ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: '50 ದಿನಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ'

ಪ್ರಜಾಧ್ವನಿ ಯಾತ್ರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ
Last Updated 9 ಫೆಬ್ರುವರಿ 2023, 6:09 IST
ಅಕ್ಷರ ಗಾತ್ರ

ಭದ್ರಾವತಿ: ‘ಇನ್ನು 50 ದಿನಗಳು ಮಾತ್ರ ಕಾಯಿರಿ. ರಾಜ್ಯದ ಜನತೆ ನಿಮ್ಮನ್ನು (ಬಿಜೆಪಿ) ಗಂಟುಮೂಟೆ ಕಟ್ಟಿ ಮನೆಗೆ ಕಳಿಸಿ ಕೊಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರ ನಡೆಸಲು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.

ನಗರದಲ್ಲಿ ಬುಧವಾರ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ನಾವು ಹುಟ್ಟುವಾಗ ಯಾರೂ ಅರ್ಜಿ ಸಲ್ಲಿಸಿ ಯಾವುದೇ ಜಾತಿಯಲ್ಲಿ ಹುಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ಎಲ್ಲಾ ಜಾತಿ, ವರ್ಗ ಹಾಗೂ ಧರ್ಮಕ್ಕೂ ಸೇರಿದ ಪಕ್ಷ. ಆದರೆ ಬಿಜೆಪಿ ಮಾತ್ರ ಇದಕ್ಕೆ ವಿರುದ್ಧವಾದ ನೀತಿ ಅನುಸರಿಸುತ್ತಿದೆ. ಬಿಜೆಪಿ ಬರೀ ಜಾತಿಯ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿಯ ಮೇಲೆ ರಾಜಕಾರಣ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರ 150 ಎಕರೆ ಗಣಿ ಕೊಟ್ಟರೂ ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆ ಮಾಡದೇ ಮೈಸೂರು ಮಹಾರಾಜರು ಕೊಟ್ಟ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,

ಕಳೆದ ಚುನಾವಣೆ ವೇಳೆ ಬಿ.ಎಸ್ ಯಡಿಯೂರಪ್ಪ ಕಾರ್ಖಾನೆಗೆ ₹ 1 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಕೇಂದ್ರ ಸಚಿವರೊಬ್ಬರು ಬಂದು ₹6 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಆದರೆ ಕೊಡಲಿಲ್ಲ ಎಂದರು.

ರಾಜ್ಯದ ಜನರು ಡಬಲ್ ಎಂಜಿನ್ ಸರ್ಕಾರಕ್ಕೆ ಅಧಿಕಾರ ಕೊಟ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೈಯಲ್ಲಿ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿವಾದಂತಿದೆ.
ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ. ರಾಜ್ಯದಲ್ಲಿ ನಾಯಕತ್ವ ಇಲ್ಲದ ಬಿಜೆಪಿ ಈಗ ಮೋದಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಎಸ್.ಪಿ. ದಿನೇಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಇಕ್ಕೇರಿ ರಮೇಶ್, ಭದ್ರಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಪ್ರಮುಖರಾದ ಶಿವಾನಂದ, ಮಾರ್ಟಿಸ್ ಮಣಿ ಶೇಖರ್, ಭದ್ರಾವತಿ ಕಾಂಗ್ರೆಸ್‌ನ ಅಧ್ಯಕ್ಷ ಅಫ್ಲಾಬ್ ವಿನೋದ್ ಕುಮಾರ್, ಕಾರ್ಮಿಕ ಸಂಘ ಅಧ್ಯಕ್ಷ ಸುರೇಶ್‌ ಇದ್ದರು.

***

‘ಕೋಮು ಗಲಭೆಗೆ ಬಿಜೆಪಿ ಬೆಂಬಲ’

ಜಿಲ್ಲೆಯಲ್ಲಿ ಕೋಮು ಗಲಭೆ ಮಾಡಿಸಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಶಾಂತಿ ಮೂಡಿಸಿ, ಸಂಜೆ ಆರು ಗಂಟೆಗೆ ಎಲ್ಲ ಅಂಗಡಿ ಮುಂಗಟ್ಟು ಮುಚ್ಚಿಸುತ್ತಿದೆ. ಹೀಗಾಗಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಎಷ್ಟು ಯೋಜನೆ ಜಾರಿಯಾಗಿವೆ ಎಂಬುದಕ್ಕೆ ಬಿ.ಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಶಾಸಕ ಈಶ್ವರಪ್ಪ ಉತ್ತರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಛೇಡಿಸಿದರು.

ಬಿಜೆಪಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕುತ್ತಿಗೆ ಕೊಯ್ದಿದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರ. ಶಾಸಕ ಈಶ್ವರಪ್ಪ ಸಚಿವರಾಗಿದ್ದಾಗ ಶೇ 40 ಕಮಿಷನ್ ಆಸೆಗೆ ಒಬ್ಬ ಅಮಾಯಕನ ಜೀವ ತೆಗೆದರು. ವಿಧಾನ ಸೌಧದ ಗೋಡೆ ಕೂಡ ಕಾಸು.. ಕಾಸು ಎನ್ನುತ್ತಿವೆ ಎಂದು ಲೇವಡಿ ಮಾಡಿದರು.

***

‘ಅಧಿಕಾರಕ್ಕೆ ಬಂದರೆ ವಿಐಎಸ್‌ಎಲ್‌ ಆರಂಭ’

ವಿಐಎಸ್ ಎಲ್ ಕಾರ್ಖಾನೆ ಸರ್ಕಾರದ ಆಸ್ತಿ. ವೈಯಕ್ತಿಕ ಸ್ವತ್ತಲ್ಲ. ಹೀಗಾಗಿ ಕಾರ್ಖಾನೆ ಮುಚ್ಚುವ ವಿಚಾರದಲ್ಲಿ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ವಿಐಎಸ್ಎಲ್ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿ ಮತ ಕೇಳಲು ಜನರ ಬಳಿಗೆ ಹೋಗಲು ಅವರಿಗೆ ನೈತಿಕತೆ ಇಲ್ಲ. ಎಂಪಿಎಂ ಮತ್ತು ವಿಐಎಸ್ ಎಲ್ ಕಾರ್ಖಾನೆಗಳನ್ನು ಸರ್ಕಾರಕ್ಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರೆ ನಿಮ್ಮಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅರ್ಥವಾಗುತ್ತಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ವಿಐಎಸ್ಎಲ್ ಉಳಿಸಿಕೊಳ್ಳುವುದಾಗಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದರು. ಅವರು ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ನಮ್ಮ ಪಕ್ಷ ಖಂಡಿತಾ ಅಧಿಕಾರಕ್ಕೆ ಬರಲಿದೆ. ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಯನ್ನು ಹೇಗಾದರು ಮಾಡಿ ಉಳಿಸಿಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT