ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯೇ ಗುರಿ: ಸರ್ಕಾರಿ ಒತ್ತುವರಿ

ಕಾಂಕ್ರೀಟ್‌ ಕಟ್ಟಡಗಳ ನೆಲೆಯಾಗುತ್ತಿದೆ ಪ್ರಕೃತಿ ಸೌಂದರ್ಯದ ತಾಣ ರಾಗಿಗುಡ್ಡ
Last Updated 20 ಸೆಪ್ಟೆಂಬರ್ 2021, 8:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನಲ್ಲಿ ಬೆಟ್ಟ, ಗುಡ್ಡಗಳನ್ನುಸಮತಟ್ಟು ಮಾಡಿ, ಕಾನೂನುಬಾಹಿರವಾಗಿ ಕೃಷಿಗೆ ಬಳಕೆ ಮಾಡುತ್ತಿರುವ ಮಧ್ಯೆಯೇ ಸರ್ಕಾರವೂ ಅಭಿವೃದ್ಧಿಯ ನೆಪದಲ್ಲಿ ಕಾನೂನು ಚೌಕಟ್ಟಿನಲ್ಲೇ ಒತ್ತುವರಿ ಮಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಶಿವಮೊಗ್ಗ ನಗರದ ಸಂಸ್ಕೃತಿಯ ಒಂದು ಭಾಗವೇ ಆಗಿರುವ ರಾಗಿಗುಡ್ಡ ಈಗ ಸರ್ಕಾರದ ಒತ್ತುವರಿಗೆ ನಲುಗಿದೆ. ಅಲ್ಲಿ ನೀರಿನ ಘಟಕಗಳು, ಹಾಸ್ಟೆಲ್‌, ಇಎಸ್‌ಐ ಆಸ್ಪತ್ರೆಗಳು ತಲೆಎತ್ತುತ್ತಿವೆ. ಸರ್ಕಾರಿ ಒತ್ತುವರಿ ಅವ್ಯಾಹತವಾಗಿ ಮುಂದುವರಿದಿದೆ.

ಒಂದು ಕಾಲದಲ್ಲಿ ರಿಯಲ್‌ ಎಸ್ಟೇಟ್‌ ದಂಧೆಕೋರರು, ಮಣ್ಣು ಲೂಟಿಕೋರರಿಂದ ನಿರಂತರ ಒತ್ತುವರಿಯಾಗುತ್ತಿದ್ದ ಗುಡ್ಡವನ್ನು ಉಳಿಸಲು ಪರಿಸರಾಸಕ್ತರು ಹೋರಾಟವನ್ನೇ ಮಾಡಿದ್ದರು. ಗುಡ್ಡದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಿದ್ದರು. ವಿವಿಧ ಔಷಧೀಯ ಗುಣಗಳುಳ್ಳ ಸಸ್ಯ ಪ್ರಬೇಧಗಳನ್ನು ಬೆಳೆಸುವ ಮೂಲಕ ಅತ್ಯುತ್ತಮ ಔಷಧ ವನವನ್ನಾಗಿ ಮಾರ್ಪಡಿಸಿದ್ದರು.

ಜಿಲ್ಲಾಡಳಿತ, ಅರಣ್ಯ ಇಲಾಖೆಯ ಸಹಯೋಗದಲ್ಲೇ ಹಲವಾರು ಸಂಘ–ಸಂಸ್ಥೆಗಳು ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿವೆ.ರಾಗಿಗುಡ್ಡದ ನಿರ್ದಿಷ್ಟ ಪ್ರದೇಶದಲ್ಲಿ ವಿವಿಧ ಔಷಧೀಯ ಗುಣಗಳುಳ್ಳ ಸಸ್ಯ ಪ್ರಬೇಧಗಳನ್ನು ಬೆಳೆಸಲಾಗಿದೆ. ಈಗ ಈ ಗುಡ್ಡವನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ.

‘₹ 99.77 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಇಎಸ್‍ಐ ಆಸ್ಪತ್ರೆಯ ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಲಕ್ಷಾಂತರ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತ ಸದಸ್ಯರಿಗೆ ಅನುಕೂಲವಾಗಲಿದೆ. 3 ಲಕ್ಷದಿಂದ 4 ಲಕ್ಷ ಜನರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಸಂಸದ ಬಿ.ವೈ.ರಾಘವೇಂದ್ರ.

ಆಸ್ಪತ್ರೆ ಕಟ್ಟಡದ ಜತೆಗೆ ₹ 56 ಕೋಟಿ ವೆಚ್ಚದಲ್ಲಿ 32 ಸಿಬ್ಬಂದಿ ವಸತಿಗೃಹಗಳ ನಿರ್ಮಾಣ, ಆಸ್ಪತ್ರೆಗೆ ಅಗತ್ಯವಾದ ಅತ್ಯಾಧುನಿಕ ಮೂಲಸೌಕರ್ಯ, ವಾಹನಗಳ ನಿಲುಗಡೆ, ಪ್ರಯೋಗಾಲಯ, ಶವಾಗಾರಗಳನ್ನು ನಿರ್ಮಿಸಲಾಗುತ್ತಿದೆ.

ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕಾಗಿ ರಾಗಿಗುಡ್ಡದ 6 ಎಕರೆ ಬಳಸಿಕೊಳ್ಳಲಾಗುತ್ತಿದೆ. ಪರಿಸರ, ಮಣ್ಣು ಲೂಟಿ ಮಾಡಲಾಗುತ್ತಿದೆ. ತಕ್ಷಣ ನಿರ್ಮಾಣ ಕಾರ್ಯ ತಡೆಯಬೇಕು. ಇಎಸ್‌ಐ ಆಸ್ಪತ್ರೆಗೆ ಬದಲಿ ಸ್ಥಳ ನೀಡಬೇಕು ಎಂದು ಪರಿಸರಾಸಕ್ತರು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಈಗಲಾದರೂ ವಿವಿಧ ಯೋಜನೆಗಳಿಗೆ ನೀಡಿರುವ ಈ ಪ್ರದೇಶವನ್ನು ಹಿಂತೆಗೆದುಕೊಂಡು ಪೂರ್ಣ ಪ್ರಮಾಣದ ಜೈವಿಕ ವೈವಿಧ್ಯ ತಾಣವಾಗಿ ಉಳಿಸಿಕೊಡಬೇಕು ಎಂದು ಪರಿಸರ ಪ್ರೇಮಿಗಳಾದಕೆ.ವಿ. ವಸಂತಕುಮಾರ್, ಎಸ್.ಬಿ. ಅಶೋಕ್‌ಕುಮಾರ್, ಡಾ. ಸತೀಶ್‌ಕುಮಾರ್ ಶೆಟ್ಟಿ, ಪರಿಸರ ರಮೇಶ್, ಪುಷ್ಟ ಎಸ್. ಶೆಟ್ಟಿ, ಗೋರೆ, ಹೊಳೆಮಡಿಲು ವೆಂಕಟೇಶ್, ನವ್ಯಶ್ರೀ ನಾಗೇಶ್, ಪ್ರೊ.ಕುಮಾರಸ್ವಾಮಿ, ಶೇಖರ್ ಗೌಳೇರ್ ಅವರು ಹಲವು ಬಾರಿ ಹೋರಾಟ ಮಾಡಿದ್ದಾರೆ.

‘ರಾಗಿಗುಡ್ಡ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಜೀವವೈವಿಧ್ಯ ತಾಣವಾಗಿ ಉಳಿಯಬೇಕು. ರಾಗಿಗುಡ್ಡದ 108 ಎಕರೆಗೂ ಅಧಿಕ ಜಾಗದಲ್ಲಿ ನಡೆಸಲು ಉದ್ದೇಶಿಸಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ತಕ್ಷಣ ನಿಲ್ಲಬೇಕು. ವಿವಿಧ ಇಲಾಖೆಗಳಿಗೆ ನೀಡಿರುವ ಜಾಗವನ್ನು ಕೂಡಲೇ ರದ್ದುಮಾಡಬೇಕು’ ಎನ್ನುತ್ತಾರೆ ಪರಿಸರ ಛಾಯಗ್ರಾಹಕ ಶಿವಮೊಗ್ಗ ನಂದನ್.

ಪ್ರಕೃತಿ ಸೌಂದರ್ಯದ ತಾಣ ರಾಗಿಗುಡ್ಡ

ನಗರದ ಹೊರವಲಯದಲ್ಲಿರುವ ರಾಗಿಗುಡ್ಡದ ಪ್ರಕೃತಿ ಸೌಂದರ್ಯನಯನ ಮನೋಹರವಾಗಿದೆ. ಗುಡ್ಡದ ಮೇಲೆ ನಿಂತರೆ ಇಡೀ ಶಿವಮೊಗ್ಗ ನಗರದ ದೃಶ್ಯ ಕಾಣಬಹುದು.

35 ವರ್ಷಗಳ ಹಿಂದೆನವುಲೆಯವೀರದಾಸ್‌ ದಾನಿಗಳ ಸಹಾಯದಿಂದ ಗುಡ್ಡದ ಮೇಲೆ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಬಡವರಿಗೆ ಅನುಕೂಲವಾಗಲೆಂದು ಚಿಕ್ಕದಾದ ಕಲ್ಯಾಣ ಮಂಟಪವನ್ನು ಕಟ್ಟಿಸಿದ್ದರು. ಬ್ರಹ್ಮ, ವಿಷ್ಣು, ಮಹೇಶ್ವರರ ದೇವಸ್ಥಾನ,ಗಣಪತಿ, ಆಂಜನೇಯ, ಸುಬ್ರಹ್ಮಣ್ಯ, ಶನೇಶ್ವರ, ಲಕ್ಷ್ಮೀ, ಸರಸ್ವತಿ, ಪಾರ್ವತಿ, ಭೂದೇವಿ, ಪದ್ಮಾವತಿ ದೇವಸ್ಥಾನಗಳನ್ನು ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಈಶ್ವರನ ದೇವಸ್ಥಾನ ನಿರ್ಮಾಣ ಅರ್ಧಕ್ಕೆ ನಿಂತಿದೆ. ಬಹುತೇಕ ದೇಗುಲಗಳು ಶಿಥಿಲಗೊಂಡಿವೆ. ಕುಡಿಯುವ ನೀರು, ವಿದ್ಯುತ್, ರಸ್ತೆಯಂತಹ ಮೂಲಸೌಲಭ್ಯದ ಕೊರತೆ ಇದೆ.

ಅಕ್ರಮ ಚಟುವಟಿಕೆಯ ತಾಣ

ರಾಗಿಗುಡ್ಡ ಅಕ್ರಮ ಚಟುವಟಿಕೆಯ ತಾಣವಾಗಿದೆ. ಪ್ರೇಮಿಗಳು, ಕಾಲೇಜು ಯುವಕ–ಯುವತಿಯರು, ಪುಂಡ–ಪೋಕರಿಗಳು ಅಕ್ರಮ ಚಟುವಟಿಕೆ ನಡೆಸುವುದು ಸಾಮಾನ್ಯ ಸಂಗತಿ. ಗುಡ್ಡದ ಮೇಲೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಸಿಗರೇಟ್‌ಗಳು ಬಿದ್ದಿವೆ. ಎಷ್ಟೋ ಬಾರಿ ಪ್ರೇಮಿಗಳನ್ನು
ಹೆದರಿಸಿ ಹಣ ಕಿತ್ತುಕೊಂಡ ಉದಾಹರಣೆಗಳೂ ಇವೆ.

ವಸತಿಶಾಲೆಗಳಿಗೆ ಗುಡ್ಡಗಳೇ ತಾಣ

ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನಲ್ಲಿ ಮೊರಾರ್ಜಿ ದೇಸಾಯಿ ವಸತಿಶಾಲೆ ಸೇರಿ ಹಲವು ಸರ್ಕಾರಿ ಕಟ್ಟಡಗಳಿಗೆ ಬೆಟ್ಟಗುಡ್ಡಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ತಾಲ್ಲೂಕಿನಲ್ಲಿ ಬೇಗೂರು, ಹೊಸೂರು (ನಳ್ಳಿನಕೊಪ್ಪ), ಸನ್ಯಾಸಿಕೊಪ್ಪ (ಚುರ್ಚಿಗುಂಡಿ), ಮಳೂರು, ಮಂಚಿಕೊಪ್ಪ ಗ್ರಾಮದ ಸಮೀಪ ಹಕ್ಳಿ ಗ್ರಾಮಗಳಲ್ಲಿ ಮೊರಾರ್ಜಿ ದೇಸಾಯಿ ವಸತಿಶಾಲೆ ಸೇರಿ ತಾಲ್ಲೂಕಿನಲ್ಲಿ ಹಲವು ಶಾಲೆಗಳಿಗೆ ಮರ–ಗಿಡಗಳಿರುವ ಸಂಪದ್ಭರಿತ ಗುಡ್ಡಗಳನ್ನು ನಾಶ ಮಾಡಲಾಗಿದೆ.

‘ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿಶಾಲೆ ಸೇರಿ ಕೆಲವು ಶಾಲೆಗಳನ್ನು ನಿರ್ಮಿಸಲು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಶಾಲೆ ಪ್ರದೇಶದಲ್ಲಿರುವ ಸಂಪತ್ತು ಬಳಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂಬ ನಿಯಮವಿದೆ’ ಎನ್ನುತ್ತಾರೆ ಶಿಕಾರಿಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT