ಬುಧವಾರ, ಅಕ್ಟೋಬರ್ 20, 2021
24 °C
ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಕೊಳೆರೋಗ ಬಾಧೆಗೆ ರೈತರ ತಲ್ಲಣ

ಹೊಸನಗರ: ಮತ್ತೆ ಮತ್ತೆ ಮಳೆ; ಅಡಿಕೆಗೆ ನಿಲ್ಲದ ಕೊಳೆ

ರವಿ, ಹೊಸನಗರ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮಳೆನಾಡ ನಡುಮನೆಯಲ್ಲಿ ಎಡಬಿಡದೆ ಸುರಿಯುತ್ತಿರುವುದರಿಂದ ಅಡಿಕೆ ಬೆಳೆ ಮೇಲೆರಗಿದ್ದು, ಅಡಿಕೆಗೆ ಕೊಳೆ ಬಾಧೆ ಬಿಟ್ಟು ಬಿಡದೇ ಕಾಡುತ್ತಿದೆ. ಇದರಿಂದ ಸಹಜವಾಗಿ ರೈತರ ಮನದಲ್ಲಿ ಆತಂಕ ಮನೆಮಾಡಿದೆ. ವರ್ಷದ ಬೆಳೆಯನ್ನೇ ನಂಬಿದ್ದ ರೈತರಿಗೆ ಮುಂದೇನು ಎಂಬ ಚಿಂತೆ ಕಾಡತೊಡಗಿದೆ.

ಹೊಸನಗರ ತಾಲ್ಲೂಕಿನ ಘಟ್ಟ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಈಗಾಗಲೇ ಜೂನ್‌ನಿಂದ 6680 ಮಿ.ಮೀಗೂ ಹೆಚ್ಚು ಮಳೆ ಸುರಿದಿದೆ. ಸಾಧಾರಣವಾಗಿ ಶೀತ ವಾತವರಣ, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಒಂದು ವಾರಗಳ ಕಾಲ ಇದ್ದಲ್ಲಿ ಅಡಿಕೆಗೆ ಕೊಳೆ ಕೊಳೆ ರೋಗ ತಗುಲುತ್ತದೆ. ಅತಿಯಾದ ಮಳೆಗೆ ಸಹಜವಾಗಿಯೇ ಕೊಳೆ ಕಾಣಿಸಿಕೊಂಡಿದೆ. ಕೊಳೆ ಹತೋಟಿಗೆ ಬಾರದೆ ಮಹಾಮಾರಿಯಾಗಿ ಕಾಡಿದೆ.

ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲ್ಲೂಕಿನ ನಗರ ಹೋಬಳಿಯಲ್ಲಿ ಕೊಳೆ ಪ್ರಮಾಣ ಹೆಚ್ಚಿದೆ. ಪಕ್ಕದ ಹುಂಚಾ ಹೋಬಳಿಯಲ್ಲೂ ಕೊಳೆ ವ್ಯಾಪಕವಾಗಿದ್ದು, ರೋಗ ನಿಯಂತ್ರಣ ಮಾಡಲು ರೈತರು ಹರಸಾಹಸಪಡುತ್ತಿದ್ದಾರೆ.

ನಗರ, ಮಾಸ್ತಿಕಟ್ಟೆ, ಯಡೂರು, ಸಂಪೇಕಟ್ಟೆ, ನಿಟ್ಟೂರು, ಕಾರಗಡಿ ಭಾಗಗಳ ಅಡಿಕೆ ತೋಟಗಳಲ್ಲಿ ಭಾರಿ ಪ್ರಮಾಣದಲ್ಲಿ ಕೊಳೆ ಕಂಡುಬಂದಿದ್ದು, ತೋಟಗಳ ತುಂಬೆಲ್ಲ ಅಡಿಕೆ ಹಾಸಿಹೋಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 10 ಕ್ವಿಂಟಲ್ ಬೆಳೆಯುವ ರೈತ 3ರಿಂದ 4 ಕ್ವಿಂಟಲ್‌ಗೆ ತೃಪ್ತಿಪಡಬೇಕಿದೆ.

ಮರಕ್ಕೆ ಜ್ವರ: ಮತ್ತೆ ಮಳೆ ಸುರಿಯುತ್ತಿರುವುದರಿಂದ ಕೊಳೆ ಮಾತ್ರವಲ್ಲದೆ ಮರಕ್ಕೂ ಆಪಾಯ ಕಾದಿದೆ. ಕೊಳೆ ಹೆಚ್ಚಾದಂತೆ ಮರಗಳ
ಸುಳಿಗೆ ಕೊಳೆ ತಗಲುತ್ತದೆ. ಇದರಿಂದಾಗಿ ಮರಗಳು ಜ್ವರ ಬಂದು ಸಾಯುತ್ತಿವೆ. ಮೊದಲು ನೀರುಗೊಳೆಯಾಗಿ ಕಾಣಿಸಿಕೊಂಡ ಕೊಳೆ ಇದೀಗ ಬೂದುಗೊಳೆಯಾಗಿ ಮಾರ್ಪಾಟಾಗಿದೆ. ಪದೇ ಪದೇ ಔಷಧೋಪಚಾರ ಮಾಡಿದರೂ ಕೊಳೆ ರೋಗ ಹತೋಟಿಗೆ ಬರುತ್ತಿಲ್ಲ.

ಔಷಧಕ್ಕೆ ಬಗ್ಗದ ಕೊಳೆ: ಅಡಿಕೆ ಕೊಳೆ ರೋಗಕ್ಕೆ ಬೋರ್ಡೋ ದ್ರಾವಣವನ್ನು 4 ಬಾರಿ ದ್ರಾವಣ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಔಷಧ ಸಿಂಪಡಣೆಗೆ ಮಳೆ ಅಡ್ಡಿಯಾದರೂ ಹಠ ಬಿಡದ ರೈತರು ಬೋರ್ಡೋ ದ್ರಾವಣದ ಜೊತೆಗೆ ವಿವಿಧ ಔಷಧಗಳನ್ನು ಸಿಂಪಡಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ಮಳೆ ನಿಂತರಷ್ಟೆ ಅಡಿಕೆಗೆ ಉಳಿಗಾಲ: ‘ಕೊಳೆ ಹತೋಟಿಗೆ ಬರಬೇಕಿದ್ದಲ್ಲಿ ಮಳೆ ನಿಲ್ಲಬೇಕಿದೆ. ಬಿಸಿಲ ದರ್ಶನವಾದರಷ್ಟೆ ಮಲೆನಾಡ ಅಡಿಕೆಗೆ ಉಳಿಗಾಲ. ಎಷ್ಟೇ ಪ್ರಮಾಣದ ಔಷಧ ಸಿಂಪಡಿಸಿದರೂ ವ್ಯರ್ಥವಾಗುತ್ತಿದೆ. ಮಳೆ ನಿಂತರಷ್ಟೆ ರೈತ ಸಮಾಧಾನದ ನಿಟ್ಟುಸಿರು ಬಿಡಬಲ್ಲ’ ಎನ್ನುತ್ತಾರೆ ಕೃಷಿಕ ಜಗದೀಶ್ ರಾವ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು