ಸಾಗರ: ವೀರಶೈವ ಲಿಂಗಾಯತರನ್ನು ಹಿಂದುಳಿದ ವರ್ಗ 2 ‘ಎ’ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರ ಸೆ. 15ರವರೆಗೆ ಕಾಯುವಂತೆ ಮಾತು ಕೊಟ್ಟಿತ್ತು. ಅಂದಿನ ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರು ನೀಡಿರುವ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಮಲೆನಾಡಿನ ಲಿಂಗಾಯತರನ್ನು 2 ‘ಎ’ ಮೀಸಲಾತಿ ಗುಂಪಿಗೆ ಸೇರಿಸುವ ಸಂಬಂಧ
ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಒಂದು ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಈ ಹಿಂದೆ ನಡೆಸಿದ ಚಳವಳಿಗೆ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ನಮ್ಮ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ ಎಂಬ ವಿಶ್ವಾಸ ಮೂಡಿದೆ’ ಎಂದು ಹೇಳಿದರು.
ಲಿಂಗಾಯತರು ಎಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಈ ಸಮುದಾಯಕ್ಕೆ ಸೇರಿದ ಹಲವು ಪಂಗಡಗಳಲ್ಲಿ ಈಗಲೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪಡೆದ ನಂತರವಷ್ಟೇ ಸೌಲಭ್ಯ ಕಲ್ಪಿಸುವಂತೆ ಒತ್ತಾಯ ಹೇರಲಾಗಿತ್ತು. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವೀರಶೈವ ಲಿಂಗಾಯತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂಬಂಧ ಸೆ. 15ರ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯಾದಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಸತ್ಯಾಗ್ರಹವನ್ನೂ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ಮಲೆನಾಡಿನ ಮಲ್ಲವ ಸಮಾಜದವರಿಗೂ ಹಿಂದುಳಿದ ವರ್ಗ 2 ‘ಎ’ ಸ್ಥಾನಮಾನ ನೀಡಬೇಕು ಎಂದು ನಾವು ಕೇಳದೆ ಇದ್ದರೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವುದು ಈ ಭಾಗದ
ಮಲ್ಲವ ಸಮಾಜದವರಲ್ಲಿ ಹೊಸ ಆಶಾವಾದ ಮೂಡಿಸಿದೆ. ಈ
ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ’ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಗಂಗಾಧರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಪ್ರಮುಖರಾದ ಶೇಖರಪ್ಪ ಗೌಡ, ವೀರರಾಜ ಗೌಡ, ವಿರೂಪಾಕ್ಷಪ್ಪ, ಓಂಕೇಶಪ್ಪ ಗೌಡ, ಇಂದೂಧರ ಒಡೆಯರ್, ಜಗದೀಶ್ ಒಡೆಯರ್, ಎಚ್.ಎಂ.ಶಿವಕುಮಾರ್, ಅಶೋಕ್, ಪ್ರೊ.ವಿಜಯಕುಮಾರ್, ಜಯಶೀಲ ಗೌಡ್ರು, ಈಶ್ವರಪ್ಪ ಗೌಡ್ರು, ಯುವರಾಜ್ ಗೌಡ್ರು ಇದ್ದರು.
ಗೌರಿ ಸೈದೂರು ಪ್ರಾರ್ಥಿಸಿದರು. ಅನಿಲ್ ಕುಮಾರ್ ತಟ್ಟೆಕೊಪ್ಪ ಸ್ವಾಗತಿಸಿದರು. ಗಿರೀಶ್ ಕೆರೆಹಿತ್ಲು ನಿರೂಪಿಸಿದರು.
ಯಾರನ್ನೂ ಮುಖ್ಯಮಂತ್ರಿ ಮಾಡಿ ಎಂದು ಹೇಳಿಲ್ಲ: ಸ್ವಾಮೀಜಿ
ನಮ್ಮ ಹೋರಾಟವೇನಿದ್ದರೂ ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೊಡಿಸಬೇಕು ಎಂಬುದೇ ಹೊರತು ಇಂತಹವರಿಗೆ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ಕೊಡಿ ಎಂಬ ಬೇಡಿಕೆ ಮುಂದಿಟ್ಟಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ವೀರಶೈವ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ಬಂದಿದ್ದೇ ಮಾಧ್ಯಮದ ಮೂಲಕ. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡಿಲ್ಲ’ ಎಂದರು.
‘ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶಿವಪ್ಪನಾಯಕನ, ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರು ಇಡಬೇಕು’ ಎಂದು ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.