ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ತೂದೂರು

ಎಸಿಬಿ, ಲೋಕಾಯುಕ್ತ, ಪೊಲೀಸರಿಗೆ ದೂರು ನೀಡಲು ಗ್ರಾಮಸ್ಥರ ನಿರ್ಣಯ
Last Updated 16 ಸೆಪ್ಟೆಂಬರ್ 2021, 7:48 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆ ವಿರುದ್ಧ ಎಸಿಬಿ, ಲೋಕಾಯುಕ್ತ ಹಾಗೂ ಪೊಲೀಸರಿಗೆ ದೂರು ನೀಡಲು ಬುಧವಾರ ನಡೆದ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯಿತಿ ಅಧ್ಯಕ್ಷ ಮಧುರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಚರ್ಚೆ ಆರಂಭಿಸಿದ ಗ್ರಾಮಸ್ಥರು, ಸಭೆಗೆ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕರೆಸುವಂತೆ ಪಟ್ಟುಹಿಡಿದರು. ಮಧ್ಯಾಹ್ನ ಸಭೆಗೆ ಬಂದ ಅಬಕಾರಿ ನಿರೀಕ್ಷಕ ಅಮಿತ್‍ಪ್ರಸಾದ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮದ್ಯ ಮಾರಾಟ ತಡೆಯುವ ಅಧಿಕಾರ ಇಲಾಖೆಗೆ ಇಲ್ಲವೇ ಎಂದು ಮಧುರಾಜ್‍ ಹೆಗ್ಡೆ, ಸದಸ್ಯರಾದ ಭುಜಂಗ, ಶರತ್, ಅರವಿಂದ್, ಮುಖಂಡರಾದ ಬೇಗುವಳ್ಳಿ ಕವಿರಾಜ್, ಬೇಗುವಳ್ಳಿ ಸತೀಶ್ ಪ್ರಶ್ನಿಸಿದರು.

ತೂದೂರು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಹಲವು ಬಾರಿ ಅಬಕಾರಿ ಇಲಾಖೆ ಗಮನಕ್ಕೆ ತಂದರೂ ನಿಯಂತ್ರಣವಾಗಿಲ್ಲ. ಎರಡು ದಿನಗಳ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ 20 ವರ್ಷದ ಇಬ್ಬರು ಯುವತಿಯರು ಜೀವ ತೆತ್ತಿದ್ದಾರೆ. ಅಕ್ರಮವಾಗಿ ಕಳಪೆ ಮದ್ಯ ಮಾರಾಟ ಸಾವಿಗೆ ಕಾರಣ. ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟಗಾರರ ಜತೆ ಶಾಮೀಲಾಗಿದೆ ಎಂದು ಆರೋಪಿಸಿದರು.

ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೂರೈಸುವ ಬಾರ್, ವೈನ್‌ಶಾಪ್ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಕ್ರಮ ಮದ್ಯ ಮಾರಾಟದ ಬಾಟಲಿಯಲ್ಲಿ ಮುದ್ರೆ ಇಲ್ಲ. ಇದಕ್ಕೆ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಅರಣ್ಯ ಇಲಾಖೆ ಒತ್ತುವರಿ ಪ್ರಕರಣದಲ್ಲಿ ತಾರತಮ್ಯ ಧೋರಣೆ ಮಾಡುತ್ತಿದೆ. ಬಡ ಒತ್ತುವರಿದಾರರ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಸರ್ಕಾರ ಸೂಚನೆ ನೀಡಿದ್ದರು ಪ್ರಕರಣ ದಾಖಲಿಸುತ್ತಿದೆ. ಹತ್ತಾರು ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಒತ್ತುವರಿ ಪ್ರಕರಣಗಳ ಕುರಿತು ಸಭೆಗೆ ಲಿಖಿತ ಮಾಹಿತಿ ಮಂಡಿಸಬೇಕು. ಅರಣ್ಯ ಇಲಾಖೆ ಇದೇ ರೀತಿ ದೌರ್ಜನ್ಯ, ಅಧಿಕಾರ ದುರುಪಯೋಗ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT