ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಾಯಗತಾಯ ಕೊನೆಯ ಭಾಗಕ್ಕೆ ನೀರು ಹರಿಸುವೆ: ಪವಿತ್ರಾ ರಾಮಯ್ಯ

ರೈತರಿಗೆ ಭರವಸೆ ನೀಡಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ
Last Updated 16 ಫೆಬ್ರುವರಿ 2022, 7:23 IST
ಅಕ್ಷರ ಗಾತ್ರ

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ಶತಾಯಗತಾಯ ನೀರು ತಲುಪಿಸುವುದಕ್ಕಾಗಿ ವಾರದಲ್ಲಿ 2 ದಿನ ನಾಲೆಗಳಿಗೆ ಭೇಟಿ ನೀಡುವುದಾಗಿ ಮಂಗಳವಾರ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ರೈತರಿಗೆ ಭರವಸೆ ನೀಡಿದರು.

ಪಟ್ಟಣದ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿಯಲ್ಲಿ ಕೊನೆಯ ಭಾಗದ ರೈತರ ಭದ್ರಾ ನಾಲೆ ನೀರಿನ ಸಮಸ್ಯೆ ಆಲಿಸಿದರು. ನಾಲೆಗೆ ನೀರು ಬಿಟ್ಟ ನಂತರ ಸಸಿ ಮಡಿ ತಯಾರಿಸಿ 50 ದಿನಗಳಾಗಿದ್ದು ಈಗಾಗಲೇ ಬಲಿತಿವೆ. ಈ ವಾರ ನೀರು ಸಿಗದಿದ್ದರೆ ಎಲ್ಲ ಹಾಳಾಗುತ್ತದೆ ಎಂದು ರೈತ ಮುಖಂಡ ನಂದಿತಾವರೆ ಮುರುಗೇಂದ್ರಯ್ಯ, ಮಂಜುಳಮ್ಮ ಬೇಸರ ವ್ಯಕ್ತಪಡಿಸಿದರು.

ಈಗಾಗಲೇ 2 ಬಾರಿ ಭದ್ರಾ ನಾಲೆ ನೀರು ನಿಲುಗಡೆ ಮಾಡಿದ ಕಾರಣ ಆಂತರಿಕ ಸರದಿ ವ್ಯತ್ಯಯವಾಗಿದೆ. ಒಮ್ಮೆ ನೀರು ನಿಲುಗಡೆ ಮಾಡಿದರೆ ಒಂದು ವಾರ ಸಮಸ್ಯೆ ಉಲ್ಬಣಿಸುತ್ತದೆ ಎಂದು ನೀರಿನ ಸಮಸ್ಯೆ ಅನಾವರಣ ಮಾಡಿದರು.

2 ಬಾರಿ ನೀರು ನಿಲುಗಡೆ ಮಾಡಿದ ಕಾರಣವನ್ನು ಎಂಜಿನಿಯರ್‌ ವಿವರಿಸಿದರು. ಆದರೆ ಉಪಸ್ಥಿತ ರೈತರು ಒಪ್ಪಲಿಲ್ಲ. ಕೊನೆಯ ಭಾಗಕ್ಕೆ ನೀರು ತಲುಪಿಸುುದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಎಂಜಿನಿಯರ್‌
ಗಳಿಗೆ ತಾಕೀತು ಮಾಡಿದರು.

‘ಕೆಲವು ಎಂಜಿನಿಯರ್‌ಗಳು ಸರಿಯಾಗಿ ರೈತರಿಗೆ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಸ್ವೀಕರಿಸುವುದಿಲ್ಲ’ ಎಂಬ ದೂರು ಬಂದಿದೆ ಎಂದು ಎಂಜಿನಿಯರುಗಳಿಗೆ ಎಚ್ಚರಿಕೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಮಾರ್ಮಿಕವಾಗಿ ನುಡಿದರು.

‘3ನೇ ವಿಭಾಗೀಯ ಕಚೇರಿ ಕಾರ್ಯಪಾಲಕ ಎಂಜಿನಿಯರ್‌ ನಾಲೆಯ ಮೇಲೆ ಬರುವುದಿಲ್ಲ, ಕಚೇರಿಯಲ್ಲೂ ಸಿಗುವುದಿಲ್ಲ , ಬಸವಾಪಟ್ಟಣ ಎಇಇ ಅವರನ್ನು ಇಲ್ಲಿಗೆ ನಿಯೋಜಿಸಿ’ ಎಂದು ರೈತರು ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಜಿ. ಪ್ರಭುಗೌಡ ಕೋರಿದರು.

ಎಂಜಿನಿಯರುಗಳ ವರ್ಗಾವಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹಿರಿಯ ಎಂಜಿನಿಯರುಗಳೊಡನೆ ಸಮಾಲೋಚನೆ ನಡೆಸುತ್ತೇನೆ ಎಂದು ಅಧ್ಯಕ್ಷೆ ಆಶ್ವಾಸನೆ ನೀಡಿದರು.

ಸಂಜೆಯಾದೊಡನೆ ನೀರಿನ ಹರಿವಿನ ಪ್ರಮಾಣ ಮುಖ್ಯ ನಾಲೆಯಲ್ಲಿ ಕಡಿಮೆಯಾಗುತ್ತದೆ. ಅಕ್ರಮ ಪಂಪ್ ಸೆಟ್ ತೆರವು ಮಾಡಿಲ್ಲ, ಕೊನೆಯ ಭಾಗದ ರೈತರ ಸಮಸ್ಯೆ ಪರಿಹರಿಸಿ ಎಂದು ರೈತರು ಆಗ್ರಹಿಸಿದರು.

ಕಾಡಾ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಹೆಚ್ಚಿನ ಪ್ರಮಾಣದಲ್ಲಿ ನಾಲೆಯಲ್ಲಿ ನೀರು ಹರಿಸುವುದಾಗಿ ಹಾಗೂ ಮುಂದಿನ ವಾರ ಹೊಲಗಳಿಗೆ ಎಂಜಿನಿಯರುಗಳೊಂದಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದರು. ಅಕ್ರಮ ಪಂಪ್‌ಸೆಟ್‌ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು.

ನಿಯಂತ್ರಣ 2ರಲ್ಲಿ ನೀರಿನ ಹರಿವಿನ ಪ್ರಮಾಣ ನಿಗದಿತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಲು ವಿಚಕ್ಷಣಾ ದಳ ರಚಿಸಲು ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಟೇಲ್ ಕೋರಿದರು. ಹೊಲಗಾಲುವೆಗಳಿಗೆ ಪೈಪ್ ಅಳವಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ನಿಟ್ಟೂರು ಧನಂಜಯ ಹೇಳಿದರು. ರೈತ ಮುಖಂಡ ಚಂದ್ರಪ್ಪ, ಭಾನುವಳ್ಳಿ ಅಂಜನೇಯ, ನಂದಿತಾವರೆ ಪೂಜಾರ ಗದ್ದಿಗೆಪ್ಪ, ರವಿ. ಸಿದ್ದೇಶ್, ರಂಗನಾಥ್, ಧರ್ಮರಾಜ್ ನಂದೀಶ್, ಶಿವಕುಮಾರ್, ಕರಿಯಪ್ಪ, ಶಿವರಾಜ್, ವೀರಯ್ಯ ಎಇಇಗಳಾದ ಧನಂಜಯ, ಸಂತೋಷ್, ಕಾಡಾ ಅಧಿಕಾರಿ ಸರೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT