ಮಂಗಳವಾರ, ಮೇ 24, 2022
25 °C
ನಿತ್ಯ 6 ತಾಸು ಕೆಲಸ ನಿಗದಿ, ಕೆಲಸದ ಮೇಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಣ್ಗಾವಲು

ಗ್ರಾಮೀಣ ಗ್ರಂಥಾಲಯಗಳಿಗೆ ಪಂಚಾಯಿತಿಯ ಬಲ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಗ್ರಾಮೀಣ ಜನರಿಗೆ ಪತ್ರಿಕೆ, ಪುಸ್ತಕಗಳ ಅಭಿರುಚಿ ಮೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದ ಗ್ರಾಮೀಣ ಗ್ರಂಥಾಲಯಗಳು ದಶಕಗಳಿಂದ ಈಚೆಗೆ ದಿಕ್ಕು ತಪ್ಪಿದ್ದವು. ಮೂಲ ಉದ್ದೇಶಗಳಿಂದ ವಿಮುಖವಾಗಿ ಕಾಟಾಚಾರಕ್ಕೆ ಎಂಬಂತೆ ಇದ್ದ ಅವುಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಿದ ನಂತರ ಮತ್ತೆ ಹೊಸ ದಿಕ್ಕಿನತ್ತ ಸಾಗುತ್ತಿವೆ. ಹಲವು ಪಂಚಾಯಿತಿಗಳು ಹೊಸರೂಪ ಪಡೆದರೆ ಕೆಲವು ಇನ್ನೂ ಹಳೆಯ ಸ್ಥಿತಿಯಲ್ಲೇ ಇವೆ.

ಒಂದು ಕಾಲದಲ್ಲಿ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಗ್ರಂಥಾಲಯಗಳನ್ನು ನಾಲ್ಕು ದಶಕಗಳ ಹಿಂದೆ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗಿತ್ತು. ಗ್ರಾಮ ಪಂಚಾಯಿತಿ ಕಟ್ಟಡದ ಒಂದು ಕೊಠಡಿಯಲ್ಲಿ ಆರಂಭವಾದ ಈ ಗ್ರಂಥಾಲಯಗಳು ಮೊದಲು ವಿವಿಧ ಪತ್ರಿಕೆಗಳನ್ನು ತರಿಸಿ, ಅಲ್ಲಿನ ಜನರಿಗೆ ಸುದ್ದಿಗಳನ್ನು ಓದಿಸುವುದಕ್ಕೆ ಸೀಮಿತವಾಗಿದ್ದವು. ನಂತರ ಒಂದು ಪುಸ್ತಕಗಳಿಗೆ ಅಲ್ಲಿ ಜಾಗ ನೀಡಲಾಯಿತು.

ಪ್ರತಿ ಗ್ರಂಥಾಲಯಕ್ಕೂ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಯಿತಾದರೂ ಕೊಡುತ್ತಿದ್ದ ಗೌರವ ಸಂಭಾವನೆ ಅತ್ಯಂತ ಕಡಿಮೆ ಇದ್ದ ಕಾರಣ ಪೂರ್ವಕಾಲಿಕವಾಗಿ ಅವರು ಬಾಗಿಲು ತೆರೆಯುತ್ತಿರಲಿಲ್ಲ. ಅಲ್ಲದೇ, ಜಿಲ್ಲಾ ಕೇಂದ್ರದಲ್ಲಿರುವ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರ ಮೇಲುಸ್ತುವಾರಿಯಲ್ಲಿ ಇದ್ದವು. ಜಿಲ್ಲೆಯ ಎಲ್ಲ ಗ್ರಂಥಾಲಯಕ್ಕೂ ನಿಯಮಿತವಾಗಿ ಭೇಟಿ ಕೊಟ್ಟು ಪರಿಶೀಲನೆ ನಡೆಸಲೂ ಕಷ್ಟವಾಗುತ್ತಿತ್ತು. ಇದರಿಂದ ಸಮಯಕ್ಕೆ ಸರಿಯಾಗಿ ಗ್ರಂಥಾಲಯಗಳ ಬಾಗಿಲು ತೆರೆಯುತ್ತಲೇ ಇರಲಿಲ್ಲ. ಇದರಿಂದ ಗ್ರಾಮೀಣ ಜನರು ವಿಮುಖವಾಗಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ 260 ಪಂಚಾಯಿತಿಗಳಲ್ಲಿ ಗ್ರಾಮೀಣ ಗ್ರಂಥಾಲಯಗಳು ಇವೆ. ಎಲ್ಲ ಗ್ರಂಥಾಲಯಗಳ ಮೇಲುಸ್ತುವಾರಿ, ಪುಸ್ತಕ, ಪತ್ರಿಕೆ ಖರೀದಿಗೆ ಅಗತ್ಯವಾದ ಹಣಕಾಸು ಪೂರೈಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಬಾಗಿಲು ತೆರೆದಿರುತ್ತವೆ. ಗ್ರಾಮ ಪಂಚಾಯಿತಿ ಸಂಗ್ರಹಿಸುವ ಕರದಲ್ಲಿ ಶೇ 6ರಷ್ಟು ಅನುದಾನವನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ನೀಡಬೇಕಿದೆ. ಮೇಲ್ವಿಚಾರಕರಿಗೆ ನೀಡುವ ₹ 12 ಸಾವಿರ ಗೌರವಧನವನ್ನು ಸರ್ಕಾರ  ಗ್ರಂಥಾಲಯ ಇಲಾಖೆ ಮೂಲಕ ಬಿಡುಗಡೆ ಮಾಡುತ್ತಿದೆ.

ಮೇಲ್ವಿಚಾರಕ ಹುದ್ದೆ ಖಾಲಿಯಾದರೆ ಭರ್ತಿ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಸಿಇಒ, ಉಪ ಕಾರ್ಯದರ್ಶಿ, ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಹಾಗೂ ಆಯಾ ಪಂಚಾಯಿತಿ ಪಿಡಿಒ ಅವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಲಾಗಿದೆ.

ಒಂದು ಕಾಲೇಜಿನಲ್ಲಿ ಇರುವ ರೀತಿ ಎಲ್ಲ ಸೌಲಭ್ಯ ಒಳಗೊಂಡ ಗ್ರಂಥಾಲಯವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಉನ್ನತೀಕರಣಗೊಳಿಸಲಾಗುತ್ತಿದೆ. ಕಪಾಟಿನಲ್ಲಿರುವ ಪುಸ್ತಕಗಳು ಸುಲಭವಾಗಿ ಕೈಗೆಟುಕಲು ಅನುಕೂಲವಾಗುವಂತೆ ಕಂಪ್ಯೂಟರ್‌ನಲ್ಲಿ ಅಗತ್ಯ ಇರುವ ‍ಪುಸ್ತಕಗಳ ಪರಿಶೀಲನಾ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಂಥಾಲಯದಲ್ಲೂ ಕನಿಷ್ಠ 2 ಸಾವಿರ ಪುಸ್ತಕಗಳು ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

ಕಾಯಂಗೆ ಮೇಲ್ವಿಚಾರಕರ ಮೊರೆ

ಜಿಲ್ಲೆಯ 260 ಗ್ರಾಮೀಣ ಗ್ರಂಥಾಲಯಗಳಲ್ಲಿ ನಾಲ್ಕು ದಶಕಗಳಿಂದ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ತಮ್ಮನ್ನು ಕಾಯಂ ಮಾಡಬೇಕು ಹಾಗೂ ಮೂಲವೇತನವನ್ನು ನೀಡಬೇಕು ಎಂಬುದು ಮೇಲ್ವಿಚಾರಕರ ಬೇಡಿಕೆ.

‘ಸುಮಾರು 30 ವರ್ಷಗಳಿಂದ ಗ್ರಂಥಾಲಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದೇನೆ. ಕೆಲಸಕ್ಕೆ ಸೇರಿದಾಗ 1992ರಲ್ಲಿ ₹ 300 ಗೌರವಧನ ನೀಡುತ್ತಿದ್ದರು. 1994ರಲ್ಲಿ ₹ 500, 1998ರಲ್ಲಿ ₹ 700, 2006ರಲ್ಲಿ ₹ 1 ಸಾವಿರ, 2008ರಲ್ಲಿ ₹ 2,500, 2012ರಲ್ಲಿ
₹ 5,500, 2016ರಲ್ಲಿ ₹ 7 ಸಾವಿರ, 2021ರಲ್ಲಿ ಗ್ರಾಮ ಪಂಚಾಯಿತಿ ಅಡಿ ಬಂದಮೇಲೆ 6 ತಾಸು ಸಮಯ ನಿಗದಿ ಮಾಡಿ ₹ 12 ಸಾವಿರ ಗೌರವಧನ ನೀಡುತ್ತಿದ್ದಾರೆ. ಗ್ರಂಥಾಲಯ ಮೇಲ್ವಿಚಾರಕರನ್ನು ಕಾಯಂ ನೇಮಕಾತಿ ಮಾಡಬೇಕು ಹಾಗೂ ಮೂಲವೇತನ ನೀಡಬೇಕು‘ ಎಂದು ಆಗ್ರಹಿಸುತ್ತಾರೆ ಮಾರವಳ್ಳಿ ಗ್ರಂಥಾಲಯ ಮೇಲ್ವಿಚಾರಕ ಅಶೋಕ್.

ಮೊಬೈಲ್‌ ಬಳಕೆಯಿಂದ ಓದು ದೂರ

ನಿರಂಜನ ವಿ.

ತೀರ್ಥಹಳ್ಳಿ: ಓದುgರಿಗೆ ಅಂತರ್ಜಾಲ ಸೇವೆ ಲಭ್ಯವಿದ್ದರೂ ಗ್ರಾಮೀಣ ಪ್ರದೇಶದ ಗ್ರಂಥಾಲಯ ಬಳಕೆ ಜನರಿಂದ ದೂರ ಸಾಗುತ್ತಿದೆ.

ಕೋವಿಡ್‌ ನಂತರ ಮೊಬೈಲ್‌ ಬಳಕೆ ಗಣನೀಯವಾಗಿ ಹೆಚ್ಚಳವಾಗಿದೆ. ಕ್ಷಣ ಮಾತ್ರದಲ್ಲಿ ಮಾಹಿತಿ ಲಭ್ಯವಿರುವ ಮೊಬೈಲ್‌ನಿಂದಾಗಿ ಪುಸ್ತಕದೊಡಗಿನ ಸಂಬಂಧ ಕಳಚುತ್ತಿದೆ.

ಕೊರೊನಾಕ್ಕಿಂತ ಮೊದಲು ಗ್ರಂಥಾಲಯಕ್ಕೆ 300ಕ್ಕೂ ಹೆಚ್ಚು ಜನರು ಬರುತ್ತಿದ್ದರು. ಅದೀಗ 100ರಿಂದ 150ಕ್ಕೆ ಇಳಿಕೆ ಕಂಡಿದೆ. ದಿನವೊಂದಕ್ಕೆ 100 ಪುಸ್ತಕಗಳು ಓದುಗರು ಪಡೆಯುತ್ತಿದ್ದರು. ಈಗ 40ಕ್ಕೆ ಇಳಿಮುಖವಾಗಿದೆ. ತಾಲ್ಲೂಕಿನ ಗ್ರಂಥಾಲಯಗಳಲ್ಲಿ ಸುಮಾರು 1,48,470 ಲಕ್ಷ ಪುಸ್ತಕಗಳು ಇವೆ. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 46,577 ಸಾವಿರ ಪುಸ್ತಕಗಳಿವೆ. 30 ಗ್ರಾಮ ಪಂಚಾಯಿತಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ತಯಾರಿ ನಡೆಸುತ್ತಿದ್ದಾರೆ. ಕೆಎಎಸ್‌, ಐಎಎಸ್‌, ಐಪಿಎಸ್‌, ಎಸ್‌ಡಿಎ, ಎಫ್‌ಡಿಎ ಮುಂತಾದ ಪರೀಕ್ಷೆಗಳಿಗಾಗಿ ಹೆಚ್ಚಿನ ಪುಸ್ತಕ ಪಡೆಯುತ್ತಿದ್ದಾರೆ. ತೀರ ಗ್ರಾಮೀಣ ಪ್ರದೇಶಗಳಾದ ಹೊನ್ನೇತಾಳು, ತ್ರಿಯಂಬಕಪುರ ಪಂಚಾಯಿತಿ ಮಟ್ಟದಲ್ಲಿ ಕಡಿಮೆ ಬಳಕೆಯಲ್ಲಿದೆ.

ಹೆಚ್ಚಿದ ಇ-ಓದು: ಇ-ಓದು ಹೆಚ್ಚಿನ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ತಾಲ್ಲೂಕಿನಲ್ಲಿ 900ಕ್ಕೂ ಹೆಚ್ಚು ಸಕ್ರಿಯ ಓದುಗರಿದ್ದಾರೆ. ಸಮಯದ ನಿರ್ಬಂಧವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ಓದುಗರು ತಮ್ಮ ಕಂಪ್ಯೂಟರ್‌, ಮೊಬೈಲ್‌ಗಳ ಮೂಲಕ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ.

ಇನ್ನಷ್ಟು ಸೌಲಭ್ಯಗಳ ನಿರೀಕ್ಷೆ

ಕೆ.ಎನ್. ಶ್ರೀಹರ್ಷ

ಭದ್ರಾವತಿ: ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳಲ್ಲಿ 37ರಲ್ಲಿ ಗ್ರಂಥಾಲಯ ವ್ಯವಸ್ಥೆ ಇದ್ದರೂ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ. 

‘ಪಂಚಾಯಿತಿ ಗ್ರಂಥಾಲಯವನ್ನು ಈಗ ಪಂಚಾಯತ್ ರಾಜ್ ಇಲಾಖೆಗೆ ವಹಿಸಿರುವ ಕಾರಣ ಗ್ರಂಥಾಲಯ ಮೇಲ್ವಿಚಾರಕರಿಗೆ ವೇತನ ನೇರವಾಗಿ ಪಂಚಾಯಿತಿ ಮೂಲಕ ವಿತರಣೆಯಾಗಿದೆ’ ಎಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿರಕಾರ ಸಂಘದ ಗೌರವಾಧ್ಯಕ್ಷ ಡಿ. ಮಹೇಶ್ವರನಾಯಕ್ ಹೇಳಿದರು.

ಪಂಚಾಯತ್ ಇಲಾಖೆಗೆ ಸೇರ್ಪಡೆಯಾದ ನಂತರ ಒಂದಿಷ್ಟು ಅಭಿವೃದ್ಧಿಯಾಗಿವೆ. ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಎಂದು ನಾಮಕರಣ ಆಗಿರುವುದು ಒಂದಿಷ್ಟು ಹೈಟೆಕ್ ಸ್ಪರ್ಶ ಸಿಕ್ಕಂತಾಗಿದೆ ಎನ್ನುತ್ತಾರೆ.

ವಿದ್ಯಾರ್ಥಿಗಳು ಹಾಗೂ ನಾಗರಿಕರು ಅವರಿಗೆ ಅಗತ್ಯ ಇರುವ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಗ್ರಂಥಾಲಯದ ಸಮಯದಲ್ಲೂ ಎರಡು ಗಂಟೆ ಹೆಚ್ಚಳವಾಗಿದೆ. ಜತೆಗೆ 5ರಿಂದ 10ನೇ ತರಗತಿ ತನಕ ಪಠ್ಯಪುಸ್ತಕವನ್ನು ಸಹ ಇಡಬೇಕು ಎಂದು ನಿರ್ದೇಶನ ಇರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎನ್ನುತ್ತಾರೆ ಮಹೇಶ್ವರ ನಾಯಕ.

‘30 ವರ್ಷಗಳಿಂದ ಕೆಲಸ ಮಾಡುತ್ತಿರುವ ಮೇಲ್ವಿಚಾರಕರಿದ್ದಾರೆ. ನಮಗೆ ಎಂಟು ಗಂಟೆಗಳ ಕೆಲಸ ನೀಡುವ ಮೂಲಕ ಕನಿಷ್ಠ ವೇತನ ಜಾರಿ ಮಾಡುವ ಜತೆಗೆ ಸೇವಾಭದ್ರತೆ ನೀಡಬೇಕು’ ಎಂದು ಒತ್ತಾಯಿಸಿದರು ಅವರು.

1987ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಮಂಡಲಕ್ಕೊಂದು ಗ್ರಂಥಾಲಯ ಎಂದು ಆರಂಭಿಸಿದ್ದರು. ಮತ್ತಷ್ಟು ಉನ್ನತೀಕರಣ ಮಾಡಿದಲ್ಲಿ ಎಲ್ಲಾ ರೀತಿಯ ಸದುಪಯೋಗ ಮಾಡಿಕೊಳ್ಳಲು ನಾಗರಿಕರಿಗೆ ನೆರವಾಗಲಿದೆ.
ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿ ಇರುವ ಕಾರಣ ಗ್ರಂಥಾಲಯ ಸಿಬ್ಬಂದಿ ನಿಯಮಬಾಹಿರವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲೋ ಕೆಲವೊಂದು ಕಡೆ ನಾಗರಿಕರ ವಿರೋಧ ಇದ್ದರೂ ಈಗ ಸಾಕಷ್ಟು ಬದಲಾವಣೆ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಹಲವು ಗ್ರಂಥಾಲಯಗಳಿಗೆ ಕಟ್ಟಡವಿಲ್ಲ

ಎಂ.ರಾಘವೇಂದ್ರ

ಸಾಗರ: ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳು ಇದ್ದರೂ ಬಹುತೇಕ ಗ್ರಾಮೀಣ ಗ್ರಂಥಾಲಯಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ.

ಇಲ್ಲಿನ ಗ್ರಂಥಾಲಯಗಳಲ್ಲಿ ಸರಾಸರಿ 2 ಸಾವಿರದಿಂದ 5 ಸಾವಿರದವರೆಗೂ ಪುಸ್ತಕಗಳು ಇದ್ದರೂ ನಿರ್ವಹಿಸುವ ಅನುಕೂಲಗಳೇ ಇಲ್ಲ. ಹಲವು ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸುಸಜ್ಜಿತ ಕಟ್ಟಡ ಇಲ್ಲ. ಕಟ್ಟಡವಿದ್ದರೂ ಪೀಠೋಪಕರಣಗಳು ಇಲ್ಲದೆ ಪುಸ್ತಕಗಳನ್ನು ಕಾಪಾಡಿಕೊಳ್ಳುವುದೇ ಮೇಲ್ವಿಚಾರಕರಿಗೆ ಸವಾಲಾಗಿದೆ. ಡಿಜಿಟಲೀಕರಣ ವ್ಯವಸ್ಥೆ ಜಾರಿಗೊಳ್ಳುತ್ತಿದ್ದರೂ ಹಲವು ಗ್ರಂಥಾಲಯಗಳಿಗೆ ಹಳೆಯ ಕಂಪ್ಯೂಟರ್‌ ಪೂರೈಸಲಾಗಿದೆ. ಇಂಟರ್‌ನೆಟ್ ಸಮಸ್ಯೆ ಗ್ರಾಮೀಣ ಗ್ರಂಥಾಲಯಗಳನ್ನು ಕಾಡುತ್ತಿದೆ. ವಿದ್ಯುತ್ ಕೊರತೆ ಗ್ರಂಥಾಲಯಗಳ ದುಸ್ಥಿತಿಗೆ ಕಾರಣವಾಗಿದೆ. ಗ್ರಂಥಾಲಯದ ಮೇಲ್ವಿಚಾರಕರಿಗೆ 3-4 ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿದೆ. ಅದನ್ನು ಪಡೆಯಲೂ ಹರಸಾಹಸಪಡಬೇಕಿದೆ.

ವಿದ್ಯಾರ್ಥಿಗಳಿಗೆ ವರವಾದ ಪುಸ್ತಕಗಳು

ಪಾವನ ನೀಚಡಿ

ತ್ಯಾಗರ್ತಿ: ಸರ್ಕಾರದ ಗ್ರಾಮೀಣ ಗ್ರಂಥಾಲಯ ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೆಚ್ಚು ಸಹಕಾರಿಯಾಗಿದೆ.

ಗ್ರಾಮೀಣ ಗ್ರಂಥಾಲಯಗಳಲ್ಲಿ ಕಥೆ, ಕಾದಂಬರಿ, ದೈನಂದಿನ ಪತ್ರಿಕೆ, ವಾರ, ಮಾಸಿಕ ಪತ್ರಿಕೆಗಳು ದೊರಕುತ್ತಿವೆ. ಪ್ರತಿನಿತ್ಯ ಜನರು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಚರಿತ್ರೆ, ಸಾಮಾಜಿಕ, ಪತ್ತೇದಾರಿ ಕಥೆ ಕಾದಂಬರಿಗಳ ಪುಸ್ತಕಗಳನ್ನು ಪ್ರಾರಂಭಿಕ ದಿನಗಳಲ್ಲಿ ಒಮ್ಮೆ ಮಾತ್ರ ಪೂರೈಸಿದ್ದು, ಇದುವರೆಗೂ ಹಳೆಯ ಪುಸ್ತಕವನ್ನೇ ಜನರು ಓದುವಂತಾಗಿದೆ.

ತ್ಯಾಗರ್ತಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು ಯೋಜನೆಯಡಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು ಸದಸ್ಯತ್ವ ಪಡೆದಿದ್ದಾರೆ. 200ಕ್ಕೂ ಹೆಚ್ಚು ಜನರು ಸಾಮಾನ್ಯ ಸದಸ್ಯತ್ವ ಹೊಂದಿದ್ದಾರೆ. ಪ್ರತಿ ಸೋಮವಾರ ರಜೆ ಇರುತ್ತದೆ. ಈ ಭಾಗದ ಜನರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ತ್ಯಾಗರ್ತಿ ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆ ಇದೆ. ಪಶುಸಂಗೋಪನಾ ಇಲಾಖೆಯ ಹಳೆಯ ಕಟ್ಟಡವನ್ನು ಗ್ರಾಮ ಪಂಚಾಯಿತಿಯಿಂದ ದುರಸ್ತಿಗೊಳಿಸಲಾಗಿದೆ. ಕಂಪ್ಯೂಟರ್, ಇಂಟರ್‌ನೆಟ್‌ ಸೌಲಭ್ಯಗಳನ್ನು ದೊರಕಿಸಲಾಗಿದೆ. ಹೆಚ್ಚಿನ ಪೀಠೋಪಕರಣ ಹಾಗೂ ಪುಸ್ತಕಗಳನ್ನು ನೀಡಲು 14ನೇ ಹಣಕಾಸಿನಲ್ಲಿ ಹಣ ಮೀಸಲಿಡಲಾಗಿದೆಎಂದು ತ್ಯಾಗರ್ತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಾನಾಯ್ಕ್ ಹೇಳಿದರು.

ಕೋವಿಡ್‌ ನಂತರ ಪುಸ್ತಕ ಎರವಲು ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ರಾಘವೇಂದ್ರ, ಗ್ರಂಥಾಲಯ ಅಧಿಕಾರಿ, ತೀರ್ಥಹಳ್ಳಿ

ಸ್ಥಳೀಯ ಜನರು ಹೊಸಹೊಸ ಕಥೆ, ಕಾದಂಬರಿಗಳನ್ನು ಓದಲು ಬಯಸುತ್ತಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಯಶೋದಾ, ಗ್ರಂಥಾಲಯದ ಮೇಲ್ವಿಚಾರಕಿ, ತ್ಯಾಗರ್ತಿ

ಗ್ರಾಮೀಣ ಜನರನ್ನು ಡಿಜಟಲೀಕರಣದತ್ತ ತೆಗೆದುಕೊಂಡು ಹಾಗೂ ಅರಿವು ಮೂಡಿಸಲು ಸಹಕಾರಿಯಾಗಿದೆ.
ಇಸಾಕ್, ಉಪಾಧ್ಯಕ್ಷ, ತ್ಯಾಗರ್ತಿ ಗ್ರಾ. ಪಂ.

ಪ್ರತಿ ಪಂಚಾಯಿತಿಯಲ್ಲಿ ಗ್ರಂಥಾಲಯ ವ್ಯವಸ್ಥೆ ಇದ್ದರೂ, ನಾಮಕಾವಾಸ್ಥೆಯಂತಿವೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸರ್ಕಾರ ಪ್ರತಿ ಗ್ರಾಮಕ್ಕೂ ಗ್ರಂಥಾಲಯ ತೆರೆಯಬೇಕು. ದೇವಾಲಯಕ್ಕೆ ದುಂದುವೆಚ್ಚ ಮಾಡುವ ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡಬೇಕು.

ವೀರೇಶ್, ರೈತ ಸಂಘದ ಮುಖಂಡ, ಅರೆಬಿಳಚಿ

ಗ್ರಂಥಾಲಯದಿಂದ ಪುಸ್ತಕಗಳ ಓದುವ ಅಭ್ಯಾಸ ಬೆಳೆಸಿಕೊಂಡು ಹಿಂದಿನ ಚರಿತ್ರೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.

ವಿನಾಯಕ, ಓದುಗ, ತ್ಯಾಗರ್ತಿ

ಪಂಚಾಯಿತಿ ಅಧೀನಕ್ಕೆ ಗ್ರಂಥಾಲಯಗಳನ್ನು ನೀಡಿದ ಮೇಲೆ ರಜಾ ದಿನಗಳನ್ನು ಒಂದು ದಿನವೂ ಬಾಗಿಲು ಹಾಕಲು ಅವಕಾಶ ನೀಡಿಲ್ಲ. ಅಗತ್ಯವಿರುವ ಪುಸ್ತಕ, ಪತ್ರಿಕೆ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಎಸ್‌.ಜಿ. ಪರಮೇಶ್ವರಪ್ಪ,ಪಿಡಿಒ, ಪುರದಾಳು ಪಂಚಾಯಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು