ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣಂದೂರು: ಕೃಷಿ ಕಾರ್ಯಕ್ಕೆ ಕಳೆ ಕಟ್ಟುವ ನಟ್ಟಿ ಹಬ್ಬ

ಮಳೆಗೆ ಅಲ್ಪ ವಿರಾಮ; ಚುರುಕುಗೊಂಡ ಭತ್ತ ನಾಟಿ ಕಾರ್ಯ
Last Updated 29 ಜುಲೈ 2022, 4:13 IST
ಅಕ್ಷರ ಗಾತ್ರ

ಕೋಣಂದೂರು: ಮಲೆನಾಡಿನಲ್ಲಿ ಮಳೆಗೆ ಅಲ್ಪ ವಿರಾಮ ಸಿಕ್ಕಿದ್ದು, ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ಮನೆಮಂದಿಯೆಲ್ಲ ಒಳಗೊಂಡು ಸಂಭ್ರಮಿಸುವ ಏಕೈಕ ಕೃಷಿ ಚಟುವಟಿಕೆಯಾದ ನಾಟಿ ಕೇವಲ ಕೆಲಸವಲ್ಲ, ಅದೊಂದು ಹಬ್ಬ.

ಜುಲೈ ತಿಂಗಳ ಆರಂಭದಲ್ಲಿ ಪ್ರವಾಹ ಸೃಷ್ಟಿಸಿದ ಮಳೆ, ವಾರದಿಂದ ಕೊಂಚ ಕಡಿಮೆಯಾಗಿದೆ. ಇದರಿಂದ ಭತ್ತದ ನಾಟಿ ಕಾರ್ಯ ಭರದಿಂದ ಸಾಗುತ್ತಿದೆ. ಮಲೆನಾಡಿನಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಶುಂಠಿ, ಕಾಫಿ, ಕಾಳು ಮೆಣಸು ವ್ಯಾಪಕವಾಗಿ ಬೆಳೆಯುತ್ತಿದ್ದರೂ, ಸಾಂಪ್ರದಾಯಿಕ ಕೃಷಿಯಾದ ಭತ್ತದ ನಾಟಿ ಕಾರ್ಯವನ್ನು ಮಲೆನಾಡಿಗರು ಸಂಪೂರ್ಣವಾಗಿ ತ್ಯಜಿಸಿಲ್ಲ. ಭೂಮಿ ಹುಣ್ಣಿಮೆಯ ದಿನ ಭೂಮಿ ಪೂಜೆಗಾಗಿ ಒಂದಷ್ಟು ಭತ್ತದ ಗದ್ದೆಗಳನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ.

ನಾಟಿ ಕಾರ್ಯ ಅದು ಕೇವಲ ಕೆಲಸವಲ್ಲ. ಅದೊಂದು ಹಬ್ಬದ ವಾತಾವರಣ. ಮನೆ ಮಂದಿಯೆಲ್ಲ ಸಂಪೂರ್ಣ ತೊಡಗಿಕೊಳ್ಳುವ ಅತ್ಯಂತ ಸಂಭ್ರಮದ ದಿನವದು. ಮಹಿಳೆಯರು ನಾಟಿಗಾಗಿ ಹಿಂದಿನ ದಿನವೇ ಕೊಟ್ಟೆ ಕಡುಬು, ಉಂಡೆ ಕಡುಬು, (ಈಚಿನ ದಿನಗಳಲ್ಲಿ ಇಡ್ಲಿ) ಮಾಂಸಾಹಾರ ತಯಾರಿಯಲ್ಲಿ ಮುಳುಗಿರುತ್ತಾರೆ.

ಪುರುಷರು ಭತ್ತದ ನಾಟಿಗೆ ಗದ್ದೆಗಳ ಅಂಚು ಕಡಿದು, ಅವುಗಳಿಗೆ ಮಣ್ಣುಕೊಟ್ಟು ಶೃಂಗರಿಸುತ್ತಾರೆ. ನಾಟಿ ಕಾರ್ಯದ ಹಿಂದಿನ ದಿನ ಸಸಿ ಕೀಳುವ ಮೂಲಕ ನಿಯಮಿತವಾಗಿ ಕಟ್ಟುಗಳನ್ನು ಕಟ್ಟಿ ಮೆದೆಗಳ ಲೆಕ್ಕದಲ್ಲಿ ಎತ್ತಿಟ್ಟುಕೊಳ್ಳುತ್ತಾರೆ.

ಮರುದಿನ ಮುಂಜಾನೆ ಆರಂಭವಾಗುವ ನಾಟಿ ಕಾರ್ಯಕ್ಕೆ ಈ ಹಿಂದೆ ಎತ್ತು– ಕೋಣಗಳನ್ನು ಬಳಸುತ್ತಿದ್ದರು. ಈಗ ಟ್ರ್ಯಾಕ್ಟರ್, ಟಿಲ್ಲರ್‌ಗಳು ಗದ್ದೆಯನ್ನು ಹದಗೊಳಿಸುತ್ತವೆ. ನಂತರ ಎತ್ತುಗಳ ಸಹಾಯದಿಂದ ಗದ್ದೆಯ ಮಣ್ಣನ್ನು ಸಮತಟ್ಟು ಮಾಡಿ ಗೊಬ್ಬರ, ಕಳೆನಾಶಕ ಹಾಕಿ ಸಸಿ ನೆಡಲಾಗುತ್ತದೆ.

ಈ ಸಂದರ್ಭದಲ್ಲಿ ಮನೆಯ, ನೆರೆಹೊರೆಯವರ ಮಕ್ಕಳು, ದೂರದೂರಲ್ಲಿ ನೆಲೆಸಿರುವವ ಮಕ್ಕಳು, ಮೊಮ್ಮಕ್ಕಳು, ಬಂಧುಗಳು ಪಾಲ್ಗೊಂಡು ಕೆಸರಿನ, ಮಣ್ಣಿನ ಸವಿಯನ್ನು ಸವಿದು, ಕುಣಿದು ಕುಪ್ಪಳಿಸಿ ಹರ್ಷಿಸುತ್ತಾರೆ. ಅಕ್ಕಪಕ್ಕದ ಮನೆಯ ಹೆಂಗಸರು ಪರಸ್ಪರ ಸಹಾಯದ ನಿಮಿತ್ತ ಮೈಯಾಳಿನ ಮೂಲಕ ನಾಟಿ ಕಾರ್ಯ ಮಾಡುತ್ತಾರೆ. ಹೆಣ್ಣುಮಕ್ಕಳು ಹಾಡು ಹೇಳುತ್ತ ನಟ್ಟಿ ಕಾರ್ಯದಲ್ಲಿ ತೊಡಗುತ್ತಾರೆ.

ಕೃಷಿ ಕಾರ್ಮಿಕರ ಅಲಭ್ಯತೆಯ ಈ ಹೊತ್ತಿನಲ್ಲಿ ಮಹಿಳೆಯರು ಕೆಲವು ನಟ್ಟಿ ತಂಡಗಳನ್ನು ಮಾಡಿಕೊಂಡು, ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವುದು ವಾಡಿಕೆ. ಈ ತಂಡಗಳಲ್ಲಿ ವಯಸ್ಸಾದ ಅನುಭವೀ ಮಹಿಳೆಯರನ್ನು ಹೊರತು ಪಡಿಸಿದರೆ, ಹೊಸ ತಲೆಮಾರಿನವರು ಹುಡುಕಿದರೂ ಸಿಗಲಾರರು.

ಭತ್ತಕ್ಕೆ ಸೂಕ್ತ ಧಾರಣೆ ಇಲ್ಲದಿ ರುವುದು, ಅನುಭವಿ ಕೆಲಸಗಾರರ ಕೊರತೆ, ರಸಗೊಬ್ಬರಗಳ ದರ ಏರಿಕೆ, ಉತ್ಪಾದನಾ ವೆಚ್ಚದ ಹೆಚ್ಚಳ, ಅತಿವೃಷ್ಟಿಯ ಪರಿಣಾಮ ಸಾಕಷ್ಟು ಪ್ರಮಾಣದ ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಏನೇ ಆದರೂ ಕೃಷಿ ಕಾಯಕವು ಗ್ರಾಮೀಣ ಭಾಗದಲ್ಲಿ ತನ್ನ ನೈಜತೆಯನ್ನು ಇಂದಿಗೂ ಉಳಿಸಿಕೊಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಅದಕ್ಕೆ ನಟ್ಟಿ ಹಬ್ಬದ ಸಡಗರ, ಸಂಭ್ರಮವೇ ಸಾಕ್ಷಿ.

ಭತ್ತದ ಗದ್ದೆಗಳೀಗ ನೀಲಗಿರಿ ತೋಪುಗಳು
ಪ್ರತಿ ವರ್ಷ 400ರಿಂದ 500 ಹೆಕ್ಟೇರ್ ಭತ್ತದ ಗದ್ದೆಗಳು ಅಡಿಕೆ, ನೀಲಗಿರಿ ತೋಪುಗಳಾಗಿ ಮಾರ್ಪಡುತ್ತಿವೆ. ಕಳೆದ ವರ್ಷ ತೀರ್ಥಹಳ್ಳಿ ತಾಲ್ಲೂಕಿನಲ್ಲಿ 8,200 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ಊಟಕ್ಕೆ ಮತ್ತು ದನಕರುಗಳ ಮೇವಿಗಾಗಿ ಮಾತ್ರ ಕೆಲವು ರೈತರು ಭತ್ತವನ್ನು ಬೆಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
– ಅಜಿತ್ ಕುಮಾರ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೋಣಂದೂರು

***

ನಾಟಿ ಕೆಲಸಕ್ಕೆ ಜನಗಳು ಸಿಗುತ್ತಿಲ್ಲ. ವಯಸ್ಸಾದ ಮಹಿಳೆಯರು ಮಾತ್ರ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ ಭೂಮಿ ಹಾಳು ಬೀಳುವುದರಲ್ಲಿ ಸಂದೇಹ ಇಲ್ಲ.
-ಪಲ್ಲವಿ ಪ್ರವೀಣ್, ರೈತ ಮಹಿಳೆ, ಸುಳುಕೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT