ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್ ಪುನಶ್ಚೇತನಕ್ಕೆ ಎನ್ಎಸ್‌ಯುಐ ಆಗ್ರಹ

ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನೆ
Last Updated 7 ಫೆಬ್ರುವರಿ 2023, 5:02 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ ಗೊಳಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಸಲು ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಸೋಮವಾರ ವೀರಭದ್ರೇಶ್ವರ ಟಾಕಿಸ್ ರಸ್ತೆಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಸ್ಥಾಪನೆಯಾಗಿದ್ದ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಹುನ್ನಾರ ನಡೆಸಿರುವುದನ್ನು ಎನ್ಎಸ್‌ಯುಐ ಖಂಡಿಸುತ್ತದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಕಾರ್ಖಾನೆಯು ಏಷ್ಯಾದಲ್ಲಿಯೇ ಉತ್ಕೃಷ್ಟ ಕಬ್ಬಿಣ ಮತ್ತು ಉಕ್ಕು ತಯಾರಿಕೆಗೆ ಪ್ರಸಿದ್ಧಿ ಪಡೆದಿದೆ. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದ ವಿಐಎಸ್‌ಎಲ್‌ನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶಕ್ಕೆ ಯಾವುದೇ ಷರತ್ತು ಇಲ್ಲದೇ ಕೇಂದ್ರ ಸರ್ಕಾರದ ಸೈಲ್‌ಗೆ ವಹಿಸಿಕೊಡಲಾಗಿತ್ತು. ಸೈಲ್ ಕಾರ್ಖಾನೆ ಅಭಿವೃದ್ಧಿಪಡಿಸುವ ಬದಲಿಗೆ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.

ವಿಐಎಸ್‌ಎಲ್ ಕಾರ್ಖಾನೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಈ ಭಾಗದ
ಆರ್ಥಿಕ ಚಟುವಟಿಕೆ ಉತ್ತೇಜಿಸುತ್ತಲೇ ಬಂದಿದೆ. ಆದರೆ, ಕೇಂದ್ರ ಸರ್ಕಾರ ಕಾರ್ಖಾನೆಗೆ ಹಣ, ಯಂತ್ರೋಪಕರಣ ಒದಗಿಸುವಲ್ಲಿ ವಿಫಲವಾಗಿದ್ದು, ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಗಿದೆ. ಇದೀಗ ಕಾರ್ಖಾನೆ ಮುಚ್ಚುವ ಪ್ರಯತ್ನ ನಡೆಸುತ್ತಿದೆ. ಇದರಿಂದ ಸಾವಿರಾರು
ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಕುಸಿಯುತ್ತಿದೆ. ಇದಕ್ಕೆಲ್ಲ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ದೂರಿದರು.

‘ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿ ಉದ್ಯೋಗ ಸೃಜಿಸುವ ಬದಲು, ಸರ್ಕಾರಿ ಸ್ವಾಮ್ಯದ ಒಂದೊಂದೇ ಉದ್ಯಮಗಳನ್ನು ಮುಚ್ಚುತ್ತಿದೆ. ರಾಷ್ಟ್ರಪತಿ ಕೂಡಲೇ ಮಧ್ಯ ಪ್ರವೇಶಿಸಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸಿ, ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಸುವಂತೆ ಆದೇಶ ನೀಡಬೇಕು. ಹಾಗೆಯೇ ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೂ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಎಸ್.ಪಿ. ದಿನೇಶ್ ರಮೇಶ ಹೆಗಡೆ, ರವಿಕುಮಾರ್, ದೀಪಕ್ ಸಿಂಗ್ ಹಾಗೂ ಕಲೀಮ್ ಪಾಷಾ, ಮೊಹಮದ್ ನಿಹಾಲ್, ಆರಿಫ್, ಪ್ರಮೋದ್, ಅಕ್ಬರ್, ರಘು, ಚಂದನ್, ವಿಜಯಕುಮಾರ್, ರವಿ ಕಾಟಿಕೆರೆ, ಚರಣ್, ಹರ್ಷಿತ್, ವಿಕ್ರಂ, ರವಿ, ಚಂದ್ರು ಜಿ. ರಾವ್,
ತೌಫಿಕ್, ಹೇಮಂತ್, ಚರಣ್, ದೀಕ್ಷಿತ್ ಪ್ರದೀಪ್, ವರುಣ್ ವಿ ಪಂಡಿತ್, ನಾಗೇಂದ್ರ, ಸಾಗರ್, ಬಸವರಾಜ್, ಮಲಗಪ್ಪ ಶಿವು, ಅಬ್ದುಲ್,
ಗಿರೀಶ್, ಆಕಾಶ್, ಗೌತಮ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT