ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ–ವಿರೋಧ: ಸದಸ್ಯರ ನಡುವೆ ವಾಕ್ಸಮರ

ನೂತನ ಪಿಡಿಒ ನಿಯೋಜನೆ ಮಾಡದಂತೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ
Last Updated 13 ಸೆಪ್ಟೆಂಬರ್ 2022, 6:44 IST
ಅಕ್ಷರ ಗಾತ್ರ

ಆನಂದಪುರ: ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಒ ಇಂದಿರಾ ಜ್ಯೋತಿ ಅವರನ್ನು ನಿಯೋಜನೆ ಮಾಡದಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೋನಗೋಡು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

‘ಪಿಡಿಒ ಇಂದಿರಾ ಜ್ಯೋತಿ ಅವರು ಆನಂದಪುರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಕಾರಣಕ್ಕಾಗಿ ಹಲವು ಭಾರಿ ಪ್ರತಿಭಟನೆ ಮಾಡಿ ವರ್ಗಾವಣೆ ಮಾಡಿಸಲಾಗಿತ್ತು. ಜನರಿಗೆ ಸ್ಪಂದಿಸದ, ಸರಿಯಾಗಿ ಕರ್ತವ್ಯ ನಿರ್ವಹಿಸದ ಅವರನ್ನು ಇಲ್ಲಿಗೆ ನಿಯೋಜಿಸಬಾರದು’ ಎಂದು ರತ್ನಾಕರ್ ಹೋನಗೋಡು ಆಗ್ರಹಿಸಿದರು.

‘ಪಿಡಿಒ ಕುಮಾರ್ ಇಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜನರಿಗೆ ಸ್ಪಂದಿಸುತ್ತಿದ್ದರು. ಈಗ ಏಕಾಏಕಿ ಅವರ ವರ್ಗಾವಣೆ ಮಾಡಲಾಗಿದೆ. ಇ.ಒ. ಸೇರಿ ಮೇಲಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇದಲ್ಲದೆ ಸರಿಯಾಗಿ ಕಾರ್ಯನಿರ್ವಹಿಸದ ಇಂದಿರಾ ಜ್ಯೋತಿ ಅವರನ್ನು ನಿಯೋಜಿಸುತ್ತಿದ್ದಾರೆ. ಅವರನ್ನು ನಿಯೋಜನೆ ಮಾಡಿದರೆ ಹಗಲು–ರಾತ್ರಿ ಪ್ರತಿಭಟನೆ ಮಾಡಲಾಗುವುದು’ ಎಂದು ಗಣಪತಿ ಎಚ್ಚರಿಸಿದರು.

ಕಾರ್ಯವೈಖರಿ ತಿಳಿಯದೆ ನಿಯೋಜನೆ ಖಂಡಿಸುವುದು ಸಲ್ಲ: ‘ನಿಯೋಜನೆಗೊಂಡಿರುವ ಪಿಡಿಒಗೆ ಒಂದೆರಡು ತಿಂಗಳು ಅವಕಾಶ ನೀಡಿದರೆ ಅವರ ಕಾರ್ಯವೈಖರಿ ಗೊತ್ತಾಗುತ್ತದೆ. ಅವರು, ಸ್ಪಂದಿಸದೆ ಇದ್ದರೆ ನಾವು ಅವರ ವಿರುದ್ಧ ನಿಲ್ಲುತ್ತೇವೆ. ಒಂದೂ ದಿನವೂ ಕಾರ್ಯ ನಿರ್ವಹಿಸದೇ ಇರುವ ಪಿಡಿಒ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯೇ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಗೌಡ ಪ್ರಶ್ನೆ ಮಾಡಿದರು.

‘ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಡಿಒ ಕುಮಾರ್‌ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಅವರೇ ಇವರನ್ನೆಲ್ಲ ಎತ್ತಿಕಟ್ಟಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಸದಸ್ಯರಾದ ಜ್ಯೋತಿ, ಶಿವಕುಮಾರ್ ಆರೋಪ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇ.ಒ. ಪುಷ್ಪಾ ಕಮ್ಮಾರ್, ‘ಈ ಮೊದಲು ಕಾರ್ಯ ನಿರ್ವಹಿಸುತ್ತಿರುವ ಪಿಡಿಒ ಕುಮಾರ್ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆದ್ದರಿಂದ ವರ್ಗಾವಣೆ ಮಾಡಲಾಗಿದೆ. ಆಡಳಿತ ದೃಷ್ಟಿಯಿಂದ ಮಾತ್ರ ಇಂದಿರಾ ಜ್ಯೋತಿ ಅವರನ್ನು ಯಡೇಹಳ್ಳಿ ಪಂಚಾಯಿತಿಗೆ ನೇಮಕ ಮಾಡಲಾಗಿದೆ’ ಎಂದು ಹೇಳಿದರು.

‘ನೂತನ ಪಿಡಿಒಗೆ ಕಾರ್ಯ ನಿರ್ವಹಿಸಲು 15 ದಿನಗಳ ಅವಕಾಶ ನೀಡಿ. ನಿಮ್ಮ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಬದಲಾವಣೆ ಮಾಡಲಾಗುವುದು’ ಎಂದು ಪುಷ್ಪಾ ಹೇಳಿದರು. ಆದರೆ, ‘ಯಾವುದೇ ಕಾರಣಕ್ಕೂ ನಿಯೋಜನೆ ಮಾಡಬೇಡಿ’ ಎಂದು ಪ್ರತಿಭಟನಕಾರರು ಪಟ್ಟುಹಿಡಿದರು. ‘ಯಾವ ಪಿಡಿಒ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಕೂಡಲೇ ಮೇಲಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಇಒ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.

ಉಪಾದ್ಯಕ್ಷೆ ರೇಣುಕಮ್ಮ, ಸದಸ್ಯರಾದ ನಟರಾಜ್, ಶಿವಾನಂದ ರತ್ನಮ್ಮ, ಪ್ರಮುಖರಾದ ಭರ್ಮಪ್ಪ, ಗಂಗಾಧರ್, ಮೋಹನ್, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT