ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರ ದೇವರ ವೈಭವದ ತೆಪ್ಪೋತ್ಸವ

ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಸಿಡಿಸಿದ ಸಿಡಿಮದ್ದು; ಕತ್ತಲ ಮುಗಿಲಿಗೆ ಬೆಳಕಿನ ಸಿಂಚನ
Last Updated 26 ಡಿಸೆಂಬರ್ 2022, 4:54 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಎಲ್ಲೆಲ್ಲೂ ಕೇಕೆ, ಸಂತೋಷ, ಜಾತ್ರೆಯ ಆಟಿಕೆ ಗುನುಗುವ ಸದ್ದು. ಹರಿವ ನದಿಯ ಜುಳುಜುಳು ನಾದದ ಮಧ್ಯೆ ಕುಳಿತ ಜನರ ಮುಖಗಳು ಬೆಳಕಿನ ಕಿರಣಗಳ ಸಿಂಚನದಿಂದ ಹೊಳೆಯುತ್ತಿತ್ತು.

ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರವಾಯಿತು. ತೆಪ್ಪೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ತುಂಗಾ ನದಿಯ ದಂಡೆಯ ಮೇಲಿನಿಂದ ₹ 5 ಲಕ್ಷ ಮೌಲ್ಯದ ಸಿಡಿಮದ್ದುಗಳು ವರ್ಣ ರಂಜಿತವಾಗಿ ಮುಗಿಲಿಗೆ ಅಪ್ಪಳಿಸುತ್ತಿದ್ದವು.

ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿದ್ದ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಮೂರು ಸುತ್ತು ತುಂಗಾನದಿಯಲ್ಲಿ ತಿರುಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಡಿಮದ್ದುಗಳ ಪರಿಣಿತರ ತಂಡ ಬಣ್ಣದ ಲೋಕ ಸೃಷ್ಟಿಸಿತ್ತು. ನದಿಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳು ತೇಲಿದವು. ಮತ್ತೊಂದು ಕಡೆಯಿಂದ ಆಕಾಶ ದೀಪಗಳು ನದಿಯಿಂದ ಗಗನವನ್ನು ಚುಂಬಿಸಿ ನೆರೆದವರ ಮನ ಸೆಳೆಯಿತು. ಪ್ರಸಿದ್ಧ ಕುರುವಳ್ಳಿಯ ಕಮಾನು ಸೇತುವೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು.

ಸಿಡಿಮದ್ದು ಪ್ರದರ್ಶನವನ್ನು ನೋಡಲು ಆಗಮಿಸಿದ ಜನರಿಗೆ ತುಂಗಾನದಿ ದಡದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಹಿತಕರ ಘಟನೆ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಪ್ಪೋತ್ಸವ ಸಮಿತಿ, ಪೊಲೀಸ್ ಇಲಾಖೆ ಕೈಗೊಂಡಿತ್ತು.

ಹೆದರಿದ ಜಲಚರ, ಬಾನಾಡಿಗಳು

ಆಳ ನದಿಯಲ್ಲಿ 50 ಕೆ.ಜಿ.ಗೂ ಹೆಚ್ಚು ತೂಕದ ದೊಡ್ಡ ಮೀನುಗಳ ರಾಶಿ ಇದೆ. ಈಗ ತಾನೆ ಜನಿಸಿದ ಪುಟಾಣಿ ಮೀನುಗಳ ರಾಶಿ ಇದೆ. ಇವುಗಳನ್ನು ಆಹಾರವಾಗಿ ಆಶ್ರಯಿಸಿದ ಬಾನಾಡಿಗಳ ಸಂತತಿ ನದಿಪಾತ್ರದಲ್ಲಿ ಹೆಚ್ಚು ವಾಸಿಸುತ್ತವೆ. ದೈನಂದಿನ ಚಟುವಟಿಕೆಯಿಂದ ಆಶ್ರಯ ಪಡೆದಿದ್ದ ಜೀವಿಗಳು ಬಾರಿ ಸದ್ದುಗಳಿಂದ ಕಂಗಾಲಾಗಿ ದಿಕ್ಕಪಾಲಾಗಿ ಓಡಿದ್ದವು. ಕಲ್ಲು ಬಂಡೆಯ ಮೇಲೆ ಸಿಡಿಯುತ್ತಿದ್ದ ಸಿಡಿಮದ್ದುಗಳು ಭೂಮಿಯನ್ನೇ ಅಲ್ಲಾಡಿಸಿದ ಅನುಭವ ಉಂಟು ಮಾಡಿತ್ತು.

ಕುರುವಳ್ಳಿಯ ಕಾಮಾನು ಸೇತುವೆಗೆ 1941ರಲ್ಲಿ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಶಿಲಾನ್ಯಾಸ ಮಾಡಿದ್ದಾರೆ. 80 ವರ್ಷದ ಈ ಸೇತುವೆ ಭಾರಿ ವಾಹನಗಳ ಸಂಚಾರದಿಂದಾಗಿ ಈಗಾಗಲೇ ಅಪಾಯದಲ್ಲಿದೆ. ಇದರ ನಡುವೆ ದೊಡ್ಡಗಾತ್ರದ ಸಿಡಿಮದ್ದುಗಳು ಸೇತುವೆಗೆ ಮತ್ತಷ್ಟು ಅಪಾಯ ತರುವ ಸಂಭವ ಇದೆ ಎಂಬ ಅಪಸ್ವರ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT