ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಅಲುಗಾಡಿಸುತ್ತಿದೆ ರಾಜಕಾರಣ: ಬಂಜಗೆರೆ ಜಯಪ್ರಕಾಶ್

ಸಂವಾದ ಕಾರ್ಯಕ್ರಮದಲ್ಲಿ ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿಕೆ
Last Updated 16 ಏಪ್ರಿಲ್ 2022, 6:53 IST
ಅಕ್ಷರ ಗಾತ್ರ

ಸಾಗರ: ಸಮಾನ ಅವಕಾಶ, ಸಮಾನ ಪ್ರಾತಿನಿಧ್ಯ, ಸಹಿಷ್ಣುತೆಯ ಭಾವ, ವೈವಿಧ್ಯದಲ್ಲಿ ಏಕತೆ, ಬಹುತ್ವ, ಅಂಚಿನಲ್ಲಿರುವ ವರ್ಗಗಳಿಗೆ ಪ್ರಾಶಸ್ತ್ಯ ಇಂತಹ ಸಂವಿಧಾನದ ಆಶಯಗಳನ್ನು ಬಲಪಂಥೀಯ ರಾಜಕಾರಣ ಅಲುಗಾಡಿಸುತ್ತಿದ್ದು, ಇದರಿಂದಾಗಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಶುಕ್ರವಾರ ಏರ್ಪಡಿಸಿದ್ದ ‘ಇವನಾರವ, ಇವನಾರವ ಎಂದೆಣಿಸದಿರಯ್ಯಾ’ ಎಂಬ ವಿಷಯದ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯದ ಸಿದ್ಧಾಂತ ಸಂವಿಧಾನದ ‘ಆತ್ಮ’ವಾಗಿದೆ. ಆದರೆ ಬಲಪಂಥೀಯ ರಾಜಕಾರಣ ಸಂವಿಧಾನದ ಸ್ವರೂಪವನ್ನು ಈಗಿರುವ ರೀತಿಯಲ್ಲೆ ಕಾಯ್ದುಕೊಳ್ಳುತ್ತಲೇ ಒಳಗಿನಿಂದಲೇ ಅದರ ಪ್ರಧಾನ ಆಶಯಗಳನ್ನು ಮುಕ್ಕಾಗಿಸುವ ತಂತ್ರವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿದೆ. ಸಾಮಾಜಿಕ ನ್ಯಾಯದ ಲಾಭ ಪಡೆದಿರುವ ಬಹುಸಂಖ್ಯಾತರು ಇದನ್ನು ನೋಡಿಯೂ ನೋಡದಂತೆ ಮೌನವಾಗಿರುವುದು ಬಲಪಂಥದ ರಾಜಕಾರಣದ ಹುಮ್ಮಸ್ಸು ಹೆಚ್ಚಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಿಂದೆ ಬಲಪಂಥದ ಕೋಮುವಾದಿ ರಾಜಕಾರಣ ಮುನ್ನೆಲೆಗೆ ಬರುತ್ತಿದೆ ಎಂಬ ಸನ್ನಿವೇಶ ನಿರ್ಮಾಣವಾದಾಗಲೆಲ್ಲಾ ಅದಕ್ಕೆ ಪ್ರತಿಯಾಗಿ ಉತ್ತರ ಕೊಡುವ ರೈತ, ದಲಿತ, ಭಾಷಾ ಚಳವಳಿ ಪ್ರಖರವಾಗಿತ್ತು. ಈಗ ಆ ಜನಪರ ಚಳವಳಿಗಳು ನಿಸ್ತೇಜಗೊಂಡಿರುವುದು ಕೋಮುವಾದ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದೆ. ಜಾಗತೀಕರಣದ ಲಾಭ ಪಡೆದಿರುವ ಮೇಲ್ವರ್ಗ, ಮಾಧ್ಯಮ ಬಲಪಂಥದ ರಾಜಕಾರಣವನ್ನು ನೀರೆರೆದು ಪೋಷಿಸುತ್ತಿದೆ ಎಂದು ವಿಶ್ಲೇಷಿಸಿದರು.

ಪ್ರಬಲ ಜಾತಿಗಳನ್ನು ಹಿಂದುಳಿದ ವರ್ಗದ ಜಾತಿಗಳ ಪಟ್ಟಿಗೆ ಸೇರಿಸುವ ಮೂಲಕ ಬಲಪಂಥದ ರಾಜಕಾರಣ ಸಮಾನತೆಯ ಸಿದ್ಧಾಂತವನ್ನೇ ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ. ದಲಿತರಲ್ಲೂ ಬಹುಸಂಖ್ಯಾತ ಜಾತಿಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಕಡಿಮೆ ಸಂಖ್ಯೆ ಇರುವ ಜಾತಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಈ ತಪ್ಪನ್ನು ಬಿಜೆಪಿ ಮಾತ್ರವಲ್ಲದೆ ಇತರ ರಾಜಕೀಯ ಪಕ್ಷಗಳೂ ಮಾಡುತ್ತಿವೆ ಎಂದರು.

‘ಒಂದು ಸಮುದಾಯದ ವ್ಯಕ್ತಿಅಥವಾ ಗುಂಪು ಮಾಡುವ ತಪ್ಪನ್ನೇಮುಂದಿಟ್ಟುಕೊಂಡು ಇಡೀ ಸಮುದಾಯದ ಅಸ್ತಿತ್ವವನ್ನು ಅಲುಗಾಡಿಸುವ ಮಟ್ಟಕ್ಕೆ ಮುಂದಾಗುವುದು ಕಿಡಿಗೇಡಿತನ. ನಮ್ಮ ಆಹಾರ, ಸಂಪ್ರದಾಯ, ಆಚರಣೆ, ವ್ಯಾಪಾರ ವಹಿವಾಟು ಇವುಗಳನ್ನು ಪರಸ್ಪರ ಪ್ರೀತಿ ಮತ್ತು ಗೌರವದ ಪ್ರಶ್ನೆಯಾಗಿ ನೋಡಬೇಕೆ ಹೊರತು ಜಿದ್ದು ಅಥವಾ ದ್ವೇಷದ ನೆಲೆಯಲ್ಲಿ ನೋಡಬಾರದು’ ಎಂದರು.

ಸಂವಾದ ನಡೆಯಿತು. ಪ್ರಮುಖರಾದ ಲಕ್ಷ್ಮಣ್ ಸಾಗರ್, ಎಚ್.ಬಿ. ರಾಘವೇಂದ್ರ, ರವಿ ಕುಗ್ವೆ ಇದ್ದರು.

ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರೆ ಬಿಜೆಪಿಯೂ ಅಲ್ಲಿಗೆ ಹೋಗಬೇಕಾಗುತ್ತದೆ

ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗುವ ಸನ್ನಿವೇಶ ಬಂದರೆ ಬಿಜೆಪಿಯವರೂ ರಾಜಕೀಯ ಮಾಡಲು ಅಲ್ಲಿಗೇ ಹೋಗಬೇಕಾಗುತ್ತದೆ. ಏಕೆಂದರೆ ಅವರಿಗೆ ಆಗ ರಾಜಕೀಯ ಮಾಡಲು ಇಲ್ಲಿ ವಿಷಯವೇ ಇರುವುದಿಲ್ಲ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.

‘ವೈವಿಧ್ಯ ಸಮಾಜ ಬೆಳೆಯಲು ಸಹಕಾರಿಯಾಗಿದೆಯೇ ಹೊರತು ಯಾವತ್ತೂ ಅದೊಂದು ಅಡಚಣೆಯಾಗಿಲ್ಲ. ಆದರೆ ಬಲಪಂಥೀಯ ರಾಜಕಾರಣ ಭಿನ್ನತೆಯನ್ನೇ ಪ್ರತ್ಯೇಕತೆ ಎಂದು ತಪ್ಪಾಗಿ ಬಿಂಬಿಸುವ ಮೂಲಕ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ’ ಎಂದರು.

‘ಉಕ್ರೇನ್‌ನಲ್ಲಿ ಸಾವಿಗೀಡಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವಿಗೆ ಮೀಸಲಾತಿಯೇ ಕಾರಣ ಎಂದು ಹುಯಿಲು ಎಬ್ಬಿಸುವ ಬಲಪಂಥೀಯ ರಾಜಕಾರಣದ ಹಿಂದೆ ಮೀಸಲಾತಿ ಭಿಕ್ಷೆ ಎಂಬ ಪ್ರಜ್ಞೆಯನ್ನು ವಿಸ್ತರಿಸುವ ಚಿಂತನೆ ಅಡಗಿದೆ. ಬಲಪಂಥೀಯ ರಾಜಕಾರಣಕ್ಕೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರು ತೋರಿಕೆಯ ಶತ್ರುಗಳೇ ಹೊರತು, ನಿಜವಾದ ಶತ್ರುಗಳು ದಲಿತರು, ಶೂದ್ರರು, ಮಹಿಳೆಯರು ಆಗಿದ್ದಾರೆ’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT