ಶನಿವಾರ, ಮಾರ್ಚ್ 25, 2023
25 °C

ಮೀಸಲಾತಿ: ಹಲವರಿಗೆ ಕಹಿ, ಕೆಲವರಿಗೆ ಸಿಹಿ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

ಹೊಸನಗರ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದ ಹಲವು ಮುಖಂಡರಿಗೆ ನಿರಾಸೆಯಾಗಿದೆ.

ಮೂರು ವರ್ಷಗಳಿಂದ ಚುನಾವಣೆ ಎದುರಿಸಲು ನಡೆಸಿಕೊಂಡು ಬಂದಿದ್ದ ಕೆಲ ನಾಯಕರ ರಂಗ ತಾಲೀಮು ವ್ಯರ್ಥವಾಗಿದ್ದು, ಕನಸು ಭಗ್ನವಾಗಿದೆ.

ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ 4 ಸ್ಥಾನ ಮತ್ತು ತಾಲ್ಲೂಕು ಪಂಚಾಯಿತಿ 9 ಸ್ಥಾನಗಳಿವೆ. ಕ್ಷೇತ್ರ ಪುನರ್ ವಿಂಗಡಣೆ
ಯಾದ ಬಳಿಕ ಮೊದಲ ಚುನಾವಣೆ ಇದಾಗಿದೆ. ಕ್ಷೇತ್ರ ವಿಂಗಡಣೆಯಿಂದಲೂ ಸ್ಪರ್ಧಾಂಕಾಂಕ್ಷಿಗಳು ಹೆಚ್ಚಿದ್ದು, ಮೀಸಲಾತಿ ಕೆಲವರಿಗೆ ಸಿಹಿಯಾದರೆ ಹಲವರಿಗೆ ಕಹಿಯಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಕಸಬಾ ಕ್ಷೇತ್ರ: ಸಾಮಾನ್ಯ ಮಹಿಳೆ, ಕೆರೆಹಳ್ಳಿ: ಸಾಮಾನ್ಯ, ಹುಂಚಾ: ಹಿಂದುಳಿದ ವರ್ಗ ಅ ಮಹಿಳೆ ಹಾಗೂ ನಗರ ಕ್ಷೇತ್ರ: ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದೆ.

ಕಸಬಾ (ಕಳೂರು) ಕ್ಷೇತ್ರದಲ್ಲಿ ಬಿಜೆಪಿಯ ಎನ್.ಆರ್. ದೇವಾನಂದ್, ಆಲವಳ್ಳಿ ವೀರೇಶ್, ಕಾಂಗ್ರೆಸ್‌ನಿಂದ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬಿ.ಜಿ. ಚಂದ್ರಮೌಳಿಗೌಡ, ಏರಿಗೆ ಉಮೇಶ್ ಸ್ಪರ್ಧೆ ಬಯಸಿ ಒಂದು ಸುತ್ತಿನ ಓಡಾಟ ಪೂರೈಸಿದ್ದರು.

ಆದರೆ, ಇಲ್ಲಿ ಸಾಮಾನ್ಯ ಮಹಿಳೆ ಮೀಸಲು ಪ್ರಕಟವಾದ ಬೆನ್ನಲ್ಲೇ ಅವರೆಲ್ಲರ ಕನಸು ಭಂಗವಾಗಿದೆ. ಕಲಗೋಡು ರತ್ನಾಕರ್ ಅವರಿಗೆ ಪಕ್ಕದ ಕೆರೆಹಳ್ಳಿ ಕ್ಷೇತ್ರದಲ್ಲಿ ಅವಕಾಶ ಲಭ್ಯವಾಗಿದೆ. ಬಿಜೆಪಿಯ ಆಲುವಳ್ಳಿ ವೀರೇಶ್‌ಗೂ ಪಕ್ಷದ ಟೀಕೆಟು ಲಭ್ಯವಾದರೆ ಸ್ಪರ್ಧೆಗೆ ಅವಕಾಶ ಇದೆ.

ಮಾಜಿ ಸದಸ್ಯ ಸುರೇಶ ಸ್ವಾಮಿರಾವ್ ಹುಂಚ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದರು. ಆದರೆ, ಇಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಮೀಸಲು ಪ್ರಕಟವಾಗಿದೆ. ಅದರಿಂದ ಸುರೇಶ್ ಸ್ವಾಮಿರಾವ್ ಸ್ಪರ್ಧೆಗೆ ಅವಕಾಶ ಇಲ್ಲವಾಗಿದೆ. 

ಹೆಚ್ಚು ಆಕಾಂಕ್ಷಿಗಳು ಕಂಡು ಬಂದಿದ್ದ ನಗರ ಕ್ಷೇತ್ರದಲ್ಲಿ ಅನುಸೂಚಿತ ಜಾತಿ ಮಹಿಳೆಗೆ ಮೀಸಲು ಇದ್ದು, ಪ್ರಬಲ ಆಕಾಂಕ್ಷಿಗಳಾದ ಬಿಜೆಪಿಯ ಕೆ.ವಿ.ಕೃಷ್ಣಮೂರ್ತಿ, ಮಂಜುನಾಥ ಗೌಡ, ಸುಬ್ರಹ್ಮಣ್ಯ ಮತ್ತಿಮನೆ, ಕಾಂಗ್ರೆಸ್ನ ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ವಿದ್ಯಾದರ್ ರಾವ್ ಗುರುಶಕ್ತಿ, ಹಾಲಗದ್ದೆ ಉಮೇಶ್, ರಾಜಾರಾಮ್ ಯಡೂರು ಅವರಿಗೆ ತೀವ್ರ ನಿರಾಸೆ ತಂದಿದೆ.

ತಾಲ್ಲೂಕು ಪಂಚಾಯಿತಿಯಲ್ಲೂ ನಿರೀಕ್ಷೆ ಇಟ್ಟುಕೊಂಡಿದ್ದ ಆಕಾಂಕ್ಷಿಗಳಿಗೆ ಮೀಸಲು ಹಿನ್ನಡೆ ತಂದಿದೆ.

ಆಕಾಂಕ್ಷಿಗಳಿಗೆ ಹುಡುಕಾಟ: ಎಲ್ಲೆಡೆ ಅಭ್ಯರ್ಥಿಗಳಿಗೆ ಹುಡುಕಾಟ ನಡೆದರೆ ನಗರ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಅನುಸೂಚಿತ ಜಾತಿ ಮಹಿಳೆಗೆ ಮೀಸಲಿದ್ದು, ಯಾವ ಪಕ್ಷದಲ್ಲೂ ಅನುಸೂಚಿತ ಜಾತಿಯ ಆಕಾಂಕ್ಷಿಗಳು ಇಲ್ಲವಾಗಿದ್ದಾರೆ. ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತೊಡಗಿವೆ. ಮತ ಸೆಳೆಯಬಲ್ಲ ಅಭ್ಯರ್ಥಿಗಳ ಆಯ್ಕೆಗೆ ಪಕ್ಷಗಳು ಒತ್ತು ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.