ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಮೊಗ್ಗೆ ರಸ್ತೆಗಳಲ್ಲಿ ಇನ್ನು ಟ್ರಿಣ್ ಟ್ರಿಣ್ ಸದ್ದು

ಸ್ಮಾರ್ಟ್‌ ಸಿಟಿ ಯೋಜನೆ: ಬೈಸಿಕಲ್ ಶೇರಿಂಗ್ ವ್ಯವಸ್ಥೆ ಜಾರಿಗೆ ಸಿದ್ಧತೆ
Last Updated 10 ಜೂನ್ 2022, 3:06 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಲು ಗಂಟೆಗೆ ನಾಲ್ಕಾಣೆಯಂತೆ, ಗಂಟೆಗೆ ₹1 ಕೊಟ್ಟು ಬಾಡಿಗೆಗೆ ಸೈಕಲ್ ಪಡೆದು ಗೆಳೆಯರನ್ನು ಕಂಬಿ, ಕ್ಯಾರಿಯರ್‌ ಮೇಲೆ ಕೂರಿಸಿಕೊಂಡು ಅಡ್ಡಾಡುತ್ತಿದ್ದ ಬಾಲ್ಯದ ದಿನಗಳ ಕನವರಿಸುತ್ತಿದ್ದೀರಾ? ಚಿಂತೆ ಬೇಡ. ಶಿವಮೊಗ್ಗ ನಗರದ ರಸ್ತೆಗಳಲ್ಲಿ ನಿಮ್ಮ ಆ ಕನವರಿಕೆ ಇನ್ನು ಮುಂದೆ ಸಾಕಾರಗೊಳ್ಳಲಿದೆ. ಬಾಡಿಗೆಗೆ ಸೈಕಲ್ ಪಡೆದು ಗಂಟೆ, ದಿನಗಳ ಲೆಕ್ಕದಲ್ಲಿ ಅಡ್ಡಾಡಬಹುದು.

ಆದರೆ, ಈಗ ಒಂದಷ್ಟು ಬದಲಾವಣೆ... ಮೊದಲಿನಂತೆ ಕರೀಮಣ್ಣನ ಸೈಕಲ್‌ಶಾಪ್‌ನಲ್ಲಿ ಲೆಕ್ಕ ಬರೆಸಿ ಕಂತಿನಲ್ಲಿ ಹಣ ಕೊಟ್ಟು ರ‍್ಯಾಲಿಸ್‌, ಅಟ್ಲಾಸ್‌, ಹೀರೊ ಕಂಪನಿಯ ಸೈಕಲ್‌ಗಳ ಬಾಡಿಗೆಗೆ ಪಡೆದು ಹಳ್ಳ, ಕೊಳ್ಳ, ಮಣ್ಣಿನ ಹಾದಿ, ಹಳ್ಳಿ ರಸ್ತೆಯಲ್ಲಿ ಜುಮ್ಮೆಂದು ಅಡ್ಡಾಡಲು ಸಾಧ್ಯವಿಲ್ಲ.

ಬದಲಿಗೆಆನ್‌ಲೈನ್‌ನಲ್ಲಿ ಹಣ ಪಾವತಿಸಿ, ಚೆನ್ನೈನಿಂದ ಬರಲಿರುವ ಥಳುಕು–ಬಳುಕಿನ ಬೈಸಿಕಲ್‌ನ ಬೆನ್ನೇರಿ ನುಣುಪಾದ ಹಾದಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗಬಹುದು. ಹಾಂ.. ಮೊದಲಿನಂತೆ ಗೆಳೆಯರ ಕೂರಿಸಿಕೊಂಡು ಹೋಗಲು ಈ ಸೈಕಲ್‌ನಲ್ಲಿ ಕಂಬಿ, ಕ್ಯಾರಿಯರ್ ಸೌಲಭ್ಯ ಇರೋಲ್ಲ..

ಹೊಸ ಪೀಳಿಗೆಯ ಕಲ್ಪನೆಗಳಿಗೆ ಸಾಥ್ ನೀಡಿ ಪರಿಸರ ಸ್ನೇಹಿ ಸಾರಿಗೆ ಪ್ರೋತ್ಸಾಹಿಸಲು ಸ್ಮಾರ್ಟ್‌ ಸಿಟಿ ಸಂಸ್ಥೆ ಈಗ ನಗರದಲ್ಲಿ ಬಾಡಿಗೆಗೆ ಸೈಕಲ್‌ ಒದಗಿಸಲು (ಬೈಸಿಕಲ್ ಶೇರಿಂಗ್) ಮುಂದಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿನ ಒತ್ತಡ, ಸಂಚಾರ ದಟ್ಟಣೆ ನಿಭಾಯಿಸಿ, ಪೆಟ್ರೋಲ್, ಡೀಸೆಲ್ ಬಳಕೆಯ ವೆಚ್ಚ ತಗ್ಗಿಸಿ, ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಈ ಯೋಜನೆಯಡಿ ಶೀಘ್ರ 300 ಸೈಕಲ್‌ಗಳು ಸಿಹಿಮೊಗ್ಗೆಯ ರಸ್ತೆಗಳಿಗೆ ರಂಗು ತುಂಬಲಿವೆ. ‘ಟ್ರಿಣ್’... ‘ಟ್ರಿಣ್’... ಸದ್ದು ಅನುರಣಿಸಲಿದೆ.

ಸೈಕಲ್‌ಗಳ ವಿಶೇಷ: ಸಾಮಾನ್ಯ ಸೈಕಲ್‌ಗಳಿಗಿಂತ ಇವು ಹಗುರವಾಗಿರಲಿವೆ. ಅಗತ್ಯಕ್ಕೆ ತಕ್ಕಂತೆ ಸೀಟು ಹಾಗೂ ಹ್ಯಾಂಡಲ್‌ಗಳ ಎತ್ತರ ಹೆಚ್ಚು–ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ಶಿವಮೊಗ್ಗದಲ್ಲಿ 30 ಕಡೆ ಸೈಕಲ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಅಲ್ಲಿಂದ ಸೈಕಲ್‌ ಪಡೆದು, ತಾವು ಬಯಸಿದ ಸ್ಥಳಗಳಿಗೆ ಹೋಗಬಹುದು. ಅಲ್ಲಿಗೆ ಹತ್ತಿರದ ನಿಲ್ದಾಣಕ್ಕೆ ಸೈಕಲ್‌ ಒಪ್ಪಿಸಬಹುದು. ಸೈಕಲ್‌ ಪೂರೈಕೆ, ನಿಲ್ದಾಣಗಳ ನಿರ್ಮಾಣ ಹಾಗೂ ಮುಂದಿನ ಐದು ವರ್ಷಗಳ ಕಾಲ ಅವುಗಳ ನಿರ್ವಹಣೆ ಬೆಂಗಳೂರಿನ ಎಸ್‌ಎಲ್‌ಎಸ್‌ ಕನ್‌ಸ್ಟ್ರಕ್ಷನ್ ಕಂಪನಿಗೆ ವಹಿಸಲಾಗಿದೆ.

ಬೈಸಿಕಲ್ ಬಳಕೆ ಹೆಚ್ಚಾದರೆ ಪೆಟ್ರೋಲ್, ಡೀಸೆಲ್‌ನಿಂದ ಸಂಚರಿಸುವ ವಾಹನಗಳ ಬಳಕೆಯೂ ಕಡಿಮೆಯಾಗಲಿದೆ. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು. ಜನರು ಸೈಕಲ್ ತುಳಿಯುವುದರಿಂದ ವ್ಯಾಯಾಮ ಆಗುತ್ತದೆ. ಇಂಧನ ಬಯಸುವ ಯಾವುದೇ ವಾಹನ ಅವಲಂಬಿಸದೆ, ಬೈಕ್ ಕೊಳ್ಳಲು ಹಣ ತೊಡಗಿಸದೆ ಕಡಿಮೆ ಖರ್ಚಿನಲ್ಲಿ ಸಂಚರಿಸಲು ಸಹಕಾರಿಯಾಗಲಿದೆ.

‘ಮೊದಲ ಹಂತದಲ್ಲಿ 100 ಸೈಕಲ್‌ಗಳು ಈ ತಿಂಗಳ ಅಂತ್ಯಕ್ಕೆ ಶಿವಮೊಗ್ಗಕ್ಕೆ ಬರಲಿವೆ. ಇವೆಲ್ಲವೂ ಚೆನ್ನೈನಲ್ಲಿ ಮೇಕ್‌ ಇನ್ ಇಂಡಿಯಾ ಯೋಜನೆಯಡಿ ಸಿದ್ಧವಾದ ಸೈಕಲ್‌ಗಳು. ಇವುಗಳಿಗೆ ಜಿಪಿಎಸ್ ಲಾಕ್ ಮಾತ್ರ ತೈವಾನ್‌ನಿಂದ ತರಿಸಲಾಗುತ್ತಿದೆ. ಸೈಕಲ್‌ಗಳು ಬರುತ್ತಿದ್ದಂತೆಯೇ ಪ್ರಾಯೋಗಿಕವಾಗಿ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ’ ಎಂದು ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆ ಹಿರಿಯ ನಗರ ಯೋಜನಾಧಿಕಾರಿ ಪ್ರದೀಪ್‌ಕುಮಾರ್ ಹೇಳುತ್ತಾರೆ.

***

ಕಳ್ಳತನ ತಡೆಯಲು ಜಿಯೊ ಫೆನ್ಸಿಂಗ್

ಸೈಕಲ್ ಕಳ್ಳತನ ತಪ್ಪಿಸಲು ಜಿಪಿಎಸ್ ಲಾಕ್ ಜೊತೆಗೆ ನಗರದ ಸುತ್ತಲೂ ಜಿಯೊ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಜಿಪಿಎಸ್‌ ಲಾಕ್‌ ಸೈಕಲ್ ಎಲ್ಲಿ ಓಡಾಡುತ್ತಿದೆ ಎಂಬುದನ್ನು ನಿರಂತರವಾಗಿ ಟ್ರ್ಯಾಕ್‌ ಮಾಡುತ್ತಿರುತ್ತದೆ.

ಸೈಕಲ್ ಪಡೆಯುವವರು ಮೊಬೈಲ್‌ ಆ್ಯಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡಿರಬೇಕು. ಅದರಲ್ಲಿ ಫೋನ್‌ ನಂಬರ್‌, ಆಧಾರ್ ಕಾರ್ಡ್ ಸೇರಿ ಬಳಕೆದಾರರ ಎಲ್ಲ ಮಾಹಿತಿ ಇರಲಿದೆ. ನೋಂದಾಯಿತ ಬಳಕೆದಾರರಿಗೆ ಮಾತ್ರ ಸೈಕಲ್ ಬಾಡಿಗೆಗೆ ಕೊಡಲಾಗುತ್ತದೆ.

ಜಿಯೊ ಫೆನ್ಸಿಂಗ್ ಇರುವುದರಿಂದ ನಗರದ ಹೊರಗೆ ಸೈಕಲ್ ಒಯ್ದರೆ ಅದು ಸ್ವಯಂಚಾಲಿತವಾಗಿ ಲಾಕ್ ಆಗಲಿದೆ. ಸೈಕಲ್ ಅನ್ನು ಗರಿಷ್ಠ ನಗರದ ಗಡಿಯವರೆಗೆ ಮಾತ್ರ ಒಯ್ಯಬಹುದು. ಅದನ್ನು ದಾಟಿ ಹೋದರೆ ಎಚ್ಚರಿಕೆ ಸಂದೇಶ ಕೊಟ್ಟು ಸೈಕಲ್ ತಾನಾಗಿಯೇ ಲಾಕ್ ಆಗಲಿದೆ. ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದೆ.

***

ಅರ್ಧ ಗಂಟೆಗೆ ₹ 5 ಶುಲ್ಕ

ಸೈಕಲ್ ಬಳಕೆದಾರರಿಗೆ ಮೂರು, ಆರು ತಿಂಗಳು, ಒಂದು ವರ್ಷದ ಅವಧಿಯ ಪಾಸ್‌ ಪಡೆಯಲು ಅವಕಾಶವಿರುತ್ತದೆ. ಆರಂಭದಲ್ಲಿ ಒಂದು ತಿಂಗಳು ಮೊದಲ ಅರ್ಧ ಗಂಟೆ ಉಚಿತವಾಗಿ ಕೊಡಲಾಗುವುದು. ನಂತರದ ಪ್ರತಿ ಅರ್ಧಗಂಟೆಗೆ ₹5 ಶುಲ್ಕ ವಿಧಿಸಲು ಚಿಂತನೆ ನಡೆದಿದೆ ಎಂದು ಪ್ರದೀಪ್‌ಕುಮಾರ್ ಹೇಳುತ್ತಾರೆ.

ಸೈಕಲ್ ರಿಪೇರಿಗೆ ಸ್ಮಾರ್ಟ್‌ಸಿಟಿ ವ್ಯಾಪ್ತಿಯಲ್ಲಿ ಗ್ಯಾರೇಜ್ ನಿರ್ಮಿಸಲಾಗುತ್ತಿದೆ. ಟ್ಯೂಬ್‌ಲೆಸ್ ಟೈರ್ ಕಾರಣ ಪಂಚರ್ ಆಗುವ ಭಯ ಇಲ್ಲ. 15 ಸೈಕಲ್‌ಗಳನ್ನು ಸ್ಪೇರ್‌ ಆಗಿ ಬಳಕೆ ಮಾಡಲಾಗುತ್ತಿದೆ. ಹವಾಮಾನ ವೈಪರೀತ್ಯ ತಾಳಿಕೊಳ್ಳುವ ಶಕ್ತಿಯೂ ಈ ಸೈಕಲ್‌ಗಳಿಗೆ ಇರಲಿದೆ.

***

34 ಕಿ.ಮೀ. ಸೈಕಲ್ ಹಾದಿ ನಿರ್ಮಾಣ

ಬೈಸಿಕಲ್ ಶೇರಿಂಗ್ ನಗರದಲ್ಲಿ 120 ಕಿ.ಮೀ ವ್ಯಾಪ್ತಿಯನ್ನು ಸಂಪರ್ಕಿಸಲಿದೆ. ಇದರಲ್ಲಿ 34 ಕಿ.ಮೀ ದೂರ ಪ್ರತ್ಯೇಕ ಸೈಕಲ್ ಹಾದಿ (ಪಾಥ್) ಇರಲಿದೆ. ಇದು ಸಂಪೂರ್ಣವಾಗಿ ಸೈಕಲ್‌ಗಳ ಓಡಾಟಕ್ಕೆ ಬಳಕೆಯಾಗಲಿದೆ.

ಯೋಜನೆಯ ಒಟ್ಟು ವೆಚ್ಚ ₹4.43 ಕೋಟಿ. ಅದರಲ್ಲಿ ಸ್ಮಾರ್ಟ್‌ಸಿಟಿ ಸಂಸ್ಥೆ ₹3.09 ಕೋಟಿ ಹಾಗೂ ಖಾಸಗಿ ಪಾಲುದಾರರು ₹1.34 ಕೋಟಿ ಹೂಡಿಕೆ ಮಾಡಲಿದ್ದಾರೆ.

***

ಜನಸ್ನೇಹಿಯಾಗಿಸಲು ಒತ್ತು: ಪ್ರದೀಪ್‌ಕುಮಾರ್

‘ಇತರೆ ನಗರಗಳ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬೈಸಿಕಲ್ ಶೇರಿಂಗ್ ವ್ಯವಸ್ಥೆ ಹೆಚ್ಚು ಜನಸ್ನೇಹಿ ಆಗಿರುವುದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಅಲ್ಲಿ ಏನು ತಪ್ಪು ಆಗಿದೆ ಎಂಬುದರ ಬಗ್ಗೆಯೂ ಗಮನ ಹರಿಸಲಿದ್ದೇವೆ’ ಎಂದು ಸ್ಮಾರ್ಟ್‌ಸಿಟಿ ಹಿರಿಯ ನಗರ ಯೋಜನಾಧಿಕಾರಿ ಪ್ರದೀಪ್‌ಕುಮಾರ್ ಹೇಳುತ್ತಾರೆ.

‘ಯೋಜನೆ ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಲ್ಲಿ ವಿಫಲವಾಗಿರಬಹುದು. ಹೀಗಾಗಿ, ನಾವು ಇಲ್ಲಿ ಪ್ರಚಾರಕ್ಕೆ (ಮಾರ್ಕೆಟಿಂಗ್, ಜಾಹೀರಾತು) ಹೆಚ್ಚು ಆದ್ಯತೆ ಕೊಡಲಿದ್ದೇವೆ. ಮೊದಲ ಕಂತಿನಲ್ಲಿ 100 ಸೈಕಲ್‌ಗಳು ಬರುತ್ತಿದ್ದಂತೆಯೇ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT