ಬೆಲೆ ಏರಿಕೆ ಬಿಸಿ, ನಟನನ್ನು ಕಳೆದುಕೊಂಡ ನೋವು; ಮಂಕಾದ ದೀಪಾವಳಿ ಹಬ್ಬದ ಸಂಭ್ರಮ

ಬಳ್ಳಾರಿ: ದೀಪಾವಳಿಯ ದೀಪದ ಬೆಳಕು ಇಷ್ಟು ಹೊತ್ತಿಗೆ ಜಗಮಗಿಸಬೇಕಿತ್ತು. ಆದರೆ, ಹಬ್ಬಕ್ಕೆ ಮೆರಗು ಇನ್ನೂ ಬಂದಿಲ್ಲ.
ಮಾರುಕಟ್ಟೆಗೆ ಜನ ಇನ್ನೂ ದಾಂಗುಡಿ ಇಟ್ಟಿಲ್ಲ.
ವ್ಯಾಪಾರಸ್ಥರೇನೊ ಅಗತ್ಯ ಸಿದ್ಧತೆಗ
ಳನ್ನು ಮಾಡಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹಣ್ಣುಹಂಪಲು, ತರಕಾರಿ, ಬಟ್ಟೆಬರೆಗಳನ್ನು ತರಿಸಿಟ್ಟುಕೊಂಡಿದ್ದಾರೆ. ಆದರೆ, ಗ್ರಾಹಕರು ಮಾತ್ರ ಇನ್ನೂ ಕೊಳ್ಳುವ ಮನಸ್ಸು ಮಾಡಿಲ್ಲ.
ದೀಪಾವಳಿ ಹಬ್ಬದ ಬಹುಮುಖ್ಯ ಆಕರ್ಷಣೆ ಆಗಿರುವ ದೀಪಗಳ ರಾಶಿ
ಮಾರುಕಟ್ಟೆಗೆ ಬಂದಿದೆ. ಕಣ್ಣು ಹಾಯಿಸಿದ
ಕಡೆಗಳಲ್ಲಿ ದೀಪದ ವ್ಯಾಪಾರಿಗಳು ಕುಳಿತಿದ್ದಾರೆ. ಇಷ್ಟು ಹೊತ್ತಿಗೆ ಜನರಿಂದ ತುಂಬಿ ತುಳುಕಬೇಕಿದ್ದ ಅಂಗಡಿಗಳು ಖಾಲಿ ಖಾಲಿ ಕಾಣುತ್ತಿವೆ. ಒಂದೆರಡು ತಿಂಗಳಿಂದ ನೆಲಕಚ್ಚಿದ್ದ ಹಣ್ಣು, ತರಕಾರಿ ದರಗಳು ಕೊಂಚ ಮಟ್ಟಿಗೆ ಚೇತರಿಸಿಕೊಂಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಆವಕ ಹೆಚ್ಚಿರುವುದರಿಂದ ಮಾರಾಟ ಸಾಧಾರಣವಾಗಿದೆ.
ಒಂದೂವರೆ ತಿಂಗಳ ಹಿಂದೆ ಕೆ.ಜಿಗೆ ₹ 10ರಿಂದ 15ವರೆಗೆ ಮಾರಾಟವಾಗಿದ್ದ ಟೊಮ್ಯಾಟೊ ಈಗ ದುಪ್ಪಟ್ಟಾಗಿದೆ. ಪುಣೆಯಿಂದ ಬರುವ ಉತ್ತಮ ಈರುಳ್ಳಿ ಕೆ.ಜಿಗೆ ₹ 30 ಇದೆ. ಆದರೆ, ಇದು ಗ್ರಾಹಕರ ಕೈಸೇರುವ ಹೊತ್ತಿಗೆ ಕೆ.ಜಿಗೆ ₹ 50ರಿಂದ 60 ಆಗಲಿದೆ. ಸ್ಥಳೀಯ ಸಾಧಾರಣ ಈರುಳ್ಳಿಗೆ ಗ್ರಾಹಕರು ಕೆ.ಜಿಗೆ ₹ 35ರಿಂದ 40ರ ವರೆಗೆ ಪಾವತಿಸಬೇಕು. ಈ ಸಲ ಬದನೆಕಾಯಿ ಬೆಳೆದಿರುವ ರೈತರಿಗೆ ಜೇಬು ತುಂಬಲಿದೆ. 10 ಕೆ.ಜಿ ಚೀಲಕ್ಕೆ ₹ 400ರ ವರೆಗೆ ಮಾರಾಟವಾಗುತ್ತಿದೆ. ಆದರೆ, ಇದಕ್ಕೆ ಗ್ರಾಹಕರು ಕೆ.ಜಿಗೆ ₹ 60 ಕೊಡಬೇಕು.
ಹಸಿ ಮೆಣಸಿನಕಾಯಿ ದರ ಇನ್ನೂ ಚೇತರಿಕೆ ಕಂಡಿಲ್ಲ. ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಲೆ ಗಗನಕ್ಕೇರಿದ್ದು, ಕೆ.ಜಿಗೆ ₹ 160 ಇದೆ. ಕಾಸು ಕೊಟ್ಟರೂ ಮಾರುಕಟ್ಟೆಯಲ್ಲಿ ಪದಾರ್ಥವಿಲ್ಲ. ಉಳಿದಂತೆ, ಕ್ಯಾರೆಟ್ ₹ 60, ಬೀನ್ಸ್ ₹ 80, ಬೆಂಡೆ ₹ 40, ಆಲೂ ₹ 30, ಹೂ ಕೋಸು ₹ 40, ಸೌತೆಕಾಯಿ ₹ 40, ನುಗ್ಗೆ 2ಕ್ಕೆ ₹ 10 ಇದೆ.
‘ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ತರಕಾರಿ ಹೆಚ್ಚಿನ
ಪ್ರಮಾಣದಲ್ಲಿ ಬರುತ್ತಿದೆ. ಆದರೆ, ಬೇಡಿಕೆ ಇಲ್ಲ. ದೀಪಾವಳಿ ಹಬ್ಬ ಇನ್ನೂ ಕಳೆಗಟ್ಟಿಲ್ಲ’ ಎಂದು ತರಕಾರಿ ವ್ಯಾಪಾರಿ ಪಂಪನಗೌಡ ಮೆದೆಹಾಳ್ ತಿಳಿಸಿದರು. ಮಂಗಳವಾರ ಬೆಳಿಗ್ಗೆ ತಂದೆಯ ಜತೆ ಖರೀದಿಗೆ ಹೋಗಿದ್ದ, ಕಪ್ಪಗಲ್ ರಸ್ತೆ ಎಸ್. ಮಮತಾ ಕಿನ್ನೂರೇಶ್ವರ, ‘ ಮಾರುಕಟ್ಟೆಯಲ್ಲಿ ಜನರೇ ಇರಲಿಲ್ಲ. ನಾಳೆ, ನಾಳಿದ್ದು ಹಬ್ಬ ಇದೆ ಎಂದೇ ಅನಿಸುತ್ತಿಲ್ಲ’ ಎಂದರು.
‘ತರಕಾರಿ ಬೆಲೆ ಏರಿದೆ. ಆದರೆ, ಇದರಿಂದ ರೈತರಿಗೆ ಲಾಭವಾಗುವುದೇ ಎಂಬ ಪ್ರಶ್ನೆ ಕಾಡುತ್ತದೆ. ಬೆಳೆದವರಿಗೂ ನಾಲ್ಕು ಕಾಸು ಸಿಕ್ಕರೆ ಒಳ್ಳೆಯದಲ್ಲವೇ’ ಎಂಬ ಅಭಿಪ್ರಾಯ ಸ್ವತಃ ಕೃಷಿಕರಾದ ಗೌರಿ ತಿಮ್ಮಪ್ಪ ಚೌದರಿ ಅವರದ್ದು.
‘ಕಳೆದ ದೀಪಾವಳಿಗೆ ಹೋಲಿಸಿದರೆ ಈ ವರ್ಷ ವ್ಯಾಪಾರ ಪರವಾಗಿಲ್ಲ. ಜನ ಬಂದು ಹೊಸ ಬಟ್ಟೆ ಖರೀದಿಸುತ್ತಿದ್ದಾರೆ. ವ್ಯಾಪಾರ ಭರಾಟೆ ಇಲ್ಲದಿದ್ದರೂ, ಸಾಧಾರಣ ವಾತಾವರಣವಿದೆ’ ಎಂದು ಅಂಜನಾ ಫ್ಯಾಷನ್ಸ್ ಮಾಲೀಕ ಕೇಶವರೆಡ್ಡಿ ಹೇಳಿದರು. ನಾಳೆ, ನಾಳಿದ್ದು ದೀಪಾವಳಿ ಸಂಭ್ರಮ ಕಳೆಗಟ್ಟುವುದೇ ಎಂಬುದನ್ನು ಕಾದು ನೋಡಬೇಕು.
‘ವ್ಯಾಪಾರವೇ ಇಲ್ಲ’
‘ದೀಪಾವಳಿ ಖರೀದಿ ಜೋರಾಗಬೇಕಿತ್ತು. ಜನರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ನೋಟು ಅಮಾನ್ಯೀಕರಣ, ಕೋವಿಡ್ ಪರಿಣಾಮ.. ಹೀಗೆ ಒಂದರ ಹಿಂದೆ ಒಂದು ಸಂಕಷ್ಟ ಬಂದಿದ್ದರಿಂದ ಜನರ ಕೈಲಿ ಹಣ ಇಲ್ಲ’ ಎಂದು ವಾಕರ್ ಜೀನ್ಸ್ ಉದ್ಯಮಿ ಭರತ್ ಜೈನ್ ಹೇಳಿದರು.
‘ದಸರಾ ಸಂದರ್ಭದಲ್ಲೇ ಭರಾಟೆ ಖರೀದಿ ನಡೆಯಬೇಕಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ, ವಹಿವಾಟು ನಡೆಯಲಿಲ್ಲ. ಸಂಕ್ರಾಂತಿ ಹೊತ್ತಿಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ’ ಎಂಬ ಆಶಯವನ್ನು ಭರತ್ ಜೈನ್ ವ್ಯಕ್ತಪಡಿಸಿದರು.
ಮಾರುಕಟ್ಟೆ ದರ
ಹಣ್ಣು;ಕೆ.ಜಿ ದರ (₹ಗಳಲ್ಲಿ)
ಕಿತ್ತಳೆ;30
ಸಪೋಟ;60
ಪಪ್ಪಾಯ;30
ಸೇಬು;130
ದ್ರಾಕ್ಷಿ;120
ಬಾಳೆ;70
ಪಚಬಾಳೆ;40 ಡಜನ್
ಪೇರಲ;40
ಅಂಜೂರ;120
ದಾಳಿಂಬೆ;160
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.