ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮಾಪನ: ಬದಲಾವಣೆ ಅಗತ್ಯ

ಶಾಸಕ ಎಚ್. ಹಾಲಪ್ಪ ಹರತಾಳು ಅಭಿಮತ
Last Updated 19 ಸೆಪ್ಟೆಂಬರ್ 2021, 4:46 IST
ಅಕ್ಷರ ಗಾತ್ರ

ಸಾಗರ: ಈಗಿರುವ ಮಳೆ ಮಾಪನ ಪದ್ಧತಿಯಿಂದ ಮಳೆಯ ಪ್ರಮಾಣದ ನಿಖರತೆ ಅಳೆಯಲು ಸಾಧ್ಯವಾಗುತ್ತಿಲ್ಲ. ಈ ಪದ್ಧತಿಯಲ್ಲಿ ಬದಲಾವಣೆ ತರಬೇಕಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧಿ ಮೈದಾನದಲ್ಲಿ ನಗರಸಭೆಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಗರವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು.

ಈ ವರ್ಷದ ಮಳೆಗಾಲದಲ್ಲಿ 15 ದಿನದಲ್ಲಿ ಆಗಬೇಕಾದ ಮಳೆ ಒಂದೆರಡು ದಿನಗಳಲ್ಲಿ ಸುರಿದಿದೆ. ಇದರಿಂದ ಅನೇಕ ಅನಾಹುತಗಳು ಸಂಭವಿಸಿವೆ. ಆದರೆ ಈಗಿನ ಮಳೆ ಅಳೆಯುವ ಪದ್ಧತಿಯಲ್ಲಿ ಒಟ್ಟು ಮಳೆಯ ವಾಡಿಕೆ ಪ್ರಮಾಣವನ್ನು ಮಾತ್ರ ಗುರುತಿಸಿ ವರದಿ ನೀಡುವುದರಿಂದ ಯಾವ ಪ್ರದೇಶದಲ್ಲಿ, ಯಾವ ಅವಧಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎನ್ನುವ ಕುರಿತು ನಿಖರ ವರದಿ ದೊರಕುತ್ತಿಲ್ಲ. ಈ ಕಾರಣಕ್ಕೆ ಪರಿಹಾರ ವಿತರಿಸುವಲ್ಲಿ ತೊಡಕು ಉಂಟಾಗುತ್ತಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ ನಷ್ಟ ಅನುಭವಿಸಿದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ವಿತರಿಸಲಾಗುವುದು. ಆದರೆ ಆ ಪರಿಹಾರ ದೊರಕುವುದಕ್ಕೆ ಸಾಕಷ್ಟು ಸಮಯ ಹಿಡಿಯುವುದರಿಂದ ತಾತ್ಕಾಲಿಕವಾಗಿ ಸ್ಥಳೀಯ ಸಂಸ್ಥೆಯಿಂದ ನೊಂದವರಿಗೆ ನೆರವು ನೀಡಲು ಅಲ್ಪ ಪ್ರಮಾಣದಲ್ಲಿ ಆರ್ಥಿಕ ಸಹಾಯಧನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ನಗರವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ಹಾಗೂ ಭಾಗಶಃ ಮನೆಗಳಿಗೆ ಹಾನಿ ಉಂಟಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ಒದಗಿಸುವ ಸಂಬಂಧ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ 56 ಕುಟುಂಬಗಳಿಗೆ ನಗರಸಭೆಯಿಂದ ತಾತ್ಕಾಲಿಕವಾಗಿ ಪರಿಹಾರ ನೀಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮನೆಗಳಿಗೆ ಹಾನಿ ಉಂಟಾದಲ್ಲಿ ₹ 10 ಸಾವಿರ, ಭಾಗಶಃ ಹಾನಿ ಉಂಟಾದಲ್ಲಿ ₹ 5 ಸಾವಿರ ಮೊತ್ತದ ಚೆಕ್ ವಿತರಿಸಲಾಗುತ್ತಿದೆ. ಇದು ಅಲ್ಪ ಮೊತ್ತದ ಪರಿಹಾರವಾದರೂ ನೊಂದವರ ಜೊತೆಗೆ ಸ್ಥಳೀಯ ಆಡಳಿತ ಇದೆ ಎನ್ನುವ ಭರವಸೆ ನೀಡಲು ಪರಿಹಾರ ವಿತರಿಸಲಾಗುತ್ತಿದೆ’ ಎಂದರು.

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಸದಸ್ಯರಾದ ಕೆ.ಆರ್. ಗಣೇಶ್ ಪ್ರಸಾದ್, ಆರ್. ಶ್ರೀನಿವಾಸ್, ಎನ್. ಲಲಿತಮ್ಮ, ಮೈತ್ರಿ ಪಾಟೀಲ್, ಪ್ರೇಮಾ ಕಿರಣ್ ಸಿಂಗ್, ಶ್ರೀರಾಮ್, ಶಂಕರ್ ಅಳ್ವೆಕೋಡಿ, ಅರವಿಂದ ರಾಯ್ಕರ್, ರಾಜೇಂದ್ರ ಪೈ, ಸತೀಶ್ ಮೊಗವೀರ, ಪೌರಾಯುಕ್ತ ಎಚ್.ಕೆ. ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT