ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ ಪ್ರಯೋಗಗಳಿಗೆ ವೇದಿಕೆ ಅವಶ್ಯ: ಬಿ.ವೈ.ರಾಘವೇಂದ್ರ

Last Updated 26 ಜನವರಿ 2023, 5:42 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾಸಂಸ್ಥೆಗಳು ಓದಿನ ಜೊತೆಗೆ ನವೀನ ಪ್ರಯೋಗಗಳನ್ನು ನಡೆಸುವ ಪೂರಕ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಬುಧವಾರ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ 400 ಕಿಲೊವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಮಾಜಿಕ ಸಂಶೋಧನಾ ಪ್ರಯೋಗಗಳು ಸಮಾಜದ ಉನ್ನತಿಗೆ ಅತಿ ಅವಶ್ಯಕ ವಿಚಾರವಾಗಿದ್ದು, ಸಂಶೋಧನಾ ಪ್ರಕ್ರಿಯೆಗಳಿಗೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕಿದೆ. ಪರಿವರ್ತಿತ ಸಮಾಜದಲ್ಲಿ ಪರಿಸರ ಪೂರಕ ನವೀನ ಪ್ರಯೋಗಗಳು ಅಗತ್ಯ. ಮಲೆನಾಡಿನ ಭಾಗದಲ್ಲಿ ಏನು ಇಲ್ಲದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎನ್ಇಎಸ್ ಸಂಸ್ಥೆ ನೀಡಿದ ಕೊಡೆಗೆ ಅವಿಸ್ಮರಣೀಯ. ಇಂದು ಶಿವಮೊಗ್ಗ ಜಿಲ್ಲೆ ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಬಲಿಷ್ಟ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿದೆ ಎಂದರು.

‘ಪರಿಸರದ ಮೇಲಿನ ಹಾನಿ ಸೂಕ್ಷ್ಮವಾಗಿ ಗಮನಿಸಿ, ಜವಾಬ್ದಾರಿಯುತ ನಡೆ ನಮ್ಮದಾಗಬೇಕಿದೆ. ಸೊಲಾರ್ ಯುನಿಟ್ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಆಧುನಿಕತೆಯ ಭರದಲ್ಲಿ ಪ್ರಕೃತಿಯ ಮೇಲಾಗುತ್ತಿರುವ ಒತ್ತಡ ಕಡಿಮೆಯಾಗಬೇಕಿದೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್ ಉಪಸ್ಥಿತರಿದ್ದರು.

ಪರಿಸರ ಸ್ನೇಹಿ ವಿದ್ಯುತ್ ಘಟಕ

‘ಎರಡು ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ 400 ಕಿಲೊವ್ಯಾಟ್ ಉತ್ಪಾದಿಸುವ ಸೌರ ವಿದ್ಯುತ್ ಘಟಕವು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇದರಿಂದ ಸುಮಾರು 12,000 ಟನ್ ಇಂಗಾಲ ಡೈಆಕ್ಸೈಡ್ ಕಡಿಮೆಯಾಗಲಿದೆ. ದೇಶಿಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ, ದಾಬಸ್ ಪೇಟೆಯಲ್ಲಿ ತಯಾರಾದ ಟಾಟಾ ಪವರ್ ಕಂಪನಿಯ ಉಪಕರಣ ಬಳಸಲಾಗಿದೆ’ ಎಂದು ಎನ್.ಇ.ಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಶ್ರಮಿಸಿದ ಎನ್.ಇ.ಎಸ್ ಮಾಜಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ನಿವೃತ್ತ ಉಪ ಪ್ರಾಂಶುಪಾಲರಾದ ಡಾ.ಎಲ್.ಕೆ.ಶ್ರೀಪತಿ, ಪ್ರಾಧ್ಯಾಪಕ ಡಾ.ಅಜ್ಜಣ್ಣ, ಟಾಟಾ ಕಂಪನಿಯ ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT