ಶಿವಮೊಗ್ಗ: ಕೋಮು ಗಲಭೆ, ಬಂದ್, ಕರ್ಫ್ಯೂ, ನಿಷೇಧಾಜ್ಞೆಗಳಿಂದ ನಲುಗಿರುವ ಶಿವಮೊಗ್ಗದ ಆರ್ಥಿಕತೆಗೆ ಉತ್ತೇಜನ ನೀಡಲು ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ‘ಶಿವಮೊಗ್ಗ ಹಬ್ಬ’ ಆಚರಣೆಗೆ ಮುಂದಾಗಿದೆ.
ಶಿವಮೊಗ್ಗ ಅಂದರೆ ಬರೀ ಗಲಭೆಯ ತಾಣವಲ್ಲ. ಬದಲಿಗೆ, ಇಲ್ಲಿ ಪ್ರಕೃತಿದತ್ತ ಸಮೃದ್ಧಿ ಇದೆ. ಪ್ರೀತಿ–ವಿಶ್ವಾಸ ಇದೆ. ಮಲೆನಾಡಿನ ಆತಿಥ್ಯವಿದೆ. ಜೊತೆಗೆ ಸುಭದ್ರ ಬದುಕು ಇದೆ ಎಂಬುದನ್ನು ಹೊರ ಜಗತ್ತಿಗೆ ತೋರಿಸಲು ಈ ಹಬ್ಬ ವೇದಿಕೆ ಆಗಲಿದೆ ಎಂಬುದು ಚೇಂಬರ್ ಆಫ್ ಕಾರ್ಮಸ್ ಆಶಯ.
‘ಈ ಹಬ್ಬದ ಮೂಲಕ ಶಿವಮೊಗ್ಗದ ಇನ್ನೊಂದು ಮುಖವನ್ನು ಜಗತ್ತಿಗೆ ಪರಿಚಯಿಸಲು ಉದ್ದೇಶಿಸಿದ್ದೇವೆ’ ಎಂದು ಅಧ್ಯಕ್ಷ ಎನ್.ಗೋಪಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಹಬ್ಬ ಬಹುತೇಕ ಶಿವಮೊಗ್ಗದ ಉದ್ಯಮವನ್ನು ಅವಲಂಬಿಸಿರುತ್ತದೆ. ಸಾಂಸ್ಕೃತಿಕ ಹಿರಿಮೆಯ ಸ್ಪರ್ಶವೂ ಇರಲಿದೆ. ಶಿವಮೊಗ್ಗದಲ್ಲಿ ಉತ್ಪಾದನೆಯಾಗುವ ₹ 400ರಿಂದ ₹ 500 ಕೋಟಿ ಮೊತ್ತದ ವಸ್ತುಗಳು ಪ್ರತೀ ವರ್ಷ ವಿದೇಶಕ್ಕೆ ರಫ್ತು ಆಗುತ್ತವೆ. ಅದೂ ಸೇರಿದಂತೆ ಇಲ್ಲಿನ ಉದ್ದಿಮೆಗಳ ವೈಶಿಷ್ಟ್ಯವನ್ನೂ ಹಬ್ಬದ ಮೂಲಕ ಜನರಿಗೆ ಪರಿಚಯಿಸಲಾಗುವುದು ಎಂದು ವಿವರಿಸಿದರು.
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಡಿಸೆಂಬರ್ 1ರಿಂದ 20ರವರೆಗೆ ಈ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ ಚೇಂಬರ್ ಪದಾಧಿಕಾರಿಗಳ ಸಭೆ ನಡೆಸಿ ಶೀಘ್ರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಕರ್ಪ್ಯೂ, ಬಂದ್ ಆದಲ್ಲಿ ವ್ಯಾಪಾರ– ವಹಿವಾಟು ಸ್ಥಗಿತಗೊಳ್ಳುತ್ತದೆ. ಕೈಗಾರಿಕೆಗಳನ್ನು ಹೊರತುಪಡಿಸಿ ಬರೀ ಅಂಗಡಿ–ಮುಂಗಟ್ಟುಗಳಲ್ಲಿನ ಸಣ್ಣ ವ್ಯಾಪಾರಸ್ಥರಿಗೆ ತಿಂಗಳಿಗೆ ಅಂದಾಜು ₹ 300ರಿಂದ ₹ 350 ಕೋಟಿ ನಷ್ಟ ಆಗುವ ಅಂದಾಜಿದೆ ಎಂದು ಅವರು ಹೇಳಿದರು.
₹100 ಕೋಟಿಗೂ ಹೆಚ್ಚು ನಷ್ಟ:
‘ಶಿವಮೊಗ್ಗದ ಆರ್ಥಿಕತೆಗೆ ಇಲ್ಲಿನ ಗಾಂಧಿ ಬಜಾರ್‌ನ ವಹಿವಾಟು ಪ್ರಮುಖ ಜೀವದ್ರವ್ಯ. ಆದರೆ, ಗಣಪತಿ ಮೂರ್ತಿ ವಿಸರ್ಜನೆ, ಈದ್‌ಮಿಲಾದ್ ಮೆರವಣಿಗೆ, ಗಲಭೆಯಿಂದಾಗಿ ಸತತ ಐದು ದಿನ ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಗಾಂಧಿಬಜಾರ್‌ನ ಹೋಲ್‌ಸೇಲ್ ಮಾರಾಟಗಾರರಿಗೆ ದಿನಕ್ಕೆ ಅಂದಾಜು ₹ 20ರಿಂದ ₹ 25 ಕೋಟಿಯಂತೆ ₹ 100 ಕೋಟಿಗೂ ಹೆಚ್ಚು ನಷ್ಟವಾಗಿದೆ’ ಎಂದು ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಾರಾಮ್ ಭಟ್ ತಿಳಿಸಿದರು.
ಗಾಂಧಿ ಬಜಾರ್‌ನಲ್ಲಿರುವ ಹಿಂದೂ–ಮುಸ್ಲಿಮರು ಒಟ್ಟಿಗೆ ಇದ್ದೇವೆ. ಅತಿಹೆಚ್ಚು ತೆರಿಗೆ ಇಲ್ಲಿಂದಲೇ ಕಟ್ಟುತ್ತೇವೆ. ಯಾರೋ ಏನೋ ಹೇಳಿಕೆ ಕೊಟ್ಟರೆ ಇಲ್ಲಿ ವ್ಯಾಪಾರ ಬಂದ್ ಆಗುವುದು ಏಕೆ?ವಿಜಯಕುಮಾರ್ ದಿನಕರ್ ಗಾಂಧಿ ಬಜಾರ್ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಶಿವಮೊಗ್ಗದಲ್ಲಿ ಏರ್‌ಪೋರ್ಟ್ ಆಗಿದೆ. ಅದನ್ನು ಬಳಸಿಕೊಂಡು ನಗರ ಇನ್ನಷ್ಟು ಪ್ರಗತಿ ಆಗಬೇಕು. ಗಲಾಟೆ ನೆಪದಲ್ಲಿ ಇಲ್ಲಿನ ವ್ಯಾಪಾರ–ವಹಿವಾಟಿಗೆ ಧಕ್ಕೆ ಮಾಡುವುದು ಬೇಡಮೊಹಮ್ಮದ್ ಸಾಜಿದ್ ಗಾಂಧಿ ಬಜಾರ್ ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಮಾಧ್ಯಮದವರು ಗಲಭೆ ವೈಭವೀಕರಣ ಬಿಡಬೇಕು. ಕ್ಷುಲ್ಲಕ ಸಂಗತಿಗಳನ್ನು ರಾಷ್ಟ್ರಮಟ್ಟದ ಸುದ್ದಿ ಮಾಡುವ ಮುನ್ನ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಬದುಕುವ ನಮ್ಮ ಬಗ್ಗೆಯೂ ಯೋಚನೆ ಮಾಡಲಿಚನ್ನವೀರಪ್ಪ ಗಾಮನಗಟ್ಟಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು ಶಿವಮೊಗ್ಗದತ್ತಲೂ ಬರುವಂತೆ ಮಾಡಬೇಕಿದೆ. ಸಾಗರದ ಸಿಹಿ ತೊಡದೇವು ತಿನಿಸಿನ ರುಚಿ ಅವರಿಗೂ ಪರಿಚಯಿಸುವ ಉದ್ದೇಶ ಶಿವಮೊಗ್ಗ ಹಬ್ಬ ಹೊಂದಿದೆಎನ್.ಗೋಪಿನಾಥ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ
ಧಗಧಗ ಕೊತಕೊತ ಹಾಕಬೇಡಿ.. ‘ದಯಮಾಡಿ ಧಗಧಗ ಕೊತಕೊತ ಎಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹಾಕಿ ನಮ್ಮ ವ್ಯಾಪಾರ ಹಾಳುಮಾಡಬೇಡಿ. ಊರು ಶಾಂತವಾಗಿರಲು ಬಿಡಿ’ ಎಂದು ಮಾಧ್ಯಮದವರಿಗೆ ಗಾಂಧಿಬಜಾರ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್ ಮನವಿ ಮಾಡುತ್ತಾರೆ. ಗಾಂಧಿಬಜಾರ್‌ನಲ್ಲಿ 500 ಚಿಲ್ಲರೆ ವಹಿವಾಟು 300 ಹೋಲ್‌ಸೇಲ್ ಮತ್ತು ರೀಟೆಲ್ ಅಂಗಡಿಗಳಿವೆ. ಎಲ್ಲೋ ಮೂಲೆಯಲ್ಲಿ ಗಲಾಟೆ ಆದರೂ ಸೂಕ್ಷ್ಮ ಪ್ರದೇಶ ಎಂದು ಗಾಂಧಿ ಬಜಾರ್ ಬಂದ್ ಮಾಡಿಸಲಾಗುತ್ತಿದೆ. ಮೊದಲೇ ವ್ಯಾಪಾರ ಹಾಳಾಗಿದೆ. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಏನಾದರೂ ಆದರೆ ಗಾಂಧಿ ಬಜಾರ್‌ನಲ್ಲಿ ಆಗಿದೆ ಎಂಬಂತೆ ವರ್ತಿಸುತ್ತಾರೆ. ಈಗ ಊರ ತುಂಬಾ ಬಜಾರ್ ಆಗಿವೆ. ಜನರು ಎಲ್ಲಿ ಸಿಗುತ್ತದೆಯೋ ಅಲ್ಲಿ ಅಗತ್ಯ ವಸ್ತು ಒಯ್ಯುತ್ತಾರೆ. ಕೋವಿಡ್ ನಂತರ ಗಿರಾಕಿಗಳು ಬಾರದಂತಾಗಿದ್ದಾರೆ. ಶೇ 25ರಿಂದ 30ರಷ್ಟು ವಹಿವಾಟು ಕುಸಿದಿದೆ ಎನ್ನುತ್ತಾರೆ.
‘ನಮಗೆ ಜಗಳ ಬಂದ್ ಏನೂ ಬೇಡ..’ ‘ಇದು ಮದುವೆ ಸೀಸನ್. ಜಿಲ್ಲೆಯ ಎಲ್ಲ ಕಡೆಯಿಂದ ಅದರಲ್ಲೂ ಗ್ರಾಮೀಣ ಜನರು ಬಟ್ಟೆ ಬಂಗಾರ ಖರೀದಿಗೆ ಶಿವಮೊಗ್ಗಕ್ಕೆ ಬರುತ್ತಾರೆ. ಹೀಗೆ ಗಲಾಟೆ ಬಂದ್ ಆದರೆ ಶಿಕಾರಿಪುರ ಸಾಗರ ಭಾಗದವರು ದಾವಣಗೆರೆ ಹುಬ್ಬಳ್ಳಿಗೆ ಹೋಗುತ್ತಾರೆ. ಕೊಪ್ಪ ತೀರ್ಥಹಳ್ಳಿಯವರು ಉಡುಪಿ ಮಂಗಳೂರಿಗೆ ಹೋಗುತ್ತಾರೆ. ಭದ್ರಾವತಿ ಚನ್ನಗಿರಿ ಭಾಗದವರು ದಾವಣಗೆರೆಯತ್ತ ಮುಖ ಮಾಡುತ್ತಾರೆ. ಹೀಗಾಗಿ ದಯವಿಟ್ಟು ಈ ಜಗಳ ಬಂದ್ ಏನೂ ಬೇಡ’ ಎಂದು ಗಾಂಧಿ ಬಜಾರ್ ಬಟ್ಟೆ ವ್ಯಾಪಾರಸ್ಥರ ಸಂಘದ ಸದಸ್ಯ ಮೊಹಮ್ಮದ್ ಸಾಜಿದ್ ಮನವಿ ಮಾಡುತ್ತಾರೆ.
ಎಲ್ಲಿಯೇ ಗಲಾಟೆಯಾದರೂ ಮೊದಲ ಏಟು ನಮಗೆ.. ‘ಶಿವಮೊಗ್ಗದಲ್ಲಿ ಗಲಾಟೆ ನಡೆಸಿ ಬಂದ್ ಆಗುವಂತೆ ಮಾಡುವವರು ನಮ್ಮ ಬದುಕನ್ನು ಕಣ್ಣಾರೆ ನೋಡಿದರೆ ವಾಸ್ತವ ಸ್ಥಿತಿಯ ಅರಿವಾಗಲಿದೆ’ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಹೇಳುತ್ತಾರೆ. ಸಂಜೆಯಾದರೆ ಹೂವು ಸೊಪ್ಪು ಬಾಡುತ್ತದೆ. ಹಣ್ಣು ತರಕಾರಿಯನ್ನು ಬಹಳ ದಿನ ಇಡಲು ಆಗುವುದಿಲ್ಲ. ಉಚಿತವಾಗಿ ಕೊಡಲು ಮುಂದಾದರೂ 144 ಸೆಕ್ಷನ್ ಇದ್ದಿದ್ದರಿಂದ ತೆಗೆದುಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಅಂದು ಬಜಾರ್ ರಸ್ತೆಗಳ ಪಕ್ಕದಲ್ಲಿ ರಾಶಿ ಹಾಕಿ ಹೋಗಬೇಕಾಯಿತು. ಅಡುಗೆ ಎಲ್ಲ ಕಸದ ತೊಟ್ಟಿ ಪಾಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ‘ಎಲ್ಲಿಯೇ ಗಲಾಟೆ ಆದರೂ ಮೊದಲು ಏಟು ಬೀಳುವುದು ಬೀದಿ ವ್ಯಾಪಾರಸ್ಥರಿಗೆ. ಹೀಗಾದರೆ ಅಂದೇ ದುಡಿದು ಅಂದೇ ತಿನ್ನುವವರು ಕಥೆ ಏನು’ ಎಂದು ಪ್ರಶ್ನಿಸುತ್ತಾರೆ.
ಉದ್ಯಮ ಬಾರದಂತೆ ತಡೆಯುವ ಹುನ್ನಾರ.. ಕೋಮು ಗಲಭೆ ಹಿಂಸೆಗೆ ಕುಮ್ಮಕ್ಕು ನೀಡುವವರಿಗೆ ಶಿವಮೊಗ್ಗಕ್ಕೆ ಹೊಸ ಉದ್ಯಮಗಳು ಇಲ್ಲವೇ ಬಂಡವಾಳ ಹೂಡುವವರು ಬರಬಾರದು ಎಂಬ ಉದ್ದೇಶವೂ ಇದೆ ಎಂದು ನಗರದ ಉದ್ಯಮಿಯೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಇಲ್ಲಿನ ಆರ್ಥಿಕ ವ್ಯವಸ್ಥೆ ಕೆಲವೇ ಜನರ ಕೈಯಲ್ಲಿದೆ. ಆ ಏಕಸ್ವಾಮ್ಯ ಮುಂದುವರೆಸಿಕೊಂಡು ಹೋಗುವುದಕ್ಕಾಗಿ ಇಲ್ಲಿ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪದೇಪದೇ ಗಲಾಟೆ ಆದರೆ ಹೊರಗಿನವರು ಇಲ್ಲಿ ಬಂಡವಾಳ ಹೂಡಲು ಬರುವುದಿಲ್ಲ. ಯಥಾಸ್ಥಿತಿ ಮುಂದುವರೆದು ಊರಿನ ಹಿಡಿತ ಅವರ ಕೈಯಲ್ಲಿಯೇ ಇಟ್ಟುಕೊಳ್ಳುವ ಇರಾದೆಯೂ ಇದರ ಹಿಂದೆ ಇದೆ. ಇದಕ್ಕೆ ಬೇರೆ ಬೇರೆ ಧರ್ಮಗಳ ಕೆಲವರು ಕೈಜೋಡಿಸಿದ್ದಾರೆ. ಆದರೆ ಬಲಿಪಶು ಆಗುತ್ತಿರುವುದು ಮಾತ್ರ ಮಲೆನಾಡಿನ ಹಿರಿಮೆ ಹಾಗೂ ಜನಸಾಮಾನ್ಯರು’ ಎಂದು ಅವರು ನೊಂದುಕೊಳ್ಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.