ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ–ಗದಗ ಕ್ಷೇತ್ರ: ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭ?

ಹಾವೇರಿ–ಗದಗ ಕ್ಷೇತ್ರ: ಈಶ್ವರಪ್ಪ ಪುತ್ರ ಕಾಂತೇಶ ಸಕ್ರಿಯ
Published 23 ಆಗಸ್ಟ್ 2023, 6:20 IST
Last Updated 23 ಆಗಸ್ಟ್ 2023, 6:20 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಇನ್ನೂ 9 ತಿಂಗಳು ಬಾಕಿ ಇರುವಂತೆಯೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ ಹಾವೇರಿ–ಗದಗ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

‘ಹಾವೇರಿ–ಗದಗ ಕ್ಷೇತ್ರದ ಹಾಲಿ ಸಂಸದ, ಬಿಜೆಪಿಯ ಶಿವಕುಮಾರ್ ಉದಾಸಿ ಮತ್ತೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ. ಅದನ್ನು ಅವರೂ ಬಹಿರಂಗವಾಗಿ ಹೇಳಿದ್ದಾರೆ. ಉದಾಸಿ ಅವರು ಹಿಂದೆಸರಿದಲ್ಲಿ, ಪಕ್ಷ ಹೊಸ ಮುಖಕ್ಕೆ ಅವಕಾಶ ನೀಡಲಿದೆ. ನನ್ನ ಪುತ್ರನಿಗೆ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧನಿದ್ದಾನೆ’ ಎಂದು ಕೆ.ಎಸ್. ಈಶ್ವರಪ್ಪ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅಂತೆಯೇ ಕಾಂತೇಶ್ ಆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಕಾಂತೇಶ ಹಾವೇರಿ ಕ್ಷೇತ್ರದಲ್ಲಿ ಈಗಾಗಲೇ ಸಂಚಾರ ಆರಂಭಿಸಿದ್ದಾರೆ. ಮಂಗಳವಾರ ಹಾವೇರಿ ತಾಲ್ಲೂಕಿನ ಗುತ್ತಲ, ಬರಡಿ, ಕುರಗುಂದ, ನಿರಲಗಿ, ಕುಂಚರಗಟ್ಟಿ, ಹಾವನೂರು, ಬೆಳೋಗಿ, ಮೇವುಂಡಿ, ತೆರೆದಹಳ್ಳಿ, ಬೊಮ್ಮನಕಟ್ಟೆಯ ಬಿಜೆಪಿ ಪ್ರಮುಖರ ಸಭೆ ನಡೆಸಿದ್ದಾರೆ. ಪುತ್ರ ಕ್ಷೇತ್ರದಲ್ಲಿ ಸಕ್ರಿಯರಾಗುವ ಮುನ್ನ ಹಾವೇರಿಯ ಸಿಂಧಗಿ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆ ಬಳಿ ಈಶ್ವರಪ್ಪ ಕುಟುಂಬ ಶತರುದ್ರಾಭಿಷೇಕ, ರುದ್ರ ಹವನ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಂಘಟನೆಯ ಬಲ: ಈಶ್ವರಪ್ಪ

‘ಪುತ್ರ ಕಾಂತೇಶ ಸಂಘಟನೆ (ಆರ್‌ಎಸ್‌ಎಸ್) ಮೂಲಕ ಬೆಳೆದವನು. ಎಂಟು ವರ್ಷಗಳಿಂದ ಅಲ್ಲಿಯೇ (ರಾಣೆಬೆನ್ನೂರು) ಮನೆ ಮಾಡಿ ವಾಸವಿದ್ದಾನೆ. ಅಲ್ಲಿಯೇ ಕಾಲೇಜು ಇದೆ. ಆ ಭಾಗಕ್ಕೆ ಹೊಸಬ ಅಲ್ಲ. ಪಕ್ಷದ ಅಲ್ಲಿನ ಪ್ರಮುಖರು ಅವನಿಗೆ ಗೊತ್ತು. ಹೀಗಾಗಿ ಅಲ್ಲಿಯ (ಹಾವೇರಿ–ಗದಗ) ಟಿಕೆಟ್ ಆಕಾಂಕ್ಷಿಯಾಗಿದ್ದಾನೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

‘ಹಾವೇರಿ–ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಭಾ ಕ್ಷೇತ್ರಗಳೊಂದಿಗೆ ಪುತ್ರ ಮುಂಚಿನಿಂದಲೂ ಸಂಪರ್ಕ ಇಟ್ಟುಕೊಂಡಿದ್ದಾನೆ. ನಾಡಿನ ಎಲ್ಲಾ ಸಮುದಾಯಗಳ ಮಠಾಧೀಶರು ಆತನ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಗೆದ್ದವರು  ಸ್ಪರ್ಧೆಗೆ ಒತ್ತಾಯ ಮಾಡಿದ್ದಾರೆ. ಕಾರ್ಯಕರ್ತರ ದೊಡ್ಡ ಗುಂಪು ಬೆನ್ನಿಗಿರುವುದು ಆತನಿಗೆ ಪೂರಕವಾಗಿದೆ’ ಎಂದರು.

‘ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವವರೆಗೂ ಕಾಂತೇಶ ಅಲ್ಲಿ ಪಕ್ಷದ ಯಾವುದೇ ವೇದಿಕೆಗೆ ಹೋಗುವುದಿಲ್ಲ. ಕೇವಲ ಹಿರಿಯರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದಾನೆ’ ಎಂದು ಈಶ್ವರಪ್ಪ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾಂತೇಶ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಕೆ.ಇ.ಕಾಂತೇಶ
ಕೆ.ಇ.ಕಾಂತೇಶ

Cut-off box - ಕಾಂತೇಶನಿಗೆ ಉದಾಸಿ ಆಶೀರ್ವಾದ: ಈಶ್ವರಪ್ಪ ‘ಹಾವೇರಿ–ಗದಗ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರ ಜೊತೆಯೂ ನಮ್ಮ ಬಾಂಧವ್ಯ ತುಂಬಾ ಚೆನ್ನಾಗಿದೆ. ಅವರು ಕಾಂತೇಶ ಬಗ್ಗೆ ಬಹಳ ಪ್ರೀತಿಯಿಂದ ಮಾತನಾಡಿ ಒಳ್ಳೆಯದಾಗಲಿ ಎಂದು ಆಶೀರ್ವಾದ ಕೂಡ ಮಾಡಿದ್ದಾರೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು. ‘ವಿಧಾನಸಭೆ ಚುನಾವಣೆಯಲ್ಲಿ ನಾನು ಟಿಕೆಟ್‌ ತ್ಯಾಗ ಮಾಡಿದ್ದಕ್ಕೂ ಪುತ್ರನಿಗೆ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೇಳುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ ಅವರು ‘ಅದೇನು ತ್ಯಾಗ ಅಲ್ಲ. ಪಕ್ಷ ಕೊಟ್ಟ ಸೂಚನೆಯನ್ನು ಪಾಲನೆ ಮಾಡಿದ್ದೇನೆ. ಪಕ್ಷ ನಿಷ್ಠೆಗೂ ಇದಕ್ಕೆ ಸಂಬಂಧವಿಲ್ಲ’ ಎಂದರು. ‘ವಿಧಾನ ಪರಿಷತ್‌ಗೆ ಆಯ್ಕೆ ಸೇರಿದಂತೆ ಇನ್ನು ಮುಂದೆ ಯಾವುದೇ ಸಕ್ರಿಯ ಚುನಾವಣಾ ರಾಜಕೀಯಕ್ಕೆ ನಾನು ಬರುವುದಿಲ್ಲ. ಪಕ್ಷದ ಸಂಘಟನೆ ವಿಚಾರದಲ್ಲಿ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ’ ಎಂದು ಅವರು ಸ್ಪಷ್ಪಡಿಸಿದರು.

Cut-off box - ಬಿಜೆಪಿ ಭದ್ರಕೋಟೆಯತ್ತ ಚಿತ್ತ.. ಶಿರಹಟ್ಟಿ ಗದಗ ರೋಣ ಹಾನಗಲ್ ಹಾವೇರಿ ಬ್ಯಾಡಗಿ ಹಿರೆಕೆರೂರು ರಾಣೆಬೆನ್ನೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಾವೇರಿ–ಗದಗ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎನಿಸಿದೆ. ಹಾಲಿ ಸಂಸದ ಶಿವಕುಮಾರ ಉದಾಸಿ 2009ರಿಂದ ಇಲ್ಲಿಯವರೆಗೆ ಸತತ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT