‘ಮೀಸಲಾತಿ ಘೋಷಣೆ ರಾಜಕೀಯ ಷಡ್ಯಂತ್ರ’

ಸೊರಬ: ತಾಲ್ಲೂಕಿನ ಜಿಲ್ಲಾ ಪಂಚಾಯಿತಿಗೆ ಕ್ಷೇತ್ರವಾರು ಮೀಸಲಾತಿ ಘೋಷಣೆ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್ ಆರೋಪಿಸಿದ್ದಾರೆ.
ಈ ಬಾರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಸಮುದಾಯವನ್ನು ಆಧರಿಸಿ ಮೀಸಲಾತಿ ಘೋಷಣೆ ಮಾಡಿಲ್ಲ. ಆನವಟ್ಟಿ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ 3 ಕ್ಷೇತ್ರಗಳಿಗೂ ಮಹಿಳಾ ಮೀಸಲಾತಿ ನೀಡಿ ಪ್ರಬಲ ಪುರುಷ ಅಭ್ಯರ್ಥಿಗಳು ಸ್ಪರ್ಧೆ ಮಾಡದಂತೆ ನೋಡಿಕೊಳ್ಳುವ ಮೂಲಕ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ತಾಲ್ಲೂಕಿನ ಜಡೆ, ಮೂಡಿ ಹಾಗೂ ತತ್ತೂರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಅಧಿಕ ಸಂಖ್ಯೆಯಲ್ಲಿ ಇದ್ದರೂ ಅನುಸೂಚಿತ ಪಂಗಡ ಮಹಿಳೆ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿ ಮಾಡಲಾಗಿದೆ. ಇದರಿಂದ ಪ್ರಬಲ ಸಮುದಾಯ ಚುನಾವಣೆಯಲ್ಲಿ ಸ್ಪರ್ಧಿಸಲು ವ್ಯವಸ್ಥಿತವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕ್ಷೇತ್ರದ ಶಾಸಕರ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
‘ಜಡೆ ಹಾಗೂ ಆನವಟ್ಟಿ ಹೋಬಳಿಗಳಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಾಗಿದ್ದು, ಮಹಿಳಾ ಕ್ಷೇತ್ರವಾಗಿ ಘೋಷಣೆ ಮಾಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಚುನಾವಣಾ ಆಯೋಗ ಕೂಡಲೇ ಕ್ಷೇತ್ರಗಳ ಮರು ಸಮೀಕ್ಷೆ ನಡೆಸಿ ಪ್ರತಿ ಸಮುದಾಯಕ್ಕೂ ಚುನಾವಣೆಯಲ್ಲಿ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕು. ಈಗಾಗಲೇ ಘೋಷಣೆ ಮಾಡಿರುವ ಮೀಸಲಾತಿಯನ್ನು ರದ್ದುಪಡಿಸಿ ಹೊಸ ಮೀಸಲಾತಿ ಘೋಷಿಸಬೇಕು. ಮೀಸಲಾತಿ ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.