ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಹೂವಿನ ತಾತ್ಕಾಲಿಕ ಮಾರುಕಟ್ಟೆಗೆ ಸೌಲಭ್ಯ ಕಲ್ಪಿಸಲು ಆಗ್ರಹ

Last Updated 8 ಏಪ್ರಿಲ್ 2021, 13:15 IST
ಅಕ್ಷರ ಗಾತ್ರ

ಶಿವಮೊಗ್ಗ: ಖಾಸಗಿ ಬಸ್‌ನಿಲ್ದಾಣದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆಗ್ರಹಿಸಿದರು.

ಕಾಂಗ್ರೆಸ್‌ ಸದಸ್ಯರ ಜತೆ ಗುರುವಾರ ಮಾರುಕಟ್ಟೆಗೆ ಭೇಟಿ ನೀಡಿ, ಅಹವಾಲು ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ವ್ಯಾಪಾರದ ಸ್ಥಳದಲ್ಲಿ ಮೂಲಸೌಕರ್ಯ ಕೊರತೆ ಇದೆ. ಶಿವಪ್ಪ ನಾಯಕ ವೃತ್ತದಲ್ಲಿದ್ದ ಹೂವಿನ ಮಾರುಕಟ್ಟೆ ಜಾಗದಲ್ಲಿ ಬಹು ಮಹಡಿ ವಾಹನ ತಂಗುದಾಣ ನಿರ್ಮಾಣವಾಗುತ್ತಿರುವ ಕಾರಣ ನಗರ ಪಾಲಿಕೆ ತಾತ್ಕಾಲಿಕವಾಗಿ ಖಾಸಗಿ ಬಸ್‌ನಿಲ್ದಾಣದ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಹೂವಿನ ವ್ಯಾಪಾರಿಗಳಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಟ್ಟಿದೆ. ಸರಿಯಾದ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗಾಳಿ ಬೆಳಕಿನ ಕೊರತೆ ಇದೆ. ಶೌಚಾಲಯ ವ್ಯವಸ್ಥೆ ಇಲ್ಲ ಎಂದು ದೂರಿದರು.

ವ್ಯಾಪಾರಕ್ಕೆ ಗ್ರಾಹಕರು ಬರುತ್ತಿಲ್ಲ. ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಹಲವರು ಗಾಂಧಿಬಜಾರ್ ಮತ್ತು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಗೆ ಯಾವ ಗ್ರಾಹಕರೂ ಬರುತ್ತಿಲ್ಲ. ಮೊದಲು ಬೀದಿ ಬದಿಯ ಹೂವಿನ ವ್ಯಾಪಾರ ನಿಲ್ಲಿಸಬೇಕು ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಒಂದು ವಾರದ ಒಳಗೆ ನೀರು, ಬೆಳಕಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಹೂವಿನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗೋವಿಂದರಾಜು, ಇದು ತಾತ್ಕಾಲಿಕ ವ್ಯವಸ್ಥೆ, ಪಾಲಿಕೆಯ ವತಿಯಿಂದ ಈ ಮಳಿಗೆಗಳಿಗೆ ಬಾಡಿಗೆ ವಿಧಿಸಿಲ್ಲ. ವಿದ್ಯುತ್ ಬಿಲ್ ಕೂಡ ತಾವೇ ವೈಯುಕ್ತಿಕವಾಗಿ ಕಟ್ಟಿದ್ದೇವೆ. ವ್ಯಾಪಾರಸ್ಥರು ಸ್ವಲ್ಪ ತಾಳ್ಮೆವಹಿಸಬೇಕು. ತ್ಯಾಗ ಮಾಡಬೇಕು. ಒಂದೂವರೆ ವರ್ಷಗಳ ಬಳಿಕ ನೂತನ ಮಲ್ಟಿ ಶಾಪಿಂಗ್ ಸಂಕೀರ್ಣ ಆದ ನಂತರ ಹೂವಿನ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಮಳಿಗೆ ಕೊಡುವ ಲಿಖಿತ ಭರವಸೆ ಪಾಲಿಕೆ ನೀಡಿದೆ ಎಂದರು.

ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಮೆಹಕ್ ಷರೀಫ್, ಶಾಮೀರ್ ಖಾನ್, ಆರ್.ಸಿ. ನಾಯಕ್, ರಂಗನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT