ಶಿವಮೊಗ್ಗ: ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಬಾಲಕರಿಗಾಗಿ ನೆಹರೂ ಕ್ರೀಡಾಂಗಣದಲ್ಲಿ ಸೆ. 2 ಮತ್ತು 3ರಂದು ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕೆ.ಎಸ್. ಶಶಿ ತಿಳಿಸಿದರು.
ಶಿವಮೊಗ್ಗ ವಾಲಿಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ. ಹಗಲು ಮತ್ತು ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ಸೆ.2ರ ಸಂಜೆ 6.30ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್ ಉಪಸ್ಥಿತರಿರುವರು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 30 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಕ್ಲಬ್‌ನ ವಾಲಿಬಾಲ್ ಆಟಗಾರ ದಿವಂಗತ ಸರ್ದಾರ್ ಜಾಫರ್ ಹೆಸರಿನಲ್ಲಿ ವಿಜೇತರಿಗೆ ಟ್ರೋಫಿ ನೀಡಲಾಗುವುದು. ಜೊತೆಗೆ ಕ್ರಮವಾಗಿ ₹ 7,777, ₹ 5,555, ₹ 3,333, ₹ 2,222 ನಗದು ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳು ಸೆ.2ರಂದು ಮಧ್ಯಾಹ್ನ 12ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು ಎಂದರು.
ಪಂದ್ಯಾವಳಿಯಲ್ಲಿ ನಾಲ್ಕು ಬಹುಮಾನಗಳ ಜೊತೆಗೆ ಬೆಸ್ಟ್ ಆಲ್‌ರೌಂಡರ್, ಪಾಸರ್, ಹಿಟ್ಟರ್ ಮುಂತಾದ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಪಂದ್ಯಾವಳಿಯ ಸಂಚಾಲಕ ಎಸ್.ಎಚ್. ಪ್ರಸನ್ನ ತಿಳಿಸಿದರು.
ಸೆ.3ರ ರಾತ್ರಿ 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಆದಿಚುಂಚನಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಎಸ್‌ಪಿ ಮಿಥುನ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಡಾಕ್ಷರಿ, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಂ.ಶ್ರೀಕಾಂತ್, ಡಾ.ಧನಂಜಯ ಸರ್ಜಿ, ಭಾಸ್ಕರ್ ಜಿ. ಕಾಮತ್, ದಿನೇಶ್ ಭಾಗವಹಿಸುವರು ಎಂದು ಹೇಳಿದರು.
ಕ್ಲಬ್ ಪದಾಧಿಕಾರಿಗಳಾದ ಎಸ್.ವಿಜಯಕುಮಾರ್, ಸಚಿನ್ ಪೂಜಾರಿ, ಸಂದೀಪ್, ಸಿಮ್ಸನ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.