ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಗೆ ಆದ್ಯತೆ ನೀಡಲು ಡಿಸಿ ಸಲಹೆ

ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ
Last Updated 20 ಮಾರ್ಚ್ 2022, 3:57 IST
ಅಕ್ಷರ ಗಾತ್ರ

ನೊಣಬೂರು (ಕೋಣಂದೂರು) : ‘ಸಾವಯವ ಕೃಷಿಗೆ ಆದ್ಯತೆ ನೀಡುವ ಮೂಲಕ ಸಾವಯವ ಗ್ರಾಮ ಪರಿಕಲ್ಪನೆಗೆ ಒತ್ತು ನೀಡುವ ಪ್ರಯತ್ನ ಆಗಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಣಬೂರಿನಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥವನ್ನು ಪ್ರವಾಸಿ ತಾಣವಾಗಿಸುವುದಕ್ಕಾಗಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲಿನ ಪರಿಶಿಷ್ಟ ಕಾಲೊನಿಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವುದು. ಅಚ್ಚ ಕನ್ಯೆ ಜಲಪಾತದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದು, ಮ್ಯಾಮ್ಕೋಸ್‌ನ ಹಿಡುವಳಿದಾರರ ಹಿತ ಕಾಯುವಲ್ಲಿ ಕ್ರಮ, ಗ್ರಾಮ ಒನ್ ಕೇಂದ್ರದ ಕೆಲಸ ಕಾರ್ಯಗಳಿಗೆ ವೇಗ ಕೊಡುವುದು, ಮಳೆ ಹಾನಿಯಿಂದ ಹಾಳಾದ ಜಮೀನಿಗೆ ತಡೆಗೋಡೆ ನಿರ್ಮಿಸುವುದು, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಕೆಎಸ್‌ಆರ್‌ಟಿಸಿ ಬಸ್ ಓಡಾಟಕ್ಕೆ ಕ್ರಮ, ಬಿಎಸ್‌ಎನ್‌ಎಲ್‌ ನೆಟ್‌ವರ್ಕ್, ಅಕ್ರಮ ಮರಳು ಸಾಗಣೆ ಮತ್ತಿತರ ವಿಚಾರಗಳ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.

31 ಫಲಾನುಭವಿಗಳಿಗೆ ಹಕ್ಕುಪತ್ರ, ಸಂಧ್ಯಾಸುರಕ್ಷಾ, ವಿಧವಾ ವೇತನಗಳ ಪತ್ರಗಳನ್ನು ವಿತರಿಸಲಾಯಿತು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು’ ಎಂದರು.

ಬೆಳಿಗ್ಗೆ 11ರ ಸುಮಾರಿಗೆ ನೊಣಬೂರು ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಸೆಲ್ವಮಣಿ ಅವರನ್ನು ಅಂಬುತೀರ್ಥ ರಾಮೇಶ್ವರ ದೇವಸ್ಥಾನದ ಬಳಿ ಪೂರ್ಣಕುಂಭ ಸಮೇತ ಸ್ವಾಗತಿಸಲಾಯಿತು. ನಂತರ ಅಂಬುತೀರ್ಥದ ಪರಿಶಿಷ್ಟ ಜಾತಿ ಕಾಲೊನಿಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು. ವಿವಿಧ ಕಚೇರಿಗಳಿಗೆ ಭೇಟಿ ನೀಡಿದರು. ಪ್ರಧಾನ ಮಂತ್ರಿಯವರ ನನ್ನ ಕನಸಿನ ಭಾರತ ಅಂಚೆ ಕಾರ್ಡ್ ಬರಹದಲ್ಲಿ ಆಯ್ಕೆಯಾದ 10 ಜನರಲ್ಲಿ ಕರ್ನಾಟಕದ ಒಬ್ಬಳಾದ ಸಿರಿಗಾರಿನ ಎನ್.ಯು. ಮಂದಾರ ಮತ್ತು ವೈದ್ಯರಾದ ಸೂರ್ಯನಾರಾಯಣ ಉಡುಪ ಅವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಉಪವಿಭಾಗಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಶ್ರೀಪಾದ್, ಡಿವೈಎಸ್‌ಪಿ ಶಾಂತವೀರ, ಕಾರ್ಯನಿರ್ವಹಣಾಧಿಕಾರಿ ಆಶಾಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಉಪಾಧ್ಯಕ್ಷ ಮಲ್ಲೇಸರ ಅರುಣ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT