ಭಾನುವಾರ, ಏಪ್ರಿಲ್ 18, 2021
24 °C
ಶಿವಯೋಗಾಶ್ರಮ ಆವರಣದಲ್ಲಿ ಸ್ವಾಮೀಜಿ ಪಾರ್ಥಿವ ಶರೀರದ ದರ್ಶನ ಪಡೆದ ಭಕ್ತರು

ಶಿಕಾರಿಪುರ: ಕ್ರಿಯಾ ಸಮಾಧಿಯಲ್ಲಿ ರೇವಣಸಿದ್ಧ ಸ್ವಾಮೀಜಿ ಲೀನ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದ ಪೀಠಾಧ್ಯಕ್ಷ ರೇವಣಸಿದ್ಧ ಸ್ವಾಮೀಜಿ ಬುಧವಾರ ಹಿರಿಯ ರುದ್ರಮುನಿ ಸ್ವಾಮೀಜಿ ಗದ್ದುಗೆ ಪಕ್ಕದ ಕ್ರಿಯಾ ಸಮಾಧಿಯಲ್ಲಿ ಲೀನವಾದರು. ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನೆರವೇರಿದವು.

ಅಂತ್ಯಕ್ರಿಯೆಗೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆಯೊಂದಿಗೆ ರೇವಣಸಿದ್ಧ ಸ್ವಾಮೀಜಿ ಅವರ ಪಾರ್ಥಿವ ಶರೀರರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ಶಿವಯೋಗಾಶ್ರಮ ಆವರಣದಲ್ಲಿ ಸ್ವಾಮೀಜಿ ಪಾರ್ಥಿವ ಶರೀರರವನ್ನು ಭಕ್ತರ ದರ್ಶನಕ್ಕಾಗಿ ಇಡಲಾಗಿತ್ತು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲ ಸಮುದಾಯದವರು ದರ್ಶನ ಪಡೆದರು. ನಂತರ ಶಿವಯೋಗಾಶ್ರಮ ಸಮೀಪವಿರುವ ಮೊದಲ ಸ್ವಾಮೀಜಿ ರುದ್ರಮುನಿ ಶ್ರೀಗಳ ಗದ್ದುಗೆ ಪಕ್ಕದಲ್ಲಿಯೇ ನಿರ್ಮಿಸಿದ್ದ ಕ್ರಿಯಾ ಸಮಾಧಿಯಲ್ಲಿ ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ: ಶಿವಯೋಗಾಶ್ರಮ ಆವರಣದಲ್ಲಿ ರೇವಣಸಿದ್ಧ ಸ್ವಾಮೀಜಿ ಸಂತಾಪ ಸೂಚಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ‘ಶಿವಯೋಗಾಶ್ರಮ ಒಂದು ಪುಣ್ಯದ ನೆಲವಾಗಿದೆ. ಹಿಂದಿನ ರುದ್ರಮುನಿ ಸ್ವಾಮೀಜಿ ಹಾಕಿಕೊಟ್ಟ ಕಾಯಕತತ್ವ ಅಡಿಯಲ್ಲಿ ರೇವಣಸಿದ್ಧ ಸ್ವಾಮೀಜಿ ಶಿವಯೋಗಾಶ್ರಮದ ಪೀಠಾಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆಯಿಸಿ ಶತಮಾನೋತ್ಸವ ಆಚರಿಸುವ ಇಚ್ಛೆಯನ್ನು ಹೊಂದಿದ್ದರು. ಆದರೆ, ಈ ಕಾರ್ಯ ನಡೆಯುವ ಮುನ್ನವೇ ನಮ್ಮನ್ನು ಬಿಟ್ಟು ಅಗಲಿದರು. ಅಧಿವೇಶನ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ಧರಾಜ ಯೋಗೇಂದ್ರ ಸ್ವಾಮೀಜಿ, ‘ರೇವಣಸಿದ್ಧ ಸ್ವಾಮೀಜಿ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಹಾನಗಲ್‌ ಕುಮಾರಸ್ವಾಮಿ ಅವರ ಕನಸಿನಂತೆ ಶಿವಯೋಗಾಶ್ರಮವನ್ನು ಸಮಾಜಮುಖಿಯಾಗಿ ಕೊಂಡೊ ಯ್ದಿದ್ದಾರೆ. ಸ್ವಾಮೀಜಿ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.

ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ‘ರೇವಣಸಿದ್ಧ ಸ್ವಾಮೀಜಿ ಸರಳ ಜೀವನ ನಡೆಸಿದ್ದರು. ಕಾಯಕತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಎಲ್ಲ ಸಮಾಜದವರಿಗೆ ಮಾತೃ ವಾತ್ಸಲ್ಯ ನೀಡುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದರು. ರೇವಣಸಿದ್ಧ ಸ್ವಾಮೀಜಿ ಗುರುಪರಂಪರೆ ಗೆ ಮಾದರಿಯಾಗಿದ್ದಾರೆ’ ಎಂದರು.

ಹೊನ್ನಾಳಿ ಹಿರೇಕಲ್ಮಠದ ಓಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ‘ರೇವಣಸಿದ್ಧ ಸ್ವಾಮೀಜಿ ಕಾಯಕ ಜೀವಿಯಾಗಿ ಸಮಸ್ತ ಭಕ್ತರ ಹೃದಯಕ್ಕೆ ಹತ್ತಿರವಾಗಿ ಬದುಕು ನಡೆಸಿದ್ದಾರೆ. ಸ್ವಾಮೀಜಿ ಶರೀರ ದೂರವಾಗಿದೆಯೇ ಹೊರತು, ಅವರ ನೆನೆಪು ದೂರ ಆಗಿಲ್ಲ. ಸಮಾಜಕ್ಕಾಗಿ ಜೀವನವನ್ನು ಸಮರ್ಪಿಸಿದ್ದಾರೆ’ ಎಂದರು.

ಗದಗಿನ ತೋಂಟದಾರ್ಯ ಮಠದ ಸಿದ್ದರಾಮನಂದ ಸ್ವಾಮೀಜಿ, ಹೊಸಪೇಟೆ ಸಂಗನಬಸವ ಸ್ವಾಮೀಜಿ, ಮೂಕಪ್ಪಶಿವಯೋಗಿ ಮಠದ ವಿರೂಪಾಕ್ಷ ಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಹುಕ್ಕೇರಿ ಸದಾಶಿವ ಸ್ವಾಮೀಜಿ, ಜಡೆ ಸಂಸ್ಥಾನ ಮಹಾಂತ ಸ್ವಾಮೀಜಿ, ಕಲಬುರ್ಗಿ ಸ್ವಾಮೀಜಿ, ಘಟಪ್ರಭಾ ಸ್ವಾಮೀಜಿ, ತೀರ್ಥಹಳ್ಳಿ ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ, ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ.ಈರೇಶ್, ಜಿಲ್ಲಾ ಕಾರ್ಯದರ್ಶಿ ಕೊಟ್ರೇಶಪ್ಪ, ಶಿವಯೋಗಾಶ್ರಮ ಭಕ್ತರಾದ ಚುರ್ಚಿಗುಂಡಿ ರುದ್ರಮುನಿ, ಎಸ್.ಬಿ.ಮಠದ್, ರುದ್ರಪ್ಪಯ್ಯ, ವಿಶ್ವನಾಥಯ್ಯ ರಕ್ಕಸಗಿ ಮಠ, ಪ್ರಭುಶಾಸ್ತ್ರಿ, ಕುಮಾರಸ್ವಾಮಿ ಹಿರೇಮಠ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.