ಹೊಸನಗರ: ತಾಲ್ಲೂಕಿನ ನಗರ ಹೋಬಳಿ ಸೇರಿ ಎಲ್ಲೆಡೆ ಮಳೆ ಜೋರಾಗಿದ್ದು, ಸತತ ಮೂರು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ತಾಲ್ಲೂಕಿನ ಘಟ್ಟ ಪ್ರದೇಶ ಮತ್ತು ಜಲಾನಯನ ಪ್ರದೇಶದಲ್ಲಿ ಒಂದೇ ಸಮನೆ ಮಳೆ ಬೀಳುತ್ತಿದೆ.
ಮುಂಗಾರು ಆರಂಭದಲ್ಲಿ ಮೃಗಶಿರಾ ಮಳೆ ವಾಡಿಕೆಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ಸುರಿದು ದಾಖಲೆ ಮಾಡಿತ್ತು. 122 ಸೆಂ.ಮೀ. ಮಳೆ ಆಗಿ ಭಾರಿ ಮಳೆಗಾಲದ ನಿರೀಕ್ಷೆ ಹುಟ್ಟಿಸಿತ್ತು. ನಂತರ ಆರಿದ್ರಾ ಮಳೆ ಪೂರ್ಣ ಕೈಕೊಟ್ಟಿತ್ತು. ಈಗ ಬಂದ ಪುನರ್ವಸು ಮಳೆ ಪ್ರಸನ್ನವಾಗಿದ್ದು, ‘ಧೋ’ ಎಂದು ಸುರಿಯುತ್ತಿದೆ. ತಾಲ್ಲೂಕಿನ ಘಟ್ಟ ಮತ್ತು ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ.
ನಗರ ಹೋಬಳಿಯ ಸಾವೇಹಕ್ಕಲು, ಚಕ್ರಾ, ಮಾಣಿ ಜಲಾಶಯ ಸುತ್ತಮುತ್ತ ಮಳೆ ಅಧಿಕವಾಗಿದ್ದು, ಜಲಾಶಯಗಳ ಒಳಹರಿವು ಏರತೊಡಗಿದೆ. ಮಾಣಿ ಜಲಾಶಯಕ್ಕೆ 4,095 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಇಲ್ಲಿನ ಹುಲಿಕಲ್ ಮತ್ತು ನಾಗೋಡಿ ಘಾಟ್ ಪ್ರದೇಶದಲ್ಲಿ ಮಂಜುಮುಸುಕಿದ ವಾತಾವರಣವಿದ್ದು, ಮಳೆಯೂ ಜೋರಾಗಿದೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಅಲ್ಲಲ್ಲಿ ಧರೆ ಕುಸಿತಗಳು ಸಂಭವಿಸಿದ್ದು ರಸ್ತೆ ಇಕ್ಕೆಲಗಳ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ರಸ್ತೆ ಸಂಚಾರ ಕಷ್ಟಸಾಧ್ಯವಾಗಿದೆ.
ಮಳೆ ವಿವರ: ಹುಲಿಕಲ್ 13.8 ಸೆಂ.ಮೀ, ಮಾಣಿ 11.7 ಸೆಂ.ಮೀ, ಮಾಸ್ತಿಕಟ್ಟೆ 14.1 ಸೆಂ.ಮೀ, ಚಕ್ರಾ 14 ಸೆಂ.ಮೀ, ಸಾವೇಹಕ್ಕಲುನಲ್ಲಿ 10.8ಸೆಂ.ಮೀ ಮಳೆ ಆಗಿದೆ.
15 ದಿನಗಳಿಂದ ಮಳೆ ಇಲ್ಲದೆ ಪರಿತಪಿಸುತ್ತಿದ್ದ ರೈತರು ಇತ್ತೀಚಿನ ಮಳೆ ಸಂತಸ ತಂದಿದೆ. ಭತ್ತದನಾಟಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಮಳೆ ಹೆಚ್ಚಾಗಿದ್ದು ಅಡಿಕೆ ಮತ್ತು ಶುಂಠಿ ಬೆಳೆಗಾರರಿಗೆ ಆತಂಕ ತಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.