ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನ, ಐದು ಅಡಿ ನೀರು !

ಭದ್ರಾ ಜಲಾಶಯ: ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹ
Last Updated 7 ಜುಲೈ 2022, 4:56 IST
ಅಕ್ಷರ ಗಾತ್ರ

ಶಿವಮೊಗ್ಗ: ಜೂನ್‌ನಲ್ಲಿ ಮಳೆ ಕೊರತೆಯಿಂದ ಭದ್ರಾ ಜಲಾಶಯಕ್ಕೆ ವಾಡಿಕೆಯಷ್ಟು ನೀರು ಬರಲಿಲ್ಲ ಎಂಬ ಅಚ್ಚುಕಟ್ಟು ಪ್ರದೇಶದ ರೈತರ ಕೊರಗು ಕೊನೆಗೂ ನಿವಾರಣೆ ಆಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕೇವಲ ಮೂರು ದಿನಗಳಲ್ಲಿ ಐದು ಅಡಿಯಷ್ಟು ಹೆಚ್ಚಳಗೊಂಡಿದೆ. ವಿಶೇಷವೆಂದರೆ ಕಳೆದ ವರ್ಷ ಇದೇ ದಿನ (ಜುಲೈ 6) ಜಲಾಶಯದಲ್ಲಿ ನೀರಿನ ಮಟ್ಟ 155.34 ಅಡಿ ಇತ್ತು. ಈ ವರ್ಷ ಅದು 160.11 ಅಡಿಗೆ ಹೆಚ್ಚಳವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಹೀಗಾಗಿ, ಜಲಾಶಯಕ್ಕೆ ಕಳೆದ ಮೂರು ದಿನಗಳಲ್ಲಿ 69,526 ಕ್ಯುಸೆಕ್ ನೀರು ಹರಿದುಬಂದಿದೆ. ಜುಲೈ 4ರಂದು ಜಲಾಶಯದಲ್ಲಿ 155.7 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಅಂದು 13,405 ಕ್ಯುಸೆಕ್ ನೀರು ಹರಿದುಬಂದಿತ್ತು. ಜುಲೈ 5ರಂದು 30,167 ಕ್ಯುಸೆಕ್ ಒಳಹರಿವು ಇದ್ದು, ಮರು ದಿನ 26,004 ಟಿಎಂಸಿ ಅಡಿಗೆ ಒಳಹರಿವು ಇಳಿದಿದೆ. ನೀರಿನ ಸಂಗ್ರಹ ಮಾತ್ರ ಹೆಚ್ಚಳಗೊಂಡಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಕೊಪ್ಪ, ಮೇಗದ್ದೆ, ಹರಿಹರಪುರ ಹೋಬಳಿಗಳನ್ನು ಒಳಗೊಂಡ ಕೊಪ್ಪ ತಾಲ್ಲೂಕಿನಲ್ಲಿ ಕಳೆದ ಆರು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಜುಲೈ 1ರಿಂದ 6ರವರೆಗೆ ವಾಡಿಕೆ ಮಳೆ 18.77 ಸೆಂ.ಮೀ ಆಗಬೇಕಿತ್ತು. ಅಲ್ಲಿ 44.51 ಸೆಂ.ಮೀ ಮಳೆ ಬಿದ್ದಿದೆ. ಶೇ 137ರಷ್ಟು ಹೆಚ್ಚು ಮಳೆ ಆಗಿದೆ.

ನರಸಿಂಹರಾಜಪುರ ಹಾಗೂ ಬಾಳೆಹೊನ್ನೂರು ಹೋಬಳಿ ಒಳಗೊಂಡ ನರಸಿಂಹರಾಜಪುರ ತಾಲ್ಲೂಕಿನಲ್ಲಿ 10.4 ಸೆಂ.ಮೀ ಮಳೆ ಆಗಬೇಕಿತ್ತು. ಅಲ್ಲಿ 16.22 ಸೆಂ.ಮೀ ಮಳೆ ಬಿದ್ದಿದೆ. ಶೇ 62ರಷ್ಟು ಹೆಚ್ಚು ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

***

ರೈತರ ಕೇಳಿ ನೀರು ಹರಿಸುವೆ: ಪವಿತ್ರಾ ರಾಮಯ್ಯ

‘ದೇವರು ನಮ್ಮ ಜೊತೆ ಇದ್ದಾನೆ. ಹೀಗಾಗಿ ಮಳೆ ಚೆನ್ನಾಗಿ ಬಂದು ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ ಎಂದುಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ ವ್ಯಕ್ತಪಡಿಸಿದರು.

‘ಅಚ್ಚುಕಟ್ಟು ಪ್ರದೇಶದಲ್ಲಿ ಈಗ ಮಳೆ ನೀರಿನಲ್ಲಿಯೇ ರೈತರು ಭತ್ತಕ್ಕೆ ಸಸಿಮಡಿ ಮಾಡಬಹುದು. ಹೀಗಾಗಿ ಕಾಲುವೆಗೆ ಅನಗತ್ಯವಾಗಿ ನೀರು ಹರಿಸುವುದು ಬೇಡ. ಬೇಸಿಗೆಯಲ್ಲಿ ತೋಟಗಳಿಗೂ ನೀರು ಬೇಕಿರುವುದರಿಂದ ಈಗ ಅವಶ್ಯಕತೆ ಇದ್ದರೆ ಮಾತ್ರ ಕಾಲುವೆಗೆ ನೀರು ಬಿಡುಗಡೆ ಮಾಡುತ್ತೇವೆ. ಜಲಾಶಯದಲ್ಲಿ ನೀರು ಇದ್ದಲ್ಲಿ ಮುಂದೆ ಮಳೆಯ ಕೊರತೆ ಆದರೂ ಸಮಸ್ಯೆ ಆಗುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ರೈತರನ್ನು ಕೇಳಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

***

ಇನ್ನೂ ಐದು ದಿನ ಭಾರೀ ಮಳೆ

ಜುಲೈ 7ರಿಂದ 11ರವರೆಗೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯ ಜೊತೆಗೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜುಲೈ 7 ಹಾಗೂ 8ರಂದು ಶಿವಮೊಗ್ಗ ಜಿಲ್ಲೆಯಲ್ಲಿ ನಿತ್ಯ ಸರಾಸರಿ 11.55 ಸೆಂ.ಮೀ.ನಿಂದ 20.44 ಸೆಂ.ಮೀ ಹಾಗೂ ಜುಲೈ 9ರಿಂದ 11ರವರೆಗೆ ಮೂರು ದಿನ ಕಾಲ ನಿತ್ಯ 6.45 ಸೆಂ.ಮೀ.ನಿಂದ 11.55 ಸೆಂ.ಮೀ.ವರೆಗೆ ಮಳೆ ಸುರಿಯಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT