ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರ್ಷಕ್ಕೆ ತುಂಗಾ ಸೇತುವೆ ಸಂಚಾರಕ್ಕೆ ಮುಕ್ತ: ಆರಗ ಜ್ಞಾನೇಂದ್ರ

ಬಾಳೇಬೈಲು ಸಮೀಪದ ಸೇತುವೆ ಕಾಮಗಾರಿ ವೀಕ್ಷಣೆ
Last Updated 27 ಏಪ್ರಿಲ್ 2022, 4:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಇಲ್ಲಿನ ಕಮಾನು ಸೇತುವೆಗೆ ಪರ್ಯಾಯವಾಗಿ ಬಾಳೇಬೈಲಿನಲ್ಲಿ ₹ 56 ಕೋಟಿ ವೆಚ್ಚದಲ್ಲಿ ಆರಂಭವಾಗಿರುವ ಸೇತುವೆ 2023ರ ಜನವರಿಗೆ ಸಂಚಾರ ಮುಕ್ತವಾಗಲಿದೆ. ಕಾಮಗಾರಿ ಅತ್ಯಂತ ವೇಗವಾಗಿ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ‘ಜಯಚಾಮರಾಜೇಂದ್ರ ಕಮಾನು ಸೇತುವೆ 1939-41ರಲ್ಲಿ ನಿರ್ಮಾಣವಾಗಿದೆ. ಶಿಥಿಲಾವಸ್ಥೆ ತಲುಪಿದ ಕಾರಣ ಸೇತುವೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಲವು ವರ್ಷಗಳ ಬೇಡಿಕೆ ಇತ್ತು. 5 ತಿಂಗಳಲ್ಲಿ ಶೇ 40ಕ್ಕೂ ಹೆಚ್ಚು ಕಾಮಗಾರಿ ಮುಗಿದಿದೆ. ಗುತ್ತಿಗೆದಾರರು ಸಹೋದರರು ವೇಗವಾಗಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ ನಿರಂತರ ಸಹಕಾರದಿಂದ ಸೇತುವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. 169 ತೀರ್ಥಹಳ್ಳಿ-ಕೊಪ್ಪ ರಾಷ್ಟ್ರೀಯ ಹೆದ್ದಾರಿ 169ಎ ಶಿವಮೊಗ್ಗ-ಉಡುಪಿ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್‌ ರಸ್ತೆಯಾಗಿ ಈ ಯೋಜನೆ ಮಂಜೂರಾಗಿದೆ. ಸ್ಥಳೀಯವಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರನ್ನು ಈ ಸೇತುವೆ ಇರುವವರೆಗೆ ಮರೆಯಲು ಸಾಧ್ಯವಿಲ್ಲ. ತಮ್ಮ ಕೃಷಿ ಜಮೀನು, ಇನ್ನಿತರ ಜಮೀನುಗಳನ್ನು ರಸ್ತೆಗಾಗಿ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಎಇಇ ನಾಗರಾಜ್‌ ನಾಯ್ಕ್‌ ಮಾತನಾಡಿ, ‘1.35 ಕಿಲೋಮೀಟರ್‌ ಸೇತುವೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಟ್ಟು ಆರು ಕಿಂಡಿಗಳ 210 ಮೀಟರ್‌ ಸೇತುವೆ ಇದಾಗಿದೆ. 35 ಮೀಟರ್‌ ಉದ್ದದ ಸ್ಲ್ಯಾಬ್‌ ನಿರ್ಮಾಣ ಮಾಡಲಾಗುತ್ತಿದೆ. ಬಾಳೇಬೈಲಿನಲ್ಲಿ ಟೀ ಜಂಕ್ಷನ್‌ ನೀಡಿದರೆ ಕುರುವಳ್ಳಿಯಲ್ಲಿ ವೈ ಜಂಕ್ಷನ್‌ಗೆ ರೂಪುರೇಷೆ ಸಿದ್ಧಗೊಂಡಿದೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಸಂದೇಶ್‌ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್‌, ಪಟ್ಟಣ ಅಧ್ಯಕ್ಷ ಅನಿಲ್‌ ಟಿ.ಎನ್., ನ್ಯಾಷನಲ್‌ ಸಮೂಹ ಸಂಸ್ಥೆ ಮಾಲೀಕರಾದ ಇಬ್ರಾಹಿಂ ಶರೀಫ್‌,‌ ಅಬ್ದುಲ್‌ ರೆಹಮಾನ್, ಕಿರಿಯ ಇಂಜಿನಿಯರ್‌ ಶಶಿಧರ್‌ ಜೋಯ್ಸ್‌, ನವೀನ್‌ ರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT