ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ ಜಲಪಾತ ಅಭಿವೃದ್ಧಿಗೆ ಯೋಜನೆ:ಡಿ.ಸಿ

ವಿಶ್ವದರ್ಜೆ ಪ್ರವಾಸಿ ತಾಣವಾಗಿ ಜೋಗ
Last Updated 28 ಸೆಪ್ಟೆಂಬರ್ 2020, 5:14 IST
ಅಕ್ಷರ ಗಾತ್ರ

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಅಗತ್ಯವಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ. ಶಿವಕುಮಾರ್ ತಿಳಿಸಿದರು.

ಇಲ್ಲಿಗೆ ಸಮೀಪದ ಜೋಗ ಜಲಪಾತದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೋಗ ಜಲಪಾತವನ್ನು ಸರ್ವ ಋತು ಪ್ರವಾಸಿ ತಾಣವಾಗಿ ಆಭಿವೃದ್ಧಿಪಡಿಸಿದರೆ ವರ್ಷಪೂರ್ತಿ ಪ್ರವಾಸಿಗರಿಗೆ ಪ್ರಕೃತಿಯ ನೈಜ ಸೌಂದರ್ಯವನ್ನು ಸವಿಯಲು ಅವಕಾಶವಾಗುತ್ತದೆ. ವಿಶ್ವದೆಲ್ಲೆಡೆಯಿಂದ ಪ್ರವಾಸಪ್ರಿಯರು ಜೋಗದ ವೀಕ್ಷಣೆಗೆ ಬರಲು ಅನುಕೂಲವಾಗುತ್ತದೆ. ಈ ವಿಚಾರವನ್ನು ಪ್ರಧಾನ ಕೇಂದ್ರವಾಗಿರಿಸಿ ನೀಲ ನಕ್ಷೆ ತಯಾರು ಮಾಡಲಾಗುತ್ತಿದೆ. ಸರ್ಕಾರ ಜಲಪಾತ ಪ್ರದೇಶದ ಅಭಿವೃದ್ಧಿಗೆ ಈಗಾಗಲೇ ₹120 ಕೋಟಿ ಅನುದಾನವನ್ನು ನೀಡಿದೆ. ಅನುದಾನಗಳನ್ನು ಸಮರ್ಪಕವಾಗಿ ಬಳಸಿ, ಜನೋಪಯೋಗಿ ಕಾರ್ಯಕ್ಕೆ ವಿನಿಯೋಗ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಕೊರೊನಾ ಆತಂಕದ ನಡುವೆಯೂ ಜಲಪಾತ ಪ್ರದೇಶದಲ್ಲಿ ಪ್ರವಾಸಿಗರ ಸುರಕ್ಷತೆಗೆ ಜೋಗ ನಿರ್ವಹಣಾ ಪ್ರಾಧಿಕಾರ ಮತ್ತು ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ಸಮರ್ಪಕವಾದ ಸೇವೆಗಳನ್ನು ಮಾಡಲಾಗಿದೆ. ಯಾವುದೇ ಮುಲಾಜು ಮರ್ಜಿಗೊಳಗಾಗದೇ ಆಗಮಿಸುವ ಎಲ್ಲಾ ಪ್ರವಾಸಿಗರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಲು ಆದೇಶ ಮಾಡಲಾಗಿದೆ. ಉತ್ತಮ ಭದ್ರತಾ ಮತ್ತು ನಿರ್ವಹಣಾ ಸಿಬ್ಬಂದಿ ಕಾರ್ಯ ನಿರ್ವಹಣೆಯೊಂದಿಗೆ ಕೊರೊನಾ ನಿಯಂತ್ರಣ ಮತ್ತು ಜಾಗೃತಿ ಕಾರ್ಯಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಾಧಿಕಾರದ ಪ್ರಧಾನ ದ್ವಾರದಿಂದ ಸೀತಾಕಟ್ಟೆ ಸೇತುವೆ ಸಮೀಪದವರೆಗೆ ಪಟ್ಟಣ ಪಂಚಾಯಿತಿ ಮತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿಗಳು ಸ್ವಚ್ಛತಾ ಅಭಿಯಾನವನ್ನು ಮಾಡಿದರು.

ಸಾಗರ ಉಪವಿಭಾಗಾಧಿಕಾರಿ ಡಾ. ನಾಗರಾಜ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಚ್. ರಾಮಕೃಷ್ಣ, ಕೆಪಿಸಿ ಅದೀಕ್ಷಕ ಎಂಜಿನಿಯರ್ ಕೆ.ಆರ್. ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಲಕ್ಷ್ಮೀನಾರಾಯಣ, ಸದಸ್ಯ ಕೆ.ಸಿ. ಹರೀಶ್ ಗೌಡ, ಜೆಎಂಎ ಮೇಲ್ವಿಚಾರಕ ಸರ್ಜಂಟ್ ನಿಸಾರ್, ಮಯೂರ ವ್ಯವಸ್ಥಾಪಕ ವಿಜಯೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT