ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ಗಣಪತಿ ಕೆರೆಗೆ ಕೊಳಚೆ ನೀರು: ಪ್ರತಿಭಟನೆ

Last Updated 25 ಜನವರಿ 2023, 5:37 IST
ಅಕ್ಷರ ಗಾತ್ರ

ಸಾಗರ: ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಗೆ ಕೊಳಚೆ ನೀರು ಹಾಯಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್‌ ಪ್ರಮುಖರು ಕೆರೆ ಎದುರು ಪ್ರತಿಭಟನೆ ನಡೆಸಿ ರಸ್ತೆ ತಡೆ ಚಳವಳಿ ನಡೆಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ‘ಶಾಸಕ ಹಾಲಪ್ಪ ಹರತಾಳು ಅವರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಕೆರೆಯ ಪಕ್ಕದಲ್ಲಿ ಶಾಸಕರು ಭೂಮಿ ಖರೀದಿಸಿದ್ದು ಅಲ್ಲಿ ರೆಸಾರ್ಟ್‌ ನಿರ್ಮಿಸಿಲು ಮುಂದಾಗಿದ್ದು ತಮ್ಮ ಭೂಮಿಗೆ ಬೆಲೆ ತಂದುಕೊಳ್ಳಲು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಗಣಪತಿ ಕೆರೆಯ ನೀರಿನ ಮೂಲವನ್ನೇ ಬತ್ತಿಸಿ ಕುಡಿಯುವ ನೀರು ಪೂರೈಕೆಗಾಗಿ ಬರುತ್ತಿರುವ ಶರಾವತಿ ಹಿನ್ನೀರಿನ ನೀರನ್ನು ಕೆರೆಗೆ ಹರಿಸಿ ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಇದನ್ನು ನೋಡಿಯೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ದೂರಿದರು.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಶಾಸಕ ಹಾಲಪ್ಪ ಅವರು ಕೆರೆ ಹಬ್ಬದ ಸಲುವಾಗಿ ಎರಡು ವಿದ್ಯುತ್ ಪರಿವರ್ತಕಗಳನ್ನು ಕೆರೆ ಸಮೀಪ ಅಳವಡಿಸಿದ್ದಾರೆ’ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ‘ಶಾಸಕ ಹಾಲಪ್ಪ ಅವರು ಅಭಿವೃದ್ಧಿ ಎಂದರೆ ಗಣಪತಿ ಕೆರೆ ಕೆಲಸ ಮಾತ್ರ ಎಂದು ಭಾವಿಸಿದಂತಿದೆ. ಈಗ ಕೊಳಚೆ ನೀರನ್ನು ಕೆರೆಗೆ ಹರಿಸಲಾಗುತ್ತಿದ್ದು ದುರ್ವಾಸನೆ ಬರುತ್ತಿದೆ. ಅಭಿವೃದ್ಧಿ ಎಂದರೆ ಇದೇನಾ?’ ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ‘ಗಣಪತಿ ಕೆರೆ ಕಾಮಗಾರಿಯ ವಿಷಯದಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ಸಾರ್ವಜನಿಕರ ಹಣವನ್ನು ಕೆರೆ ಅಭಿವೃದ್ಧಿಯ ಹೆಸರಿನಲ್ಲಿ ಪೋಲು ಮಾಡಲಾಗುತ್ತಿದೆ. ಈಗ ಕೊಳಚೆ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ಊರಿನ ಜನರ ಆರೋಗ್ಯ ಹಾಳಾಗುವ ಅಪಾಯ ಎದುರಾಗಿದೆ’ ಎಂದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಬರಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಕೆರೆಗೆ ಮಲಿನ ನೀರು ಸೇರದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ನ ಪ್ರಮುಖರಾದ ಐ.ಎನ್. ಸುರೇಶ್ ಬಾಬು, ಮಧು ಮಾಲತಿ, ಎನ್. ಲಲಿತಮ್ಮ, ಡಿ. ದಿನೇಶ್, ಎನ್. ಶ್ರೀನಾಥ್, ಅನ್ವರ್ ಬಾಷಾ, ಗಣಾಧೀಶ್, ಮನೋಜ್ ಕುಗ್ವೆ, ಸಂತೋಷ್ ಸದ್ಗುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT