ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ತುಂಗಾ, ಭದ್ರಾ

ತುಂಗಾ ಜಲಾಶಯದಿಂದ 44 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
Last Updated 6 ಜುಲೈ 2022, 3:59 IST
ಅಕ್ಷರ ಗಾತ್ರ

ಶಿವಮೊಗ್ಗ:ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟೂಬಿಡದೆ ಆರಿದ್ರಾ ಮಳೆ ಆರ್ಭಟಿಸುತ್ತಿದೆ. ಮಳೆ ಅಬ್ಬರದ ಪರಿಣಾಮ ತುಂಗಾ, ಭದ್ರಾ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಸೋಮವಾರ ರಾತ್ರಿಯಿಂದ ಜಲಾಶಯದ 18 ಗೇಟ್‌ಗಳ ಮೂಲಕ 44 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿದೆ.

ಲಿಂಗನಮಕ್ಕಿ, ಭದ್ರಾ, ಮಾಣಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೇರಿದೆ. ನಗರದ ಕೋರ್ಪಲಯ್ಯನ ಛತ್ರದ ಬಳಿ ಇರುವ ಕಲ್ಲಿನ ಮಂಟಪ ಮುಳುಗಡೆಯಾಗಿದೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, 1762.10 ಅಡಿಯಷ್ಟು ನೀರು ಸಂಗ್ರಹವಿದೆ. 39,262 ಕ್ಯುಸೆಕ್ ಒಳಹರಿವು ಇದ್ದು, 903.96 ಕ್ಯುಸೆಕ್ ಹೊರ ಹರಿವು ಇದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಇಂದು 156.6 ಅಡಿ ನೀರಿದೆ. 30167 ಕ್ಯುಸೆಕ್ ಒಳಹರಿವು ಇದ್ದು, 133 ಕ್ಯುಸೆಕ್ ನೀರು ಹೊರ ಬಿಡಲಾಗಿದೆ.

ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕೃಷಿ ಚಟುವಟಿಕೆ ಕೂಡ ಬಿರುಸು ಪಡೆದುಕೊಂಡಿವೆ.

ತುಂಗೆಗೆ ಬಾಗಿನ ಅರ್ಪಣೆ ಇಂದು: ತುಂಗಾ ನದಿ ಮೈದುಂಬಿರುವ ಕಾರಣ ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಾಸಕ ಕೆ.ಎಸ್.ಈಶ್ವರಪ್ಪ ನದಿಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ.

***

ಮಳೆ ಹಾನಿ: ತಕ್ಷಣ ಪರಿಹಾರ ಬಿಡುಗಡೆ ಆಗ್ರಹ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆಯಿಂದಾಗಿ ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಗೌರವಾಧ್ಯಕ್ಷ ಎಂ.ಎಸ್.ಸಿದ್ದಪ್ಪ ಆಗ್ರಹಿಸಿದ್ದಾರೆ.

ಮಳೆಯಿಂದ ನಗರದ 35 ವಾರ್ಡ್ ಗಳ ಕೊಳಚೆ ಪ್ರದೇಶಗಳು ಜಲಾವೃತಗೊಂಡು ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದು, ಅಗತ್ಯ ವಸ್ತುಗಳು ಸೇರಿದಂತೆ ಮನೆಗಳ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ ಎಂದರು.

ಮಳೆಯಿಂದ ಹಾನಿಗೊಳಗಾದವರಿಗೆ ಕೂಡಲೇ 24 ಗಂಟೆಯೊಳಗೆ ಪರಿಹಾರ ನೀಡಲು ರಾಜ್ಯ ಸರ್ಕಾರದ ಆದೇಶವಾಗಿದ್ದರೂ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಚಾರಿಸಿದರೆ, ಜಿಲ್ಲಾಡಳಿತದಿಂದ ಇದುವರೆಗೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಎಂದು ತಿಳಿಸಿದರು.

***

3 ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ

ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 6 ರಂದು ಬುಧವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT