ಅಸಂಘಟಿತ ವಲಯದ ಸಂಘಟನೆಗೆ ಆದ್ಯತೆ: ಬಿನಯಕುಮಾರ್ ಸಿನ್ಹಾ

ಭದ್ರಾವತಿ: ‘ನೌಕರ ವರ್ಗ ವಿಶಾಲವಾಗಿ ಬೆಳೆದಿದ್ದು, ಸಂಘಟನೆಯ ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ ಅದನ್ನು ಸರಿಯಾಗಿ ಬಳಸಿಕೊಂಡು ಅಸಂಘಟಿತ ವಲಯದ ಕಾರ್ಮಿಕರ ಹಿತಕ್ಕೆ ಕೆಲಸ ಮಾಡೋಣ’ ಎಂದು ಭಾರತೀಯ ಮಜ್ದೂರ್ ಸಭಾ (ಬಿಎಂಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿನಯಕುಮಾರ್ ಸಿನ್ಹಾ ಹೇಳಿದರು.
ಇಲ್ಲಿನ ವಿಐಎಸ್ಎಲ್ ಅತಿಥಿಗೃಹದಲ್ಲಿ ಶನಿವಾರ ಆರಂಭವಾದ ಬಿಎಂಎಸ್ ತ್ರೈಮಾಸಿಕ ಸಮ್ಮೇಳನವನ್ನು ವರ್ಚುವಲ್ ಮೂಲಕ ದೆಹಲಿಯಿಂದ ಉದ್ಘಾಟಿಸಿ ಮಾತನಾಡಿದರು.
ಬಿಎಂಎಸ್ ಎಂದೂ ಕಾರ್ಮಿಕರ ಹಿತಕ್ಕೆ ಬದ್ಧವಾಗಿ ರಾಷ್ಟ್ರೀಯ ಚಿಂತನೆಗಳಡಿ ಕೆಲಸ ಮಾಡುತ್ತಿದ್ದು, ದೇಶದ ಹಿತದ ಜತೆಗೆ ಶ್ರಮಿಕವರ್ಗದ ರಕ್ಷಣೆಗೆ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದರು.
‘ಇಂದು ಕೇಂದ್ರ ಸರ್ಕಾರ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ₹ 300 ಕೋಟಿ ಯೋಜನೆ ರೂಪಿಸಿದ್ದು ಇದರಿಂದ ಉದ್ಯೋಗ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಲಿದೆ. ಇದರ ಜತೆಗೆ ನಾಲ್ಕು ವಿಶೇಷ ಕಾರ್ಮಿಕ ಕಾಯ್ದೆಗಳನ್ನು ರಚಿಸುವ ಮೂಲಕ ಅದನ್ನು ಜಾರಿ ಮಾಡುವ ಯತ್ನ ನಡೆಸಿದ್ದು, ಇದರಲ್ಲಿನ ಸಾಧಕ–ಬಾಧಕ ಕುರಿತು ಚರ್ಚೆಗಳು ನಡೆದಿವೆ. ಬಿಎಂಎಸ್ ನಿಲುವಿನ ಕುರಿತಾಗಿ ಎಲ್ಲಾ ಕಾರ್ಮಿಕ ಸಂಘಟನೆಗಳು ಕಾತುರದಿಂದ ಕಾಯುತ್ತಿವೆ. ಈ ಹಂತದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದ್ದು ಅದಕ್ಕೆ ತಕ್ಕಂತೆ ನಮ್ಮ ಸಂಘಟನಾ ಶಕ್ತಿ ಹೆಚ್ಚಬೇಕು’ ಎಂದು ಸಲಹೆ ನೀಡಿದರು.
ಭಾರತೀಯ ಚಿಂತನೆಗೆ ಒತ್ತು: ವೀದೇಶಿ ಕೇಂದ್ರಿತ ಚಿಂತನೆಯಡಿ ಆರಂಭವಾದ ಕಾರ್ಮಿಕ ಸಂಘಟನೆಗಳು ದೇಶದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ವಿಚಾರ ಹೊತ್ತು ಆರಂಭವಾದ ಸಂಘಟನೆ ಬಿಎಂಎಸ್. ಮೂವತ್ತು ವರ್ಷಗಳಿಂದ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಎಂಬ ಕೀರ್ತಿ ಹೊತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಬಿಎಂಎಸ್ ಯಾವುದೇ ರಾಜಕೀಯ ಪಕ್ಷದ ಚಿಂತನೆಗೆ ಅಂಟಿಲ್ಲ. ಬದಲಾಗಿ ರಾಷ್ಟ್ರೀಯ ಸೈದ್ಧಾಂತಿಕ ಚಿಂತನೆಗೆ ಅಂಟಿಕೊಂಡು ಕೆಲಸ ಮಾಡುತ್ತಿದೆ. ಕಾರ್ಮಿಕರ ಯಾವುದೇ ಸಮಸ್ಯೆ ಎದುರಾದರೂ ಯಾವುದೇ ಸರ್ಕಾರವಿದ್ದರೂ ಮೊದಲು ದನಿ ಎತ್ತುವುದು ಬಿಎಂಎಸ್ ಎಂದು ಹೇಳಿದರು.
‘ಕಾರ್ಮಿಕರ ಪರ ದನಿಯಾಗಿ ನಮ್ಮದೇ ಪಕ್ಷದ ಮುಖ್ಯಮಂತ್ರಿ ಎದುರಿಗೆ ಬೇಡಿಕೆಗಳನ್ನು ಮಂಡಿಸಿದ್ದೇವೆ. ಇದನ್ನು ಮನಗಂಡ ಮುಖ್ಯಮಂತ್ರಿ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಇತಿಶ್ರೀ ಹಾಡಿ ಕಾರ್ಮಿಕರ ಪರ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.
ಬಿಎಂಎಸ್ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ದೊರೈರಾಜ್, ರಾಷ್ಟ್ರೀಯ ಪಿಎಫ್ ಮಂಡಳಿ ಸದಸ್ಯ ಜಿ.ಮಲ್ಲೇಶಮ್, ಪ್ರಧಾನ ಕಾರ್ಯದರ್ಶಿ ಎನ್.ಕೆ. ಪ್ರಕಾಶ್, ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ, ಹಿರಿಯ ಮುಖಂಡರಾದ ಡಿ.ಕೆ.ಸದಾಶಿವ, ಕೆ.ಸೂರ್ಯನಾರಾಯಣ, ರಾಮಮೂರ್ತಿ, ಲೋಕೇಶ್, ಗೀತಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.