ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀ.ನಂ. ಪ್ರಶಸ್ತಿ, ಸ್ಥಾನಮಾನಕ್ಕಾಗಿ ಲಾಬಿ ಮಾಡಿದವರಲ್ಲ

ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ನುಡಿ
Last Updated 13 ಜೂನ್ 2022, 7:03 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಡಾ.ಶ್ರೀಕಂಠ ಕೂಡಿಗೆ ಹಾಗೂ ಡಾ.ತೀ.ನಂ.ಶಂಕರನಾರಾಯಣ ಕುವೆಂಪು ವಿಶ್ವವಿದ್ಯಾಲಯಲ್ಲಿ ಜೋಡೆತ್ತಿನಂತೆ ಕೆಲಸ ಮಾಡಿದ್ದಾರೆ. ಶಂಕರನಾರಾಯಣ ಅವರು ಪ್ರಯತ್ನ ಮಾಡಿದ್ದರೆ ಕುಲಪತಿ ಆಗಬಹುದಿತ್ತು. ಆದರೆ, ವಿಶ್ವವಿದ್ಯಾಲಯದ ಉನ್ನತ ಸ್ಥಾನ, ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡಲಿಲ್ಲ’ ಎಂದು ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.

ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ತೀ.ನಂ.ಶಂಕರನಾರಾಯಣ ನೆನಪು ಕಾರ್ಯಕ್ರಮದಲ್ಲಿ ತೀ.ನಂ.ಬದುಕು ಮತ್ತು ವ್ಯಕ್ತಿತ್ವ ವಿಷಯ ಕುರಿತು ಅವರು ಮಾತನಾಡಿದರು.

‘ಶ್ರೀಕಂಠ ಕೂಡಿಗೆ ಹಾಗೂ ಶಂಕರನಾರಾಯಣ ಇಬ್ಬರೂ ಒಂದೇ ದಿನ ವೃತ್ತಿ ಜೀವನ ಆರಂಭಿಸಿ, ಒಂದೇ ದಿನ ನಿವೃತ್ತರಾದರು. ಭಾಷಾ ಭಾರತಿ ವಿಭಾಗಕ್ಕೆ ಇವರಿಬ್ಬರೂ ನೀಡಿದ ಕೊಡುಗೆ ಅನನ್ಯವಾದುದು. ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾಲಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು.

‘ಇಂದು ವಿಶ್ವವಿದ್ಯಾಲಯಗಳು ಜಾತಿ ಕೂಪಗಳಾಗುತ್ತಿವೆ. ಆದರೆ ತೀ.ನಂ. ಅವರಲ್ಲಿ ಎಂದಿಗೂ ಜಾತೀಯತೆ ಸುಳಿಯಲಿಲ್ಲ. ಎಲ್ಲರನ್ನೂ ಜಾತ್ಯತೀತ ಮನೋಭಾವದಿಂದ ಕಾಣುತ್ತಿದ್ದರು. ಇಂದು ನಾಡಿನ ವಿವಿಧೆಡೆ ತೀ.ನಂ. ಶ್ರದ್ಧಾಂಜಲಿ ಸಭೆ ಆಯೋಜಿಸಿ ಕನ್ನಡ ಸಾಹಿತ್ಯ ಪರಂಪರೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಆದರೆ, ಕುವೆಂಪು ವಿಶ್ವವಿದ್ಯಾಲಯ, ಇಲ್ಲವೇ ಕನ್ನಡ ಭಾರತಿ ವಿಭಾಗದಲ್ಲಿ ಶ್ರದ್ಧಾಂಜಲಿಸಭೆ ಆಯೋಜಿಸದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ತೀ.ನಂ. ಅವರಿಗೆ ಸಿರಿಯಜ್ಜಿ ಪ್ರತಿಷ್ಠಾನದಿಂದ ‘ಸಿರಿ ಬೆಳಕು’ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದೆವು. ಅವರು ಈ ಪ್ರಶಸ್ತಿಯನ್ನು ಸಂಕೋಚದಿಂದಲೇ ಒಪ್ಪಿಕೊಂಡಿದ್ದರು. ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದು, ಆಹ್ವಾನ ಪತ್ರಿಕೆಯನ್ನು ಅವರಿಗೆ ತಲುಪಿಸುವ ಸಂದರ್ಭದಲ್ಲೇ ಅವರು ನಮ್ಮನ್ನು ಅಗಲಿದ್ದು ಬೇಸರದ ಸಂಗತಿ’
ಎಂದರು.

‘ತೀ.ನಂ. ಪ್ರಖರ ಜಾನಪದ ವಿದ್ವಾಂಸರಾಗಿದ್ದರು. ಜಾನಪದ ಈ ನೆಲದ ಮೂಲ ದ್ರವ್ಯವೆಂದು ಪರಿಗಣಿಸಿ ಸಂಶೋಧನೆ ನಡೆಸಿದವರು ಅವರು. ಪ್ರಾಚೀನ ಕನ್ನಡದ ಬಗ್ಗೆ ಅವರಿಗೆ ಅಪಾರ ಜ್ಞಾನವಿತ್ತು’ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT