ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | 1,34,149 ಮಕ್ಕಳಿಗೆ ಲಸಿಕೆ ಗುರಿ

ಪೋಲಿಯೊ ಲಸಿಕೆ ಆಂದೋಲನದ ಪೂರ್ವಸಿದ್ಧತಾ ಸಭೆಯಲ್ಲಿ ಎಡಿಸಿ
Last Updated 22 ಫೆಬ್ರುವರಿ 2022, 5:20 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಫೆ.27ರಂದು ಪೋಲಿಯೊ ಲಸಿಕೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ ಗ್ರಾಮಾಂತರ ಪ್ರದೇಶದ 89,807, ನಗರ ಪ್ರದೇಶದ 44,342 ಮಕ್ಕಳು ಸೇರಿ ಒಟ್ಟು 1,34,149 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಳ್ಳಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಲಿಯೊ ಲಸಿಕೆ ಆಂದೋಲನದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ವಲಸಿಗರು, ರೈಲು ನಿಲ್ದಾಣ, ಬಸ್‍ನಿಲ್ದಾಣ, ಕೊಳೆಗೇರಿ, ಅಲೆಮಾರಿಗಳು, ಇಟ್ಟಿಗೆ ಸುಡುವ ಗೂಡುಗಳು, ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ನೆಲೆಸಿರುವ ಮಕ್ಕಳು ಸೇರಿ ಯಾವುದೇ ಪ್ರದೇಶದಲ್ಲಿನ ಒಂದು ಮಗುವೂ ಲಸಿಕೆ ಆಂದೋಲನದಿಂದ ಹೊರಗುಳಿಯದಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗೆ ಸೂಚಿಸಿದರು.

ಆಂದೋಲನಕ್ಕೆ ನಿಯೋಜಿತರಾದ ವೈದ್ಯಾಧಿಕಾರಿ ನಿರ್ಲಕ್ಷ್ಯ ತೋರದೆ, ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮನ್ವಯ ಕಾಯ್ದುಕೊಳ್ಳಬೇಕು. ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗವನ್ನೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊರೊನಾ ಲಸಿಕೆ ಶೇ 100 ಗುರಿ: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಶೇ 100ರಷ್ಟು ಲಸಿಕೆ ನೀಡಲಾಗಿದೆ. ದ್ವಿತೀಯ ಹಂತದಲ್ಲಿ ಶೇ 89ರಷ್ಟು ಲಸಿಕೆ ಹಾಕಲಾಗಿದ್ದು, ಮಾರ್ಚ್ 10ರೊಳಗೆ ಶೇ 100ರ ಗುರಿ ತಲು‍‍ಪಲು ಶ್ರಮಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ. ರಮೇಶ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜಿ.ಜಿ. ಸುರೇಶ್, ವೆಂಕಟೇಶ್, ಡಾ.ನಟರಾಜ್ ಅವರೂ ಇದ್ದರು.

ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಲು ಮನವಿ
ಪೋಲಿಯೊ ಆಂದೋಲನದ ಯಶಸ್ಸಿಗೆ 1,051 ಬೂತ್‍ಗಳನ್ನು ರಚಿಸಲಾಗಿದ್ದು, 2,391 ತಂಡಗಳನ್ನು ನಿಯೋಜಿಸಲಾಗಿದೆ. 3,919 ವ್ಯಾಕ್ಸಿನೇಟರ್ಸ್, 205 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 38 ಟ್ರಾನ್ಸಿಟ್ ತಂಡ, 30 ಸಂಚಾರಿ ತಂಡ, 600 ಮಂದಿ ಆರೋಗ್ಯ ಸಿಬ್ಬಂದಿ ಮತ್ತು ಮೇಲ್ವಿಚಾರಕರು, 2,384 ಅಂಗನವಾಡಿ ಕಾರ್ಯಕರ್ತೆಯರು, 1,325 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 4,309 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

ಆಂದೋಲನಕ್ಕೆ ಅಗತ್ಯವಿರುವ 8,454 ವಯಲ್ಸ್ ಲಸಿಕೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. 5 ವರ್ಷದೊಳಗಿನ ಮಕ್ಕಳಿರುವ ಮನೆಗಳ ಪೋಷಕರು ತಮ್ಮ ಮಕ್ಕಳನ್ನು ನಿಗದಿತ ದಿನಾಂಕದಂದು ತಮ್ಮ ಮನೆಗೆ ಸಮೀಪದ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT