ಭಾನುವಾರ, ಮೇ 29, 2022
22 °C
ಹೆಚ್ಚುವರಿ ಆಧಾರ್ ಸೇವಾ ಕೇಂದ್ರ ಆರಂಭಿಸುವಂತೆ ಸಾರ್ವಜನಿಕರ ಒತ್ತಾಯ

ಶಿಕಾರಿಪುರ: ಆಧಾರ್ ಸೇವಾ ಕೇಂದ್ರಕ್ಕೆ ಜನರ ಅಲೆದಾಟ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ತಾಲ್ಲೂಕಿನ ಜನತೆ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ನಿತ್ಯವೂ ಅಲೆದಾಡುವ ಸ್ಥಿತಿ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಕಂಡು ಬಂದಿದೆ.

ಹಲವು ಸರ್ಕಾರಿ ಸೌಲಭ್ಯ ಪಡೆಯಲು ಹಾಗೂ ಬ್ಯಾಂಕ್ ವ್ಯವಹಾರಗಳಿಗಾಗಿ ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಆದರೆ ಪಟ್ಟಣದಲ್ಲಿ ಒಂದೇ ಅಧಾರ್ ಸೇವಾ ಕೇಂದ್ರ ಇರುವುದರಿಂದ ಜನರು ನೂತನ ಆಧಾರ್ ಕಾರ್ಡ್ ಪಡೆಯಲು ಹಾಗೂ ಕಾರ್ಡ್ ತಿದ್ದುಪಡಿ ಕಾರ್ಯಗಳಿಗಾಗಿ ಕೆಲಸ–ಕಾರ್ಯ ಬಿಟ್ಟು ಅಲೆದಾಡುತ್ತಿದ್ದಾರೆ. ಬೆಳಿಗ್ಗೆ 5ಕ್ಕೆ ಎಸ್ ಬಿಐ ಪಕ್ಕದಲ್ಲಿರುವ ಆಧಾರ್ ಕೇಂದ್ರದ ಬಳಿ ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಕಾಯುತ್ತಿರುವ ದೃಶ್ಯ ಕಾಣ ಸಿಗುತ್ತಿದೆ.

ಈ ಆಧಾರ್ ಸೇವಾ ಕೇಂದ್ರದಲ್ಲಿ ಪ್ರತಿ ದಿನ 15 ಮಂದಿಗೆ ಮಾತ್ರ ಸೇವೆ ಲಭ್ಯವಾಗುತ್ತಿದೆ. ಆಧಾರ್ ನೋಂದಣಿ ಕೇಂದ್ರಕ್ಕೆ ಯಾರು ಬೆಳಿಗ್ಗೆ ಬಂದು ಸರದಿ ಸಾಲಿನಲ್ಲಿ ನಿಂತಿರುತ್ತಾರೋ ಅವರಿಗೆ ಮಾತ್ರ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೌಲಭ್ಯ ದೊರೆಯುತ್ತಿದೆ. ಉಳಿದವರು ಗ್ರಾಮಕ್ಕೆ ವಾಪಸ್‌ ಹೋಗಬೇಕಿದೆ. ಮರು ದಿನ ಕೆಲಸ– ಕಾರ್ಯ ಬಿಟ್ಟು ಮತ್ತೆ ಬಂದು ನಿಲ್ಲುವಂಥ ಸ್ಥಿತಿ ಇದೆ.

ಇಲ್ಲಿಗೆ ಬರಲು ಗ್ರಾಮೀಣ ಭಾಗದ ಜನರಿಗೆ ಬೆಳಿಗ್ಗೆಯೇ ಬಸ್ ಸೌಲಭ್ಯ ಇಲ್ಲ. ಆದ್ದರಿಂದ ಸ್ವಂತ ವಾಹನ ಹೊಂದಿದವರು ಮಾತ್ರ ಆಧಾರ್ ಸೇವಾ ಕೇಂದ್ರಕ್ಕೆ ಬರುತ್ತಿದ್ದು, ವಾಹನ ಇಲ್ಲದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಕೆಲವು ಜನರು ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆಯೇ ಆಧಾರ್ ಸೇವಾ ಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತ ಘಟನೆಗಳು ಇವೆ.

‘ಪಟ್ಟಣದಲ್ಲಿ ಒಂದೇ ಆಧಾರ್ ಸೇವಾ ಕೇಂದ್ರ ಇರುವುದರಿಂದ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ವಿಳಂಬವಾಗುತ್ತಿದೆ. ಹೆಚ್ಚುವರಿ ಸೇವಾ ಕೇಂದ್ರಗಳನ್ನು ತೆರೆಯಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂಬುದು ಚಿಕ್ಕ ಕಲವತ್ತಿ ಗ್ರಾಮದ ನಿವಾಸಿ ಶ್ರೀಧರ್ ಒತ್ತಾಯಿಸಿದರು.

***

ಎಲ್ಲ ಗ್ರಾ.ಪಂಗಳಲ್ಲಿ ಆಧಾರ್ ಸೇವಾ ಕೇಂದ್ರ 

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಆಧಾರ್ ಸೇವಾ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೇವಾ ಕೇಂದ್ರಕ್ಕೆ ಅಗತ್ಯವಾದ ಕಂಪ್ಯೂಟರ್ ಸೇರಿದಂತೆ ವಿವಿಧ ಪರಿಕರಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.

-ಎಂ.ಪಿ. ಕವಿರಾಜ್, ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು