ಸೋಮವಾರ, ಸೆಪ್ಟೆಂಬರ್ 27, 2021
21 °C
ಸಾಗರದಲ್ಲಿ ಮುಂದುವರಿದ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

ಒಡೆದ ಕೆರೆ, ಕಾಲುವೆ ದಂಡೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಗದ್ದೆ, ತೋಟ, ಮನೆಗಳಿಗೆ ನೀರು ನುಗ್ಗಿದೆ. ಅನೇಕ ಕಡೆ ಕೆರೆ, ಕಾಲುವೆ ದಂಡೆಗಳು ಒಡೆದಿವೆ. ರಸ್ತೆ, ಸೇತುವೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಜುಲೈ 22ರ ಬೆಳಿಗ್ಗೆ 8.30ರಿಂದ ಜುಲೈ 23ರ ಬೆಳಿಗ್ಗೆ 8.30ರವರೆಗೆ ತಾಲ್ಲೂಕಿನಲ್ಲಿ ವಾಡಿಕೆಯಂತೆ 26.1 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಅವಧಿಯಲ್ಲಿ 17.33 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ 564ರಷ್ಟು ಅಧಿಕ ಪ್ರಮಾಣದ ಮಳೆ ಬಿದ್ದಿದೆ.

ಜುಲೈ 21ರ ಬೆಳಿಗ್ಗೆ 8.30ರಿಂದ 22ರ ಬೆಳಿಗ್ಗೆ 8.30ರವರೆಗೆ ವಾಡಿಕೆಯಂತೆ 26.1 ಮಿ.ಮೀ. ಮಳೆಯಾಗಬೇಕಿದ್ದು, 71.1 ಮೀ.ಮಿ. ಮಳೆಯಾಗಿದೆ. ಇದು ಈ ಅವಧಿಯಲ್ಲಿ ವಾಡಿಕೆಗಿಂತ ಆಗಿರುವ ಶೇ 172ರಷ್ಟು ಹೆಚ್ಚಿನ ಮಳೆ ಆಗಿದೆ.

ನಗರದ ಈ ಹಿಂದಿನ ಸರ್ಕಾರಿ ಸ್ವತಂತ್ರ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಈ ಕಚೇರಿ ಆವರಣದೊಳಗೆ ನೀರು ನುಗ್ಗಿದ ಕಾರಣ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ನೀರನ್ನು ಹೊರಹಾಕಲಾಯಿತು.

ನಗರವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂನಿಂದ ನೀರು ಉಕ್ಕಿ ಹರಿಯುತ್ತಿದೆ. ಶ್ರೀರಾಂಪುರ ಬಡಾವಣೆಯ ಭದ್ರಕಾಳಿ ಸಭಾಭವನದ ಸಮೀಪವಿರುವ ಮನೆಗಳಿಗೆ, ವಿವೇಕ ನಗರದ ಮನೆಗಳಿಗೆ, ನೀರ್ಕೋಡು ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಆ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಈ ಭಾಗದಿಂದ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಗೌರಿಕೆರೆ ದಂಡೆಯ ಮೇಲಿನ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದ್ದು, ಸಮೀಪದ ಮನೆಗಳಿಗೆ ನೀರು ನುಗ್ಗಿದೆ. ತಾಳಗುಪ್ಪ, ಯಡಜಿಗಳಮನೆ, ಆವಿನಹಳ್ಳಿ, ತುಮರಿ, ಬ್ಯಾಕೋಡು, ನಾಡಕಲಸಿ ಸೇರಿದಂತೆ ಹಲವು ಭಾಗಗಳಲ್ಲಿ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.

ತಾಳಗುಪ್ಪ ಹೋಬಳಿಯಲ್ಲಿ 1,250 ಹೆಕ್ಟೇರ್, ಆನಂದಪುರಂ ಹೋಬಳಿಯಲ್ಲಿ 300 ಹೆಕ್ಟೇರ್, ಕಸಬಾ ಹೋಬಳಿಯಲ್ಲಿ 150 ಹೆಕ್ಟೇರ್, ಆವಿನಹಳ್ಳಿ ಹೋಬಳಿಯಲ್ಲಿ 20 ಹೆಕ್ಟೇರ್ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.