ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳ ಸುರಕ್ಷತೆ ಬೇಕಿದೆ ವೆಂಟಿಲೇಟರ್

ಅಮೂಲ್ಯ ಜೀವ ಉಳಿವಿಗೆ ತಕ್ಷಣ ಖರೀದಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ
Last Updated 19 ಮೇ 2021, 14:02 IST
ಅಕ್ಷರ ಗಾತ್ರ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ವೆಂಟಿಲೇಟರ್‌ಗಳ ಸಂಖ್ಯೆ 200ಕ್ಕೆ ಹೆಚ್ಚಿಸಬೇಕು. ಕೋವಿಡ್‌ ರೋಗಿಗಳ ಅಮೂಲ್ಯ ಜೀವ ಉಳಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯ ಒಳರೋಗಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲದೆ ಸೋಂಕಿತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸಾವುಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಮೆಗ್ಗಾನ್ ಆಸ್ಪತ್ರೆಗೆ ಹೊರ ಜಿಲ್ಲೆಗಳಿಂದಲೂ ಕೋವಿಡ್‌ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗಿದೆ. ಅಗತ್ಯ ಆಮ್ಲಜನಕ ಸೌಲಭ್ಯವಿದ್ದರೂ, ರೋಗಿಗಳಿಗೆ ತೀವ್ರ ಉಸಿರಾಟದ ತೊಂದರೆಯಾದಾಗ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲು ಅಗತ್ಯ ವೆಂಟಿಲೇಟರ್‌ಗಳಿಲ್ಲ.ಈಗಿರುವ 32 ವೆಂಟಿಲೇಟರ್‌ಗಳು ಹೃದಯ ಮತ್ತಿತರ ಇತರೆ ಕಾಯಿಲೆಯ ರೋಗಿಗಳಿಗೇ ಸಾಲುತ್ತಿಲ್ಲ. ತಕ್ಷಣ 200 ವೆಂಟಿಲೇಟರ್ ಖರೀದಿಸಬೇಕು. ಎಚ್‌ಎಸ್‌ಎನ್‌ಸಿಗಳ ಸಂಖ್ಯೆ 300ಕ್ಕೆ ಏರಿಸಬೇಕು. ಅಗತ್ಯ ಇರುವ ಎಲ್ಲರಿಗೂ ಆಮ್ಲಜನಕ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು. ಹೊಸದಾಗಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೊರತೆ ಇರುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪ್ರಯೋಗಾಲಯ ತಂತ್ರಜ್ಞರ ಸಂಖ್ಯೆ ಹೆಚ್ಚಿಸಬೇಕು. ಮುಖ್ಯವಾಗಿ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ನಿರ್ದೇಶಕರನ್ನು ತಕ್ಷಣ ಬದಲಾಯಿಸಬೇಕು. ವೃದ್ಧರಾಗಿರುವ ಅವರು ಕೋವಿಡ್ ಕೇಂದ್ರಗಳ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ, ದಕ್ಷ ಅಧಿಕಾರಿ ನೇಮಿಸಬೇಕು. ಅಲ್ಲದೇ, ನಿಷ್ಠಾವಂತ ವೈದ್ಯರ ಕೊರತೆ ಇದೆ. ಹಲವು ವೈದ್ಯರು ಕೆಲಸವನ್ನೇ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಲಾಕ್‌ಡೌನ್‌ ಆರಂಭದಲ್ಲೇ ಜಾಗೃತಿ ವಹಿಸದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರನ್ನು ಪರೀಕ್ಷೆಗಳಿಲ್ಲದೆ ಹಳ್ಳಿಗಳಿಗೆ ಬಿಟ್ಟುಕೊಳ್ಳಲಾಯಿತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕು ಹರಡಲು ಕಾರಣವಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲೂ ಹೆಚ್ಚಿನ ಸೌಲಭ್ಯ ನೀಡಬೇಕು. ವಾರಕ್ಕೊಮ್ಮೆ ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ಕುರಿತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಉನ್ನತಮಟ್ಟದ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಕಂಡರಾದ ಕೆ.ಪಿ.ಶ್ರೀಪಾಲ್, ಕೆ.ಟಿ.ಗಂಗಾಧರ್, ಎಂ.ಗುರುಮೂರ್ತಿ, ಪ್ರೊ.ರಾಜೇಂದ್ರ ಚೆನ್ನಿ, ಕೆ.ಎಲ್.ಅಶೋಕ್, ಮಾಲತೇಶ್ ಬೊಮ್ಮನಕಟ್ಟೆ, ಮಂಜುನಾಥ ನವುಲೆ, ಎಂ.ರವಿ, ಶಿವಕುಮಾರ್‌ ಮತ್ತಿತರರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT