– ವರದಿ: ನಾಗರಾಜ ಹುಲಿಮನೆ
ಶಿವಮೊಗ್ಗ: ಗೌರಿ-ಗಣೇಶ ಹಬ್ಬಕ್ಕೆ ಜಿಲ್ಲೆಯಾದ್ಯಂತ ಭರದ ಸಿದ್ಧತೆ ನಡೆದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆಗೆ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಅಲ್ಲಲ್ಲಿ ಮಾರಾಟಕ್ಕೆ ಇಡಲಾಗಿದೆ. ಹಬ್ಬ ಸಮೀಪಿಸಿದಂತೆ ಮೂರ್ತಿಗಳು ದೊಡ್ಡ ಪ್ರಮಾಣದಲ್ಲಿಯೇ ಮಾರುಕಟ್ಟೆ ಪ್ರವೇಶಿಸುತ್ತಿವೆ.
ಈ ಬಾರಿ ಜನರು ಪರಿಸರ ಸ್ನೇಹಿ ಗಣಪತಿ ಕಡೆಗೆ ಒಲವು ತೋರಿದ್ದು, ಇಲ್ಲಿ ಸಾರ್ವಜನಿಕ ಗಣೇಶ ಸಮಿತಿ ಸದಸ್ಯರು, ಗ್ರಾಮಸ್ಥರು, ಯುವ ಜನರು ಮೂರ್ತಿ ತಯಾರಿಸುವ ಕುಶಲಕರ್ಮಿಗಳ ಬಳಿ ಬಂದು ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ನಗರವೂ ಒಳಗೊಂಡಂತೆ ಜಿಲ್ಲೆಯಾದ್ಯಂತ ಹಲವು ಕುಟುಂಬಗಳು ಮೂರ್ತಿ ತಯಾರಿಕೆಯಲ್ಲಿ ತೊಡಗಿವೆ. ಕೊರೊನಾ ನಂತರ ಇದೀಗ ಸ್ಥಳೀಯವಾಗಿ ತಯಾರಿಸಿದ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ವ್ಯಾಪಾರಿಗಳ ಮುಖದಲ್ಲೂ ಸಂತಸ ಮೂಡಿದೆ.
ಅಯ್ಯಪ್ಪ ಸ್ವಾಮಿ, ಶ್ರೀರಾಮ, ಆಂಜನೇಯ, ಸಾಯಿ ಬಾಬಾ ಸೇರಿದಂತೆ ವಿವಿಧ ಆಕಾರದ ಗಣಪತಿ ಮೂರ್ತಿಗಳನ್ನು ತಯಾರಕರು ಸಿದ್ಧ ಪಡಿಸಿದ್ದಾರೆ.
‘ಮನೆ ಬಳಿಯೇ ಶೆಡ್ ನಿರ್ಮಿಸಿಕೊಂಡು 30 ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಮೂರ್ತಿಗಳಿಗೆ ವಾಟರ್ ಕಲರ್ ಹಾಕುತ್ತೇವೆ. ಆಯಿಲ್ ಪೇಂಟ್ ಬಳಸುವುದಿಲ್ಲ. ಈ ವೃತ್ತಿಯೇ ನಮಗೆ ಆಧಾರ. ಜನರು ಹೇಳಿದ ರೀತಿಯಲ್ಲಿ ಮೂರ್ತಿಗಳನ್ನು ಮಾಡಿಕೊಡುತ್ತೇವೆ. ವರ್ಷಕ್ಕೆ 30 ಗಣೇಶ ಮೂರ್ತಿಗಳನ್ನು ತಯಾರಿಸುತ್ತೇವೆ. ₹ 2 ಸಾವಿರದಿಂದ ₹ 60 ಸಾವಿರದವರೆಗೂ ಗಣೇಶ ಮೂರ್ತಿಗಳು ನಮ್ಮ ಬಳಿ ಇವೆ. ಬೆಂಗಳೂರಿಗೂ ಮೂರ್ತಿಗಳನ್ನು ಕಳುಹಿಸುತ್ತೇವೆ’ ಎಂದು ವಿದ್ಯಾನಗರ ನಿವಾಸಿಯಾಗಿರುವ ಮೂರ್ತಿ ತಯಾರಕ ಪರಶುರಾಮ ‘ಪ್ರಜಾವಾಣಿ’ ಗೆ ತಿಳಿಸಿದರು.
‘ಪಿಒಪಿ ಮೂರ್ತಿಯಿಂದ ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂದು ಹೇಳುವ ಸರ್ಕಾರ, ಈ ಕುರಿತು 6 ತಿಂಗಳ ಹಿಂದೆಯೇ ಕಲಾವಿದರಿಗೆ ಜಾಗೃತಿ ಮೂಡಿಸಬೇಕು. ಮಣ್ಣಿನ ಗಣೇಶ ಮೂರ್ತಿ ತಯಾರಿಸುವವರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದು ಪರಿಸರ ಆಸಕ್ತ ತ್ಯಾಗರಾಜ ಮಿಥ್ಯಾಂತ ಹೇಳಿದರು.
ಪಿಒಪಿ ವಿಗ್ರಹ ಪ್ರತಿಷ್ಠಾಪನೆ ವಿಸರ್ಜನೆ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 1860ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು– ಡಾ.ಆರ್.ಸೆಲ್ವಮಣಿ ಜಿಲ್ಲಾಧಿಕಾರಿ
ಕಲಾವಿದರ ಬದುಕಿಗೆ ನೆರವಾಗಲು ಸರ್ಕಾರದಿಂದ ಯಾವುದೇ ಸವಲತ್ತು ದೊರೆತಿಲ್ಲ. ಮುಂದಿನ ದಿನದಲ್ಲಿ ಈ ಕುರಿತು ಸರ್ಕಾರ ಗಮನ ಹರಿಸಲಿ–ಹಾಲೇಶ್, ಮೂರ್ತಿ ತಯಾರಕ ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.