ಶುಕ್ರವಾರ, ಡಿಸೆಂಬರ್ 2, 2022
19 °C
ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟದಿಂದ 24 ಗಂಟೆಗಳ ಧರಣಿ

ಗ್ರಾ.ಪಂ. ಖಾತ್ರಿ ಕಾಮಗಾರಿಗಳ ತಿರಸ್ಕೃತ: ಜಿ.ಪಂ. ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ಗ್ರಾಮ ಪಂಚಾಯಿತಿ ಯಿಂದ ಕ್ರಿಯಾಯೋಜನೆಯಾದ ನರೇಗಾ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಸಕಾರಣವಿಲ್ಲದೇ ತಿರಸ್ಕೃತ ಮಾಡುತ್ತಿದೆ. ಅಲ್ಲದೇ ಪ್ರತಿಯೊಂದಕ್ಕೂ ಅಧಿಕಾರಿಗಳ ಹಸ್ತಕ್ಷೇಪದಿಂದ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಬುಧವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 24 ಗಂಟೆಗಳ ಧರಣಿ ನಡೆಸಿತು.

‘ನರೇಗಾ ಯೋಜನೆಯಡಿ 2020– 21 ಮತ್ತು 22ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆಯಾದ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳನ್ನು 2022–23ನೇ ಸಾಲಿನಲ್ಲಿ ಅನುಷ್ಠಾನ ಮಾಡಲು ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಆದರೆ ಹಿಂದಿನ ಆರ್ಥಿಕ ವರ್ಷದಲ್ಲಿ ಅನುಮೋದನೆಯಾದ ಕಾಮಗಾರಿಗಳನ್ನು ಮಾರ್ಚ್ 31, 2022ರ ಪೂರ್ವದಲ್ಲಿ ಪ್ರಾರಂಭಿಸದೇ ಇದ್ದಲ್ಲಿ ಮತ್ತೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದು, ಅನುಷ್ಠಾನ ಮಾಡಬೇಕು ಎಂದು ಸರ್ಕಾರದ ಸುತ್ತೋಲೆ ಇದ್ದರೂ ಹೆಚ್ಚುವರಿ ಕ್ರಿಯಾಯೋಜನೆ ಸಲ್ಲಿಸಿದರೆ ಜಿಲ್ಲಾ ಪಂಚಾಯಿತಿಯಿಂದ ತಿರಸ್ಕಾರ ಮಾಡಲಾಗುತ್ತಿದೆ. ಇದರಿಂದ ಕಾಮಗಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಚಿದಂಬರ್ ಹೂವಿನಕೋಣೆ ದೂರಿದರು.

ತಾಲ್ಲೂಕು ಮಲೆನಾಡು ಪ್ರದೇಶವಾಗಿದ್ದು, ಇಲ್ಲಿಯ ಋತುಮಾನ ಆಧರಿಸಿ ಅಗತ್ಯ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವುದು ಅನಿವಾರ್ಯ. ನರೇಗಾ ಯೋಜನೆಯ ಕಾಮಗಾರಿಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ನರೇಗಾ ಯೋಜನಾಧಿಕಾರಿ ನಂದಿನಿ ಭೇಟಿ ನೀಡಿ ಅಹವಾಲು ಆಲಿಸಿದರು. ಈ ಸಂಬಂಧ ವರದಿ ನೀಡುವ ಭರವಸೆ ನೀಡಿದರು.

ಒಕ್ಕೂಟದ ಕಾರ್ಯದರ್ಶಿ ತೊಗರೆ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರುಣಾಕರಶೆಟ್ಟಿ, ಜ್ಯೋತಿ, ಹೆರಟೆ ಆದರ್ಶ, ಯಡೂರು ಸದಾನಂದ್, ರಿಪ್ಪನ್‌ಪೇಟೆ, ಬಾಳೂರು, ಕೋಡೂರು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು