ಶನಿವಾರ, ಅಕ್ಟೋಬರ್ 16, 2021
23 °C

ಮನೆ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ನೇತೃತ್ವದಲ್ಲಿ ಸಂತ್ರಸ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮಳೆ, ನೆರೆಯಿಂದ ಮನೆ ಕಳೆದುಕೊಂಡವರಿಗೆ ಎರಡು ವರ್ಷಗಳಾದರೂ ಪರಿಹಾರ ನೀಡಿಲ್ಲ. ಬಡವರ
ಜೀವನದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಶಿವಮೊಗ್ಗ ನಗರದಲ್ಲಿ ಮಳೆಗೆ ಸಾವಿರಾರು ಮನೆಗಳು ಕುಸಿದಿವೆ, ಬಡವರು ಬೀದಿಪಾಲಾಗಿದ್ದಾರೆ. ಸರ್ಕಾರ ₹ 5 ಲಕ್ಷ ಪರಿಹಾರ ಘೋಷಿಸಿತ್ತು. ಆದರೆ, ಈ ಘೋಷಣೆ ಕಣ್ಣೊರೆಸುವ ತಂತ್ರವಾಗಿದೆ. ಅರ್ಜಿಗಳು ಕಸದಬುಟ್ಟಿ ಸೇರಿವೆ. ಅರ್ಜಿಗಳೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ದೂರಿದರು.

ಶಿವಮೊಗ್ಗ ತಾಲ್ಲೂಕಿನಲ್ಲಿ 200 ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. 2017 -18ರಿಂದ ಯಾವ ಗ್ರಾಮಗಳಲ್ಲೂ ಒಂದು ಮನೆ ಸಹ
ನೀಡಿಲ್ಲ. ಮನೆ ಕಟ್ಟಲು ಸಹಾಯ ಮಾಡಿಲ್ಲ. ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ ಕೆಲವರಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿಕೊಟ್ಟಿತ್ತು. ಅವು ಅತ್ಯಂತ ಕಳಪೆಯಾಗಿವೆ. ಮಳೆ ಬಂದರೆ ಒಳಗೆ ನೀರು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೀಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಅನಿಲ್ ಕುಮಾರ್, ಗಿರೀಶ್, ಜಗದೀಶ್, ದೊರೆಯಪ್ಪ, ನಿತೀಶ್, ರಂಗನಾಥ್, ಪುನೀತ, ಹರೀಶ್ ನಾಯ್ಕ್, ಅಭಿಷೇಕ್, ನಾಗೇಶ್, ರಮೇಶ್, ಮೇದಾರಪ್ಪ, ದೇವಿಕುಮಾರ್, ಓಂಕಾರಪ್ಪ, ವೆಂಕಟೇಶ್
ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.