ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ

ಮೈದುಂಬಿದ ತುಂಗೆಗೆ ಬಾಗಿನ ಅರ್ಪಿಸಿದ ಶಾಸಕ ಕೆ.ಎಸ್.ಈಶ್ವರಪ್ಪ
Last Updated 7 ಜುಲೈ 2022, 4:49 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರವೂ ಮುಸಲಧಾರೆ ಮುಂದುವರಿದಿದೆ. ಹಗಲು–ರಾತ್ರಿಯ ವ್ಯತ್ಯಾಸವಿಲ್ಲದೇ ಹುಯ್ಯುತ್ತಿರುವ ಮಳೆಯಿಂದಾಗಿ ಮಲೆನಾಡು ಮುಸುಕುಹೊದ್ದು ಮಲಗಿದಂತೆ ತೋರುತ್ತಿದೆ. ಮಳೆ ನೀರಿನ ಮಜ್ಜನಕ್ಕೆ ನೆಲ ತೋಯ್ದು ತೊಪ್ಪೆಯಾಗಿದ್ದು, ಮಳೆಯ ಹಾಡಿಗೆ ಮೈ–ಮನ ಮುದಗೊಂಡಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 4.01 ಸೆ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 1.76 ಸೆಂ.ಮೀ, ಭದ್ರಾವತಿ 09 ಸೆಂ.ಮೀ, ತೀರ್ಥಹಳ್ಳಿ 6.13 ಸೆಂ.ಮೀ, ಸಾಗರ 7.23 ಸೆಂ.ಮೀ, ಶಿಕಾರಿಪುರ 2.10 ಸೆಂ.ಮೀ, ಸೊರಬ 4.50 ಸೆಂ.ಮೀ ಹಾಗೂ ಹೊಸನಗರ 5.37 ಸೆಂ.ಮೀ ಮಳೆಯಾಗಿದೆ.ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 76.49 ಸೆಂ.ಮೀ ಇದ್ದು, ಕಳೆದ ಆರು ದಿನಗಳಲ್ಲಿ 16.87 ಸೆಂ.ಮೀ ಮಳೆ ದಾಖಲಾಗಿದೆ.

ಕೊರತೆ ನೀಗುವತ್ತ ಮಳೆ: ಜುಲೈ 1ರಿಂದ 6ರವರೆಗೆ ಜಿಲ್ಲೆಯಾದ್ಯಂತ 23.4 ಸೆಂ.ಮೀ ಮಳೆ ಬಿದ್ದಿದೆ. ವಾಡಿಕೆ ಮಳೆ ಈ ಅವಧಿಯಲ್ಲಿ 15.27 ಸೆಂ.ಮೀ ಆಗಬೇಕಿತ್ತು. ಸರಾಸರಿ ಶೇ 53ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಇದು ಜೂನ್ ತಿಂಗಳಲ್ಲಿನ ವಾಡಿಕೆ ಮಳೆ ಕೊರತೆಯನ್ನು ನೀಗಿಸುವತ್ತ ದಾಪುಗಾಲು ಇಟ್ಟಿದೆ.

ಜುಲೈ ಮೊದಲ ವಾರ ಭದ್ರಾವತಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ 3.29 ಸೆಂ.ಮೀ ಆಗಬೇಕಿತ್ತು. ಆದರೆ 5.74 ಸೆಂ.ಮೀ ಆಗಿದೆ. ಶೇ 74ರಷ್ಟು ಹೆಚ್ಚು ಮಳೆ ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ 26.35 ಸೆಂ.ಮೀ ಮಳೆ ಬೀಳಬೇಕಿತ್ತು. ಅಲ್ಲಿ 28.87 ಸೆಂ.ಮೀ ಬಿದ್ದಿದ್ದು ಶೇ 10ರಷ್ಟು ಹೆಚ್ಚಾಗಿದೆ.

ಸಾಗರ ತಾಲ್ಲೂಕಿನಲ್ಲಿ 17.06 ಸೆಂ.ಮೀ ಆಗಬೇಕಿದ್ದು, 37.39 ಸೆಂ.ಮೀ. ಶೇ 119ರಷ್ಟು ಹೆಚ್ಚು ಮಳೆ ಆಗಿದೆ. ಶಿಕಾರಿಪುರ 5.69 ಸೆಂ.ಮೀ ಮಳೆ ಆಗಬೇಕಿದ್ದು, 7.53 ಸೆಂ.ಮೀ ಮಳೆ ಬಿದ್ದಿದೆ. ಶೇ 32 ರಷ್ಟು ಹೆಚ್ಚಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 3.68 ಸೆಂ.ಮೀ ಮಳೆ ಆಗಬೇಕಿದ್ದು, 8.03 ಸೆಂ.ಮೀ ಮಳೆ ದಾಖಲಾಗಿದೆ. ಶೇ 118ರಷ್ಟು ಹೆಚ್ಚು ಮಳೆ ಬಿದ್ದಿದೆ. ಸೊರಬ ತಾಲ್ಲೂಕಿನಲ್ಲಿ 10.78 ಸೆಂ.ಮೀ ವಾಡಿಕೆ ಮಳೆ ಇದ್ದು, 16.55 ಸೆಂ.ಮೀ ಆಗಿದೆ. ಶೇ 54ರಷ್ಟು ಹೆಚ್ಚು ಮಳೆಯಾಗಿದೆ. ಇನ್ನು ತೀರ್ಥಹಳ್ಳಿ ತಾಲ್ಲೂಕಿನಲ್ಲಿ 21.48 ಸೆಂ.ಮೀ ವಾಡಿಕೆ ಮಳೆ ಇದ್ದು, 30.27 ಸೆಂ.ಮೀ ಮಳೆ ಬಿದ್ದಿದೆ. ಶೇ 41ರಷ್ಟು ಹೆಚ್ಚು ಮಳೆ ಆಗಿದೆ.

***

‘ಮಳೆ ಸಮೃದ್ಧಿ ರಾಜ್ಯಕ್ಕೆ ಸಮೃದ್ಧಿ ತರಲಿ’

ರೈತರಿಗೆ ಸಂತಸವಾಗುವ ರೀತಿಯಲ್ಲಿ ಮಳೆ ಬರುತ್ತಿದೆ. ಅಲ್ಲಲ್ಲಿ ಮಳೆ ಜಾಸ್ತಿ ಕೂಡ ಆಗಿದೆ. ಇಡೀ ರಾಜ್ಯದ ಜನ ನೆಮ್ಮದಿ, ಸಂತೋಷದಿಂದ ಇರಲು ನಿನ್ನ ಸಹಕಾರ ಇರಲಿ ಅಮ್ಮ ಎಂಬ ಪ್ರಾರ್ಥನೆಯೊಂದಿಗೆ ತುಂಗೆಗೆ ಬಾಗಿನ ಅರ್ಪಿಸಿದ್ದೇವೆ. ನಗರಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದಾಗಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಳೆಗಾಲದಲ್ಲಿ ಕಳೆದ ಬಾರಿ ಆಗಿದ್ದ ಅನುಭವದಿಂದ ಎಲ್ಲೆಲ್ಲಿ ಏನೇನು ಮಾಡಬೇಕು ಎಂದು ಜಿಲ್ಲಾಡಳಿತ ಸಜ್ಜಾಗಿದೆ. ತೊಂದರೆ ಜಾಸ್ತಿ ಆದರೆ ಪರಿಹಾರಕ್ಕೆ ಅಗತ್ಯವಿರುವಷ್ಟು ಹಣ ಎಲ್ಲ ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರ್ಕಾರ ಕೊಟ್ಟಿದೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಜಯಲಕ್ಷ್ಮಿ ಈಶ್ವರಪ್ಪ, ಕೆ.ಇ. ಕಾಂತೇಶ್, ಸಂತೋಷ್ ಬಳ್ಳೆಕೆರೆ, ಇ. ವಿಶ್ವಾಸ್, ಉಪಮೇಯರ್ ಶಂಕರ್ ಗನ್ನಿ ಇದ್ದರು.

***

ಹಾನಿಗೀಡಾದ ಮನೆ ಪರಿಶೀಲಿಸಿದ ಸಂತೋಷ್ ಗುರೂಜಿ

ಶಿವಮೊಗ್ಗದ ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿ ಮಳೆಗೆ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆಯ ಮೇಲೆ ತೆಂಗಿನಮರ ಬಿದ್ದು, ಸಂಪೂರ್ಣ ಹಾನಿಗೀಡಾಗಿತ್ತು. ಇದನ್ನು ತಿಳಿದ ಬಾರ್ಕೂರು ಸಂಸ್ಥಾನ ಪೀಠದ ಸಂತೋಷ್ ಗುರೂಜಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಇಂದ್ರಮ್ಮ ಅವರಿಗೆ ಸಾಂತ್ವನ ಹೇಳಿ, ಸುಸಜ್ಜಿತ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ಇಂದ್ರಮ್ಮ ಪತಿ ನಿಧನರಾಗಿದ್ದು, ನಾಲ್ವರು ಹೆಣ್ಣಮಕ್ಕಳು ಮದುವೆಯಾಗಿದ್ದಾರೆ. ಮಗ ಇತ್ತೀಚೆಗೆ ನಿಧನರಾಗಿದ್ದಾರೆ. ಈ ಬಗ್ಗೆ ವಿವರ ಪಡೆದ ಸಂತೋಷ್ ಗುರೂಜಿ ತಮ್ಮ ವಿದ್ವತ್ ಟ್ರಸ್ಟ್ ಮೂಲಕ ಮನೆ ಕಟ್ಟಿಕೊಡುವುದಾಗಿ ಹೇಳಿದರು. ಮಳೆ ಹಾನಿಗೀಡಾದವರಿಗೆ ಸರ್ಕಾರದ ಪರಿಹಾರ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಂತಹ ಸಂದರ್ಭದಲ್ಲಿ ನಿರಾಶ್ರಿತರಿಗೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕು ಎಂದರು.

ಈ ಕುಟುಂಬಕ್ಕೆ ಸಹಾಯ ಮಾಡಬಯಸುವವರು ತಮ್ಮ ಟ್ರಸ್ಟ್‌ನ ಬ್ಯಾಂಕ್ ಖಾತೆ ಸಂಖ್ಯೆ 9142500101670101, ಐಎಫ್‌ಎಸ್ಸಿ ಕೋಡ್ ಕೆ.ಎ.ಆರ್.ಬಿ. 0000914, ಕರ್ಣಾಟಕ ಬ್ಯಾಂಕ್, ಹೆರೋಹಳ್ಳಿ ಶಾಖೆ, ಬೆಂಗಳೂರು ಇಲ್ಲಿಗೆ ಕಳಿಸಬೇಕೆಂದು ಕೋರಿದರು. ಮೊದಲ ದೇಣಿಗೆಯಾಗಿ ಸ್ಥಳದಲ್ಲಿದ್ದ ಸೈಯದ್ ಖುದ್ದೂಸ್ ಎಂಬುವವರು ₹500 ನೀಡಿದರು.

***

3 ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಕೆ

ಶಿವಮೊಗ್ಗ: ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 7 ರಂದು ಗುರುವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT