ನಾಲ್ಕು ಬಾರಿ ಯಡಿಯೂರಪ್ಪ ಪ್ರಮಾಣ ವಚನ

ಪೂರ್ಣಾವಧಿ ಪೂರೈಸದ ಶಿವಮೊಗ್ಗದ ಮುಖ್ಯಮಂತ್ರಿಗಳು!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕರ್ನಾಟಕದ ಇತಿಹಾಸದಲ್ಲಿ ಜಿಲ್ಲೆಯ ನಾಲ್ವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಯಾರೊಬ್ಬರಿಗೂ ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶ ದೊರೆತಿಲ್ಲ.

ತೀರ್ಥಹಳ್ಳಿ ಕ್ಷೇತ್ರದ ಕಡಿದಾಳು ಮಂಜಪ್ಪ, ಸೊರಬದ ಎಸ್.ಬಂಗಾರಪ್ಪ, ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಜೆ.ಎಚ್.ಪಟೇಲ್‌ ಹಾಗೂ ಶಿಕಾರಿಪುರದ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಕಡಿದಾಳ್‌, ಬಂಗಾರಪ್ಪ ಅವರಿಗೆ ಕಾಂಗ್ರೆಸ್, ಜೆ.ಎಚ್.ಪಟೇಲರಿಗೆ ಜನತಾ ದಳ ಅವಕಾಶ ನೀಡಿತ್ತು. ಯಡಿಯೂರಪ್ಪ ಅವರು ಬಿಜೆಪಿ ಶಾಸಕರಾಗಿ ಮುಖ್ಯಮಂತ್ರಿ ಸ್ಥಾನ ಪಡೆದಿದ್ದರು.

ಕಡಿದಾಳ್ ಮಂಜಪ್ಪ ಜಿಲ್ಲೆಯ ಮೊದಲ ಮುಖ್ಯಮಂತ್ರಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 1952ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಕಡಿದಾಳ್‌ ಮಂಜಪ್ಪ ಅವರು 1956 ಆಗಸ್ಟ್‌ 19ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷಗಳು ಕಾರ್ಯನಿರ್ವಹಿಸಿದ್ದ ಕೆಂಗಲ್ ಹನುಮಂತಯ್ಯ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಗೆ ದೊರೆತದ್ದು ಕೇವಲ 73 ದಿನಗಳು. ಅದೇ ವರ್ಷ ಅಕ್ಟೋಬರ್ 31ಕ್ಕೆ ವಿಧಾನಸಭೆಯ ಅವಧಿ ಪೂರ್ಣಗೊಂಡಿತ್ತು.

ಎರಡನೆಯವರು ಬಂಗಾರಪ್ಪ: ಸೊರಬ ಕ್ಷೇತ್ರದಿಂದ 1989ರಲ್ಲಿ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಾರೆಕೊಪ್ಪ ಬಂಗಾರಪ್ಪ ಅವರು ವೀರೇಂದ್ರ ಪಾಟೀಲ್ ನಂತರ 1990 ಅ.17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 1992ರ ನ. 19ರಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ನಾಯಕ ನರಸಿಂಹರಾವ್ ಅವರ ಜತೆ ಸಂಘರ್ಷಕ್ಕೆ ಇಳಿದಿದ್ದ ಅವರು ರಾಜಕೀಯ ಕಾರಣಗಳಿಂದ ರಾಜೀನಾಮೆ ನೀಡಿದ್ದರು. ಉಳಿದ ಅವಧಿಗೆ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಮೂರನೇ ಮುಖ್ಯಮಂತ್ರಿ ಜೆ.ಎಚ್.ಪಟೇಲ್: ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಕ್ಷೇತ್ರದಿಂದ 1994ರ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಜನತಾದಳದ ಜೆ.ಎಚ್.ಪಟೇಲ್ 1996ರ ಮೇ 31ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 1994ರ ವಿಧಾನಸಭಾ ಚುನಾವಣೆಯ ನಂತರ ಜನತಾ ದಳ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಅವರು ದೇಶದ ಪ್ರಧಾನಿಯಾದರು. ಆಗ ಉಪ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರಿಗೆ ಮುಖ್ಯಮಂತ್ರಿ ಯೋಗ ಒಲಿದುಬಂದಿತ್ತು. 1999 ಅ.7ರವರೆಗೆ ಉಳಿದ ಅವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ: ಬಿ.ಎಸ್‌. ಯಡಿಯೂಪ್ಪ ಅವರು 2004ರ ಚುನಾವಣೆಯಲ್ಲಿ 5ನೇ ಬಾರಿ ಶಿಕಾರಿಪುರದಿಂದ ಆಯ್ಕೆಯಾಗಿದ್ದರು. ಅಂದು ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಹಾಗಾಗಿ, ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲ ಜೆಡಿಎಸ್ ಹಿಂಪಡೆದಿದ್ದರಿಂದ ಸರ್ಕಾರ ಪತನವಾಗಿತ್ತು. ನಂತರ ಬಿಜೆಪಿ, ಜೆಡಿಎಸ್‌ 20:20 ಸರ್ಕಾರ ರಚಿಸಲಾಯಿತು. ಮೊದಲ 20 ತಿಂಗಳಿಗೆ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಹಲವು ನಾಟಕೀಯ ಬೆಳವಣಿಗೆಗಳ ನಂತರ 2007ರ ನ. 12ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಜೆಡಿಎಸ್ ಬೆಂಬಲ ಹಿಂಪಡೆದ ಕಾರಣ ಕೇವಲ 7 ದಿನಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು. ಮೂರೂವರೆ ವರ್ಷಕ್ಕೆ ಆಗಿನ ವಿಧಾನಸಭೆ ವಿಸರ್ಜನೆಯಾಗಿತ್ತು.

2008ರ ಚುನಾವಣೆಯಲ್ಲಿ ಶಿಕಾರಿಪುರದಿಂದ 6ನೇ ಬಾರಿ ಆಯ್ಕೆಯಾದ ಅವರು ಆ ವರ್ಷ ಮೇ 30ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪಕ್ಷದಲ್ಲೇ ನಡೆದ ಆಂತರಿಕ ಕಲಹ, ಭ್ರಷ್ಟಾಚಾರ ಪ್ರಕರಣಗಳ ಪರಿಣಾಮ 2011ರ ಜುಲೈ 31ರಂದು ರಾಜೀನಾಮೆ ನೀಡಿದ್ದರು. ಉಳಿದ ಅವಧಿಗೆ ಸದಾನಂದ ಗೌಡ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು.

2018ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ 8ನೇ ಬಾರಿ ಶಿಕಾರಿಪುರದಿಂದ ಆಯ್ಕೆಯಾದ ನಂತರ ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, 104 ಶಾಸಕರ ಬಲ ಹೊಂದಿದ್ದ ಅವರಿಗೆ ಅದೃಷ್ಟ ಒಲಿಯಲಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಂತೆ ಎರಡೇ ದಿನದಲ್ಲಿ ಬಹುಮತ ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿ ರಾಜೀನಾಮೆ ನೀಡಿದ್ದರು. 

ನಂತರ ಕಾಂಗ್ರೆಸ್ ಸಹಭಾಗಿತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಉರುಳಿಸಿ 2019 ಜುಲೈ 26ರಂದು ನಾಲ್ಕನೇ ಬಾರಿ ಮುಖ್ಯಮಂತ್ರಿಗಾದಿ ಅಲಂಕರಿಸಿದ್ದರು. ಎರಡು ವರ್ಷಗಳ ಅವಧಿ ಪೂರ್ಣಗೊಂಡ ದಿನವೇ ಮತ್ತೆ ರಾಜೀನಾಮೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು