ಗುರುವಾರ , ಮಾರ್ಚ್ 30, 2023
22 °C

ಹಸೆ ಚಿತ್ತಾರ ಕಲಾವಿದೆ ಗೌರಮ್ಮಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇಲ್ಲಿನ ಹಸೆ ಚಿತ್ತಾರ ಕಲಾವಿದೆ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರಿಗೆ ಜಾನಪದ ವಿಭಾಗದಲ್ಲಿ ರಾಜ್ಯ ಸರ್ಕಾರ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾನಪದ ವಿದ್ವಾಂಸ ದಿ. ಹುಚ್ಚಪ್ಪ ಮಾಸ್ತರ್ ಅವರ ಪತ್ನಿಯಾಗಿರುವ ಗೌರಮ್ಮ ಹಸೆ ಚಿತ್ತಾರ ಕಲೆಯಲ್ಲಿ ಹೆಸರು ಮಾಡಿರುವ ಕಲಾವಿದೆ.

ತಾಲ್ಲೂಕಿನ ಕಾನ್ಲೆ-ಪಡವಗೋಡು ಗ್ರಾಮದವರಾದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರನ್ನು ವಿವಾಹವಾದ ನಂತರ ಕುಗ್ವೆ, ಸಾಗರ ಮೊದಲಾದೆಡೆ ವಾಸವಾಗಿದ್ದು, ಸದ್ಯ ಸಾಗರದ ಮಂಕಳಲೆ ರಸ್ತೆಯಲ್ಲಿ ಇದ್ದಾರೆ.

ಬಾಲ್ಯದಿಂದಲೂ ಜಾನಪದ ಹಾಡು-ಹಸೆಯಲ್ಲಿ ಆಸಕ್ತಿ ಹೊಂದಿದ್ದ ಗೌರಮ್ಮ ಅವರು ತಮ್ಮ ಮದುವೆಯ ನಂತರವೂ ಈ ಹವ್ಯಾಸವನ್ನು ಮುಂದು
ವರಿಸಿಕೊಂಡು ಬಂದಿದ್ದರು. ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಭೂಮಣ್ಣಿ ಬುಟ್ಟಿಯ ಮೇಲೆ ಹಸೆ ಚಿತ್ತಾರ ಬಿಡಿಸುವುದರಿಂದ ಹಿಡಿದು ನಾಡಿನ ವಿವಿಧೆಡೆ ನಡೆದಿರುವ ಜಾನಪದ ಕಲಾ ಪ್ರದರ್ಶನಗಳಲ್ಲಿ ಹಸೆ ಚಿತ್ತಾರ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಲೆನಾಡಿನ ಹಳ್ಳಿಗಳಿಗೆ ಸೀಮಿತವಾಗಿದ್ದ ಹಸೆ ಚಿತ್ತಾರ ಕಲೆಯನ್ನು ದೊಡ್ಡ ದೊಡ್ಡ ನಗರಗಳಿಗೆ ಪರಿಚಯಿಸಿದ ಶ್ರೇಯಸ್ಸು ಗೌರಮ್ಮ ಅವರಿಗೆ ಸಲ್ಲುತ್ತದೆ. ಈ ಕಾರಣ ಇಂದು ಹಸೆ ಚಿತ್ತಾರ ಕಲೆ ನಗರ ಪ್ರದೇಶದ ಹಲವು ಪ್ರತಿಷ್ಠಿತ ಭವನ, ಪಂಚತಾರಾ ಹೋಟೆಲ್‌ಗಳ ಗೋಡೆಗಳಿಗೂ ಪ್ರವೇಶ ಕೊಟ್ಟಿದೆ.

500ಕ್ಕೂ ಹೆಚ್ಚು ಹಸೆ ಮತ್ತು ಬುಟ್ಟಿ ಚಿತ್ತಾರ ಬರೆದಿರುವ ಗೌರಮ್ಮ ಅವರು ಒಂದು ರೀತಿಯಲ್ಲಿ ಜಾನಪದ ಕಣಜದಂತಿದ್ದಾರೆ. ಮಲೆನಾಡಿನ ದೀವರ ಸಂಸ್ಕೃತಿಯ ಕುರಿತು ಅಪಾರ ಮಾಹಿತಿ ಹೊಂದಿರುವ ಅವರು ದೀವರ ಸಮುದಾಯದಲ್ಲಿರುವ ಗಾದೆಗಳನ್ನು ಹುಚ್ಚಪ್ಪ ಮಾಸ್ತರರು ಸಂಗ್ರಹಿಸುವಲ್ಲಿ ಸಾಥ್ ನೀಡಿದ್ದಾರೆ.

ಗೌರಮ್ಮ ಈ ನೆಲದ ಸೊಗಡನ್ನು ಬಿಂಬಿಸುವ ಜಾನಪದ ಗೀತೆಗಳ ಗಾಯನದಲ್ಲೂ ಹೆಸರು ಮಾಡಿದ್ದಾರೆ. ಹಸೆ ಚಿತ್ತಾರ ಕಲೆಯಲ್ಲಿ ಆಸಕ್ತಿ ಇರುವ ಹಲವು ಯುವಕ, ಯುವತಿಯರಿಗೆ ತರಬೇತಿ, ಮಾರ್ಗದರ್ಶನ ನೀಡಿ ಅವರು ಈ ಕಲೆಯ ಮೂಲಕವೇ ತಮ್ಮ ಬದುಕು ಕಟ್ಟಿಕೊಳ್ಳಲು ಗೌರಮ್ಮ ನೆರವಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 1991ನೇ ಸಾಲಿನಲ್ಲಿ ಅವರ ಪತಿ ಹುಚ್ಚಪ್ಪ ಮಾಸ್ತರ್‌ ಅವರನ್ನೂ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು.

ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಆದರೆ ವಿಷಯ ತಿಳಿದು ತುಂಬಾ ಸಂತೋಷವಾಗಿದೆ. ನನ್ನ 12 ನೇ ವಯಸ್ಸಿನಿಂದಲೇ ಹಾಡು, ಹಸೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ನನ್ನಿಂದ ಹಸೆ ಚಿತ್ತಾರ ಕಲಿತವರಿಗೆ ಈ ಹಿಂದೆ ಪ್ರಶಸ್ತಿ ಬಂದಿತ್ತು. ಈಗ ನನಗೆ ಪ್ರಶಸ್ತಿ ಸಂದಿರುವುದು ಸಂತೃಪ್ತಿಯ ಮನೋಭಾವ ಮೂಡಿಸಿದೆ. ಹಸೆ ಚಿತ್ತಾರ ಕಲೆಯಲ್ಲಿ ಹೆಸರು ಮಾಡಿರುವ ಕಲಾವಿದೆ.
ಗೌರಮ್ಮ ಹುಚ್ಚಪ್ಪ ಮಾಸ್ತರ್, ಹಸೆ ಚಿತ್ತಾರ ಕಲಾವಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು