ಶಿವಮೊಗ್ಗ: ‘ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕೋಮು ಗಲಭೆಯಲ್ಲಿ ಕೇರಳದಿಂದ ಬಂದಿದ್ದ ರಾಷ್ಟ್ರದ್ರೋಹಿ ಮುಸ್ಲಿಮರ ಕೈವಾಡವಿದೆ. ಅದಕ್ಕೆ ಗಲಭೆಯ ಎಫ್‌ಐಆರ್‌ನಲ್ಲಿ ಕೇರಳದ ಇಬ್ಬರ ಹೆಸರು ಇರುವುದೇ ಸಾಕ್ಷಿ’ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆಯೂ ಹೊರಗಿನಿಂದ ಬರುವ ಕಿಡಿಗೇಡಿಗಳು ಯಾವುದೇ ದುಷ್ಕೃತ್ಯ ನಡೆಸದಂತೆ ಪೊಲೀಸರು ನಿಗಾ ವಹಿಸಬೇಕು. ಜಿಲ್ಲೆಯ ಗಡಿಯಲ್ಲೂ ಕಟ್ಟೆಚ್ಚರ ವಹಿಸಬೇಕು ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ನಾಗಮಂಗಲ ಗಲಭೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಘಟನೆಯನ್ನು ಬಹಳ ಹಗುರವಾಗಿ ತೆಗೆದುಕೊಂಡಿದೆ. ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎನ್.ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ ಇದನ್ನು ಸಣ್ಣ ಘಟನೆ ಎನ್ನುತ್ತಿದ್ದಾರೆ. ಇದು ಆಶ್ಚರ್ಯ ತಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕೆಲವು ಮುಸ್ಲಿಂ ಗೂಂಡಾಗಳು ಬಾಲ ಬಿಚ್ಚುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕೇರಳದ ಮುಸ್ಲಿಮರ ಜೊತೆಗೆ ವಿದೇಶಿಯರ ಕೈವಾಡದ ಶಂಕೆಯೂ ಇದೆ ಎಂದರು.